Home ಇನ್ನಷ್ಟು ಕೋರ್ಟು - ಕಾನೂನು ಡಿಜಿಟಲ್ ಬಂಧನ ಹಗರಣಗಳ ಕುರಿತು ಸಿಬಿಐ ತನಿಖೆ | ತನಿಖೆಗೆ ಎಲ್ಲಾ ರಾಜ್ಯಗಳು ಅನುಮತಿಸಬೇಕು: ಸುಪ್ರೀಂ...

ಡಿಜಿಟಲ್ ಬಂಧನ ಹಗರಣಗಳ ಕುರಿತು ಸಿಬಿಐ ತನಿಖೆ | ತನಿಖೆಗೆ ಎಲ್ಲಾ ರಾಜ್ಯಗಳು ಅನುಮತಿಸಬೇಕು: ಸುಪ್ರೀಂ ಕೋರ್ಟ್ ಆದೇಶ

0

ದೆಹಲಿ ಡಿಜಿಟಲ್ ಬಂಧನಗಳಿಗೆ (Digital Arrests) ಸಂಬಂಧಿಸಿದ ಹಗರಣಗಳ ಕುರಿತು ದೇಶಾದ್ಯಂತ ಸಮಗ್ರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ (CBI) ಆದೇಶಿಸಿದೆ. ಅಷ್ಟೇ ಅಲ್ಲದೆ, ಸೈಬರ್ ಅಪರಾಧಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆಯನ್ನು (AI) ಏಕೆ ಬಳಸುತ್ತಿಲ್ಲ ಎಂದು ನ್ಯಾಯಾಲಯವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಪ್ರಶ್ನಿಸಿದೆ.

ಡಿಜಿಟಲ್ ಬಂಧನಗಳು ದೇಶಾದ್ಯಂತ ಗಂಭೀರ ಆತಂಕಕಾರಿಯಾಗಿ ಪರಿಣಮಿಸಿವೆ. ಸೈಬರ್ ಅಪರಾಧಿಗಳು ತಾವು ಪೊಲೀಸರು, ನ್ಯಾಯಾಲಯದ ಅಧಿಕಾರಿಗಳು ಅಥವಾ ಸರ್ಕಾರಿ ತನಿಖಾ ಸಂಸ್ಥೆಗಳ ಸಿಬ್ಬಂದಿ ಎಂದು ಹೇಳಿಕೊಂಡು, ಆಡಿಯೋ ಅಥವಾ ವೀಡಿಯೊ ಕರೆಗಳ ಮೂಲಕ ಸಂತ್ರಸ್ತರನ್ನು ಬೆದರಿಸುತ್ತಿದ್ದಾರೆ ಎಂದು ದೇಶಾದ್ಯಂತ ವ್ಯಾಪಕ ದೂರುಗಳು ಬರುತ್ತಿವೆ. ಡಿಜಿಟಲ್ ಬಂಧನದ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಮಾಡಲು ಸಂತ್ರಸ್ತರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಹಲವೆಡೆ ದೂರುಗಳು ದಾಖಲಾಗಿವೆ.

ಮುಖ್ಯ ನ್ಯಾಯಮೂರ್ತಿ (CJI) ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಜೊಯ್ಮಾಲ ಬಾಗ್ಚಿ ಅವರಿದ್ದ ಪೀಠವು, ಡಿಜಿಟಲ್ ಬಂಧನ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡುವಂತೆ ಪ್ರತಿಪಕ್ಷಗಳು ಆಡಳಿತ ನಡೆಸುವ ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದೆ.

ಸೈಬರ್ ವಂಚನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಪರಾಧಿಗಳು ಬಳಸಿದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (AI) ಅಥವಾ ಮೆಷಿನ್ ಲರ್ನಿಂಗ್ (ML) ತಂತ್ರಜ್ಞಾನವನ್ನು ಏಕೆ ಬಳಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿ ನ್ಯಾಯಪೀಠವು ಆರ್‌ಬಿಐಗೆ ನೋಟಿಸ್ ಜಾರಿ ಮಾಡಿದೆ.

ಹರಿಯಾಣದ ವೃದ್ಧ ದಂಪತಿ ಸಲ್ಲಿಸಿದ್ದ ದೂರಿನ ಮೇಲಿನ ಎಫ್‌ಐಆರ್ ಅನ್ನು ಸ್ವಯಂ ಪ್ರೇರಿತವಾಗಿ (Suo Motu) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮುಖ್ಯವಾಗಿ ವೃದ್ಧರೇ ಸೈಬರ್ ಅಪರಾಧಿಗಳ ಗುರಿಯಾಗುತ್ತಿದ್ದಾರೆ ಮತ್ತು ಅವರ ಕಷ್ಟಾರ್ಜಿತ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಡಿಜಿಟಲ್ ಬಂಧನ ಪ್ರಕರಣಗಳ ತನಿಖೆಯಲ್ಲಿ ಸಿಬಿಐಗೆ ವಿವರಗಳನ್ನು ನೀಡಿ ಸಹಕರಿಸುವಂತೆ ಐಟಿ ಸಂಬಂಧಿತ ಸಂಸ್ಥೆಗಳಿಗೂ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸೈಬರ್ ಅಪರಾಧಗಳ ತನಿಖೆಯಲ್ಲಿ ಸಿಬಿಐಗೆ ಉತ್ತಮವಾಗಿ ಸಹಕರಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (UT) ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಸೈಬರ್ ಕ್ರೈಮ್ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸುವಂತೆ ನ್ಯಾಯಪೀಠವು ಸೂಚಿಸಿದೆ.

ಸೈಬರ್ ಅಪರಾಧ ಪ್ರಕರಣಗಳ ಕುರಿತು ತಾವು ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲು ಕೇಂದ್ರ ಗೃಹ ವ್ಯವಹಾರಗಳು, ಟೆಲಿಕಾಂ, ಹಣಕಾಸು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಗಳು ಸೇರಿದಂತೆ ವಿವಿಧ ಕೇಂದ್ರ ಸಚಿವರ ಅಭಿಪ್ರಾಯಗಳನ್ನು ಸಂಗ್ರಹಿಸಿ ತಮ್ಮ ಮುಂದೆ ಇಡುವಂತೆ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.

ಅಲ್ಲದೆ, ಜನರನ್ನು ವಂಚಿಸಲು ಅಪರಾಧಿಗಳು ಬಳಸುತ್ತಿರುವ ನಕಲಿ ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ಅವರಿಗೆ ಸಹಕರಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ಮೇಲೂ ತನಿಖೆ ನಡೆಸುವಂತೆ ನ್ಯಾಯಪೀಠವು ಸಿಬಿಐಗೆ ಆದೇಶಿಸಿದೆ.

You cannot copy content of this page

Exit mobile version