ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ಕಳೆದ ತಿಂಗಳು ಪ್ರಕಟಿಸಿದ 12ನೇ ತರಗತಿಯ ಫಲಿತಾಂಶಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮತ್ತೊಂದು ಹೊಸ ವಿವಾದ ಸೃಷ್ಟಿಯಾಗಿದೆ. ಈ ವರ್ಷ ಪ್ರಥಮ ಬಾರಿಗೆ ಜಾರಿಗೆ ತರಲಾದ ‘ಆನ್ ಸ್ಕ್ರೀನ್ ಮಾರ್ಕಿಂಗ್’ (OSM) ಡಿಜಿಟಲ್ ಮೌಲ್ಯಮಾಪನ ಪದ್ಧತಿಯ ದಕ್ಷತೆಯೇ ಈ ಗೊಂದಲಗಳಿಗೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ.
ಈ ಬಾರಿ ಸಿಬಿಎಸ್‌ಇ 12ನೇ ತರಗತಿಯಲ್ಲಿ ಶೇಕಡಾ 85.2 ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡಾ 3.19 ರಷ್ಟು ಕಡಿಮೆಯಾಗಿದೆ. ಹೊಸ ಓಎಸ್‌ಎಮ್ ವಿಧಾನದಡಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಹಾಗೂ ಶಿಕ್ಷಕರು ಕಂಪ್ಯೂಟರ್ ಪರದೆಯ ಮೇಲೆ ನೋಡಿ ಡಿಜಿಟಲ್ ಆಗಿ ಅಂಕಗಳನ್ನು ನಮೂದಿಸಿದ್ದರು.
ಈ ಪ್ರಕ್ರಿಯೆಯ ಮೂಲಕ ಒಟ್ಟು 98,66,622 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಆದರೆ, ಫಲಿತಾಂಶ ಬಂದ ನಂತರ ಜೆಇಇ (JEE) ನಂತಹ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅರ್ಹತೆ ಪಡೆದ ವಿದ್ಯಾರ್ಥಿಗಳೂ ಸಹ ಬೋರ್ಡ್ ಪರೀಕ್ಷೆಯ ಭೌತಶಾಸ್ತ್ರ (Physics) ಮತ್ತು ಗಣಿತ (Maths) ವಿಷಯಗಳಲ್ಲಿ ಫೇಲ್ ಆಗಿರುವುದು ಅಥವಾ ಅತ್ಯಂತ ಕಡಿಮೆ ಅಂಕ ಗಳಿಸಿರುವುದು ಪೋಷಕರನ್ನು ಆಘಾತಕ್ಕೀಡು ಮಾಡಿದೆ. ಡಿಜಿಟಲ್ ಸ್ಕ್ಯಾನಿಂಗ್ ಸಮಯದಲ್ಲಿ ಉತ್ತರ ಪತ್ರಿಕೆಯ ಮಾರ್ಜಿನ್‌ಗಳಲ್ಲಿ ಬರೆದಿದ್ದ ಉತ್ತರಗಳು ಅಥವಾ ಕೆಲವು ಪುಟಗಳು ಸರಿಯಾಗಿ ಸ್ಕ್ಯಾನ್ ಆಗದ ಕಾರಣ ವಿದ್ಯಾರ್ಥಿಗಳು ಅಂಕಗಳನ್ನು ಕಳೆದುಕೊಂಡಿದ್ದಾರೆ ಎಂದು ದೂರಲಾಗಿದೆ.
ಕಳೆದ 17 ವರ್ಷಗಳಿಂದ ಸಿಬಿಎಸ್‌ಇ ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕ ಸಂಜೀವ್ ಮಾತನಾಡಿ, ಇಷ್ಟು ದೊಡ್ಡ ಮಟ್ಟದಲ್ಲಿ ಅಂಕಗಳ ಕುರಿತು ದೂರುಗಳು ಬಂದಿರುವುದು ಇದೇ ಮೊದಲು ಎಂದಿದ್ದಾರೆ. ಮೌಲ್ಯಮಾಪನ ಆರಂಭವಾಗುವ ಕೇವಲ ಒಂದು ತಿಂಗಳ ಮುಂಚೆಯಷ್ಟೇ ಶಿಕ್ಷಕರಿಗೆ ಈ ಆನ್ ಸ್ಕ್ರೀನ್ ಮಾರ್ಕಿಂಗ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲಾಗಿತ್ತು ಮತ್ತು ತರಾತುರಿಯಲ್ಲಿ ಆನ್‌ಲೈನ್ ತರಬೇತಿ ಒದಗಿಸಲಾಗಿತ್ತು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಇಷ್ಟು ದೊಡ್ಡ ವ್ಯವಸ್ಥೆಯನ್ನು ಇಷ್ಟು ಆತುರವಾಗಿ ಜಾರಿಗೆ ತರಬಾರದಿತ್ತು ಹಾಗೂ ಸ್ಕ್ಯಾನಿಂಗ್ ತಾಂತ್ರಿಕ ದೋಷಗಳೂ ಮೌಲ್ಯಮಾಪನದ ಮೇಲೆ ಪರಿಣಾಮ ಬೀರಿವೆ ಎಂದು ಅವರು ತಿಳಿಸಿದ್ದಾರೆ.
ಮೌಲ್ಯಮಾಪನದಲ್ಲಿ ಲೋಪಗಳು ಆಗಿರುವುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಪ್ಪಿಕೊಂಡಿದ್ದು, ಸದ್ಯಕ್ಕೆ ಸುಮಾರು 13,000 ಉತ್ತರ ಪತ್ರಿಕೆಗಳಲ್ಲಿ ತಪ್ಪುಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಂಕಗಳ ಮರುಪರಿಶೀಲನೆಗಾಗಿ ಈ ತಿಂಗಳ 19 ರಿಂದ 22 ರ ನಡುವೆ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮರುಮೌಲ್ಯಮಾಪನ (Revaluation) ಶುಲ್ಕವನ್ನು ಪ್ರತಿ ವಿಷಯಕ್ಕೆ ಇದ್ದ 700 ರೂಪಾಯಿಯಿಂದ ಕೇವಲ 100 ರೂಪಾಯಿಗೆ ಇಳಿಕೆ ಮಾಡಿದೆ. ಇದರೊಂದಿಗೆ ವಿದ್ಯಾರ್ಥಿಗಳ ಗೊಂದಲ ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು 1800118004 ಉಚಿತ ಟೆಲಿ-ಕೌನ್ಸೆಲಿಂಗ್ ಸಹಾಯವಾಣಿಯನ್ನು ಕೂಡ ಆರಂಭಿಸಿದೆ.
