Tuesday, July 29, 2025

ಸತ್ಯ | ನ್ಯಾಯ |ಧರ್ಮ

ನ್ಯೂಸ್‌ಕ್ಲಿಕ್‌: ಪ್ರಬೀರ್ ಅವರ ನಿವಾಸ ಮತ್ತು ಕಚೇರಿಯನ್ನು ಶೋಧಿಸಿದ ಸಿಬಿಐ

ನವದೆಹಲಿ: ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಮೇಲೆ ಕೇಂದ್ರ ಸರ್ಕಾರ ದಾಳಿಯನ್ನು ತೀವ್ರಗೊಳಿಸಿದೆ. ಈ ಹಿಂದೆ ಇಡಿ ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ತನಿಖೆ ನಡೆಸಿತ್ತು. ಆದರೆ ನ್ಯಾಯಾಲಯದ ಮುಂದೆ ಒಂದೇ ಒಂದು ಆರೋಪ ಸಾಬೀತಾಗಿಲ್ಲ.

ಇದಾದ ಬಳಿಕ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ಈಗ ಸಿಬಿಐ ಸರದಿ. ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿದೆ. ಈ ಸಂಸ್ಥೆಯ ವಿರುದ್ಧ ಸಿಬಿಐ ಇತ್ತೀಚೆಗೆ ಪ್ರಕರಣ ದಾಖಲಿಸಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಸಿಬಿಐ ಆರೋಪಿಸಿದೆ.

ಬುಧವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ಪ್ರಬೀರ್ ಅವರ ನಿವಾಸ ಮತ್ತು ಕಚೇರಿಗೆ ಆಗಮಿಸಿ ಏಕಕಾಲದಲ್ಲಿ ಶೋಧ ನಡೆಸಿದರು. ಇತ್ತೀಚೆಗಷ್ಟೇ ಪ್ರಬೀರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿತ್ತು. ನ್ಯೂಸ್ ಕ್ಲಿಕ್ ಗೆ ಚೀನಾದಿಂದ ಹಣ ಬಂದಿದೆ ಎಂಬ ಆರೋಪದ ಮೇಲೆ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಇತ್ತೀಚೆಗೆ ಪ್ರಬೀರ್ ನಿವಾಸ ಸೇರಿದಂತೆ ಆ ಸಂಸ್ಥೆಯ ಕಚೇರಿ, ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರ ಮನೆಗಳಲ್ಲಿ ಶೋಧ ನಡೆಸಿದ್ದರು.

ನಂತರ, ಪ್ರಬೀರ್ ಮತ್ತು ಅವರ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ಬಂಧಿಸಲಾಯಿತು. ಅವರನ್ನು ನ್ಯಾಯಾಲಯ ಕಸ್ಟಡಿಗೆ ನೀಡಿದೆ ಎಂದು ತಿಳಿದುಬಂದಿದೆ. ಭಾರತ ವಿರೋಧಿ ಪ್ರಚಾರಕ್ಕಾಗಿ ಮತ್ತು ದೇಶದ ಸಾರ್ವಭೌಮತ್ವವನ್ನು ಹಾಳುಮಾಡಲು ನ್ಯೂಸ್‌ಕ್ಲಿಕ್ ಚೀನಾದಿಂದ ಅಪಾರ ಪ್ರಮಾಣದ ಹಣವನ್ನು ಪಡೆದಿದೆ ಎಂದು ದೆಹಲಿ ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆ ಪ್ರಕ್ರಿಯೆಗೆ ಕೆಲವರ ಜತೆಗೂಡಿ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಆದಾಗ್ಯೂ, ನ್ಯೂಸ್‌ಕ್ಲಿಕ್ ಈ ಆರೋಪಗಳನ್ನು ನಿರಾಕರಿಸಿತು. ತಾವು ಎಂದಿಗೂ ಹಿಂಸಾಚಾರ, ಪ್ರತ್ಯೇಕತಾವಾದ ಅಥವಾ ಇತರ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಅವರು ಹೇಳಿಕೊಳ್ಳುತ್ತಾರೆ ಮತ್ತು ಇದು ಅವರ ವೆಬ್ಸೈಟಿನಲ್ಲಿನ ಸುದ್ದಿಗಳನ್ನು ನೋಡಿದಾಗ ಗೊತ್ತಾಗುತ್ತದೆ ಎಂದಿದ್ದಾರೆ. ಚೀನಾದಿಂದ ಒಂದು ಪೈಸೆಯೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page