ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿಯ ಬೋರ್ಡ್ ಪರೀಕ್ಷೆಯ ‘ಆನ್-ಸ್ಕ್ರೀನ್ ಮಾರ್ಕಿಂಗ್’ (ಒಎಸ್‌ಎಂ) ಅಂದರೆ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಉಂಟಾದ ಗಂಭೀರ ಲೋಪದೋಷಗಳು ಮತ್ತು ತಾಂತ್ರಿಕ ಅಡಚಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ಕ್ರಮ ಕೈಗೊಂಡಿದೆ.
ಮಂಡಳಿಯ ಅಧ್ಯಕ್ಷ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದ್ದು, ಒಎಸ್‌ಎಂ ಸೇವಾ ಖರೀದಿ ಪ್ರಕ್ರಿಯೆಯ ತನಿಖೆಗೆ ಏಕಸದಸ್ಯ ಸಮಿತಿಯನ್ನು ರಚಿಸಲಾಗಿದೆ. ವರ್ಗಾವಣೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸರ್ಕಾರವು ಹೊಸ ಅಧಿಕಾರಿಗಳನ್ನು ನೇಮಕ ಮಾಡಿದ್ದು, 2001ರ ಬ್ಯಾಚ್‌ನ ಐಎಎಸ್ ಅಧಿಕಾರಿ ಲೋಖಂಡೆ ಪ್ರಶಾಂತ್ ಸೀತಾರಾಮ್ ಅವರನ್ನು ಸಿಬಿಎಸ್‌ಇಯ ಹೊಸ ಅಧ್ಯಕ್ಷರನ್ನಾಗಿ ಹಾಗೂ ವರುಣ್ ಭಾರದ್ವಾಜ್ ಅವರನ್ನು ಮಂಡಳಿಯ ಮುಂದಿನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.
ವರ್ಗಾವಣೆಗೊಂಡ ಮಾಜಿ ಅಧ್ಯಕ್ಷ ರಾಹುಲ್ ಸಿಂಗ್ ಅವರನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ಅವರ ಮೂಲ ಕೆಡರ್ ಆದ ಗೃಹ ಸಚಿವಾಲಯಕ್ಕೆ ವಾಪಸ್ ಕಳುಹಿಸಲಾಗಿದೆ.
ಸಿಬಿಎಸ್‌ಇ ಈ ವರ್ಷದಿಂದ 12ನೇ ತರಗತಿಯ ಮೌಲ್ಯಮಾಪನವನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದ ಒಎಸ್‌ಎಂ ವ್ಯವಸ್ಥೆಗೆ ಬದಲಾಯಿಸಿತ್ತು, ಆದರೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪರಿಶೀಲಿಸಿದಾಗ ದೊಡ್ಡ ಪ್ರಮಾಣದ ತಪ್ಪುಗಳು ಬೆಳಕಿಗೆ ಬಂದವು. ಹಲವು ಉತ್ತರ ಪತ್ರಿಕೆಗಳು ಮಸುಕಾಗಿದ್ದು, ಕೆಲವು ಪುಟಗಳು ಕಾಣೆಯಾಗಿದ್ದವು.
ಅತ್ಯಂತ ಗಂಭೀರವಾದ ವಿಷಯವೆಂದರೆ, ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಯ ಬದಲಾಗಿ ಬೇರೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಕಾಣಿಸುತ್ತಿದ್ದವು. ಇದರ ನಡುವೆ 19 ವರ್ಷದ ಎಥಿಕಲ್ ಹ್ಯಾಕರ್ ನಿಸರ್ಗ್ ಅಧಿಕಾರಿ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ತಾವು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಭದ್ರತಾ ಲೋಪವನ್ನು ಸುಲಭವಾಗಿ ಭೇದಿಸಬಲ್ಲೆ ಎಂದು ಚಿತ್ರದ ಸಹಿತ ತೋರಿಸಿಕೊಟ್ಟಿದ್ದರು.
ಮಂಡಳಿಯು ಸಹ ಈ ಭದ್ರತಾ ಲೋಪವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ.ಡಿಜಿಟಲ್ ಮೌಲ್ಯಮಾಪನಕ್ಕಾಗಿ ಹೈದರಾಬಾದ್ ಮೂಲದ ‘ಕೋಯಂಪ್ಟ್ ಎಡ್ಯುಟೆಕ್ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಗುತ್ತಿಗೆ ನೀಡಲು ಶಿಫಾರಸು ಮಾಡಿದ ಸಮಿತಿಯ ನೇತೃತ್ವವನ್ನು ಹಿಮಾಂಶು ಗುಪ್ತಾ ವಹಿಸಿದ್ದರು ಎಂದು ಅಧಿಕೃತ ದಾಖಲೆಗಳು ತಿಳಿಸಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಒಂದು ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಒಎಸ್‌ಎಂ ಸೇವಾ ಖರೀದಿ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ‘ಕೆಪಾಸಿಟಿ ಬಿಲ್ಡಿಂಗ್ ಕಮಿಷನ್’ ಅಧ್ಯಕ್ಷರಾದ ಎಸ್. ರಾಧಾ ಚೌಹಾಣ್ ಅವರ ನೇತೃತ್ವದಲ್ಲಿ ಏಕಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಒಂದು ತಿಂಗಳ ಒಳಗಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (DoPT) ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ ಎಂದು ವರದಿಯಾಗಿದೆ.
