ದೆಹಲಿ: ಪ್ರಸ್ತುತ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಸಿಬಿಎಸ್‌ಇ (CBSE) ಮೌಲ್ಯಮಾಪನ ಪೋರ್ಟಲ್ ವಿವಾದದ ವಿಚಾರದಲ್ಲಿ ಇಂದಿನ ಯುವ ಪೀಳಿಗೆ (ಜೆನ್-ಝೀ) ದೇಶದ ಅತ್ಯುನ್ನತ ಶಿಕ್ಷಣ ಮಂಡಳಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಸಮರ ಸಾರಿದೆ. ಸಿಬಿಎಸ್‌ಇ ಸಂಸ್ಥೆಯ ತಾಂತ್ರಿಕ ಅಸಮರ್ಥತೆಯನ್ನು ಯುವಕರು ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಇಂಟರ್ನೆಟ್‌ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಪೋರ್ಟಲ್‌ನಲ್ಲಿರುವ ಗಂಭೀರ ಭದ್ರತಾ ಲೋಪಗಳನ್ನು 19 ವರ್ಷದ ಎಥಿಕಲ್ ಹ್ಯಾಕರ್ ನಿಸರ್ಗ್ ಅಧಿಕಾರಿ ಎಂಬ ಯುವಕ ಬಹಿರಂಗಪಡಿಸಿದ ಬೆನ್ನಲ್ಲೇ ಈ ವಿವಾದ ಉಲ್ಬಣಗೊಂಡಿದೆ. ಪರೀಕ್ಷ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಯಾರೇ ಆದರೂ ಅತ್ಯಂತ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ರೀತಿಯಲ್ಲಿ ‘AWS’ (ಅಮೆಜಾನ್ ವೆಬ್ ಸರ್ವಿಸಸ್) ಪಬ್ಲಿಕ್ ಡೊಮೇನ್‌ನಲ್ಲಿ ಮುಕ್ತವಾಗಿ ಇಡಲಾಗಿತ್ತು.
ಇದು ವಿದ್ಯಾರ್ಥಿಗಳ ಗೌಪ್ಯತೆಗೆ ತೀವ್ರ ಧಕ್ಕೆಯುಂಟು ಮಾಡುತ್ತದೆ ಎಂದು ನಿಸರ್ಗ್ ಸ್ಪಷ್ಟಪಡಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಎಕ್ಸ್ (X) ಖಾತೆಯಲ್ಲಿ ಸಿಬಿಎಸ್‌ಇ ಉತ್ತರ ಪತ್ರಿಕೆಗಳು ಪೋರ್ಟಲ್‌ನಲ್ಲಿ ಕಾಣಿಸುತ್ತಿರುವ ಸ್ಕ್ರೀನ್‌ಶಾಟ್‌ಗಳನ್ನೂ ಆತ ಹಂಚಿಕೊಂಡಿದ್ದಾನೆ.
ಪೋರ್ಟಲ್ ಸುರಕ್ಷಿತವಾಗಿಲ್ಲ – ನಿಸರ್ಗ್: ಸಿಬಿಎಸ್‌ಇ ತಾಂತ್ರಿಕ ಅಧಿಕಾರಿಗಳು ತಮ್ಮ ಎಡಬ್ಲ್ಯೂಎಸ್ (AWS) ಬಕೆಟ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡದ ಕಾರಣ, ಪ್ರಸ್ತುತ ಯಾರಿಗೆ ಬೇಕಾದರೂ 2026ರ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳು ಸುಲಭವಾಗಿ ಸಿಗುತ್ತಿವೆ ಎಂದು ನಿಸರ್ಗ್ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಜೆನ್-ಝೀ ಯುವಕರು ಮಂಡಳಿಯ ವಿರುದ್ಧ ಮುಗಿಬಿದ್ದಿದ್ದಾರೆ. ಪೋರ್ಟಲ್‌ನಲ್ಲಿ ‘ಬ್ಯಾಡ್ ಆಪಲ್’ ಆಟ ಮತ್ತು ಅನಿಮೇಷನ್‌ಗಳು ರನ್ ಆಗುತ್ತಿರುವುದನ್ನು ತೋರಿಸುವ ಮೂಲಕ ನೆಟ್ಟಿಗರು ಕೇಂದ್ರ ಮಂಡಳಿಯ ತಾಂತ್ರಿಕ ಭದ್ರತೆಯನ್ನು ಅಣಕಿಸುತ್ತಿದ್ದಾರೆ.
ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯೊಂದರ ಪೋರ್ಟಲ್ ಇಷ್ಟೊಂದು ದುರ್ಬಲವಾಗಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಗತಿಯೇನು ಎಂದು ಯುವಕರು ಪ್ರಶ್ನಿಸುತ್ತಿದ್ದಾರೆ. ಆರಂಭದಲ್ಲಿ ಮಂಡಳಿಯು ಡಮ್ಮಿ ಪೋರ್ಟಲ್ ಹ್ಯಾಕ್ ಆಗಿದೆ ಎಂದು ಸಮರ್ಥಿಸಿಕೊಂಡಿತ್ತಾದರೂ, ಈಗ ಅಧಿಕೃತ ಪೋರ್ಟಲ್‌ನಲ್ಲೇ ದೋಷಗಳಿರುವುದನ್ನು ನೆಟ್ಟಿಗರು ಸಾಬೀತುಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಸಿಬಿಎಸ್‌ಇ ತನ್ನ ಮರುಮೌಲ್ಯಮಾಪನ ಪೋರ್ಟಲ್ ಆರಂಭವನ್ನು ಮುಂದೂಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ದೋಷ ಒಪ್ಪಿಕೊಂಡ ಸಿಬಿಎಸ್‌ಇ; ಯೂ-ಟರ್ನ್: ಇಷ್ಟು ದಿನಗಳ ಕಾಲ ಆನ್-ಸ್ಕ್ರೀನ್ ಮಾರ್ಕಿಂಗ್ ಪೋರ್ಟಲ್‌ನಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ ಎಂದು ವಾದಿಸುತ್ತಿದ್ದ ಸಿಬಿಎಸ್‌ಇ ಕೊನೆಗೂ ತೀವ್ರ ಒತ್ತಡಕ್ಕೆ ಮಣಿದು ಯೂ-ಟರ್ನ್ ಪಡೆದಿದೆ. ಆನ್‌ಲೈನ್ ಪೋರ್ಟಲ್‌ನಲ್ಲಿ ಸುರಕ್ಷತಾ ಲೋಪಗಳಿರುವುದು ನಿಜ ಎಂದು ಮಂಡಳಿಯು ತನ್ನ ಅಧಿಕೃತ ಎಕ್ಸ್ (X) ಖಾತೆಯ ಮೂಲಕ ಒಪ್ಪಿಕೊಂಡಿದೆ.
“ನಮ್ಮ ಆನ್-ಸ್ಕ್ರೀನ್ ಮಾರ್ಕಿಂಗ್ ಪೋರ್ಟಲ್‌ನಲ್ಲಿ ಕೆಲವು ಭದ್ರತಾ ಲೋಪಗಳು ಇರುವುದನ್ನು ನಾವು ಗುರುತಿಸಿದ್ದೇವೆ. ವಿವಿಧ ಇಲಾಖೆಗಳ ಸೈಬರ್ ಸೆಕ್ಯೂರಿಟಿ ತಜ್ಞರು ಹಾಗೂ ಐಐಟಿ (IIT) ನುರಿತ ತಾಂತ್ರಿಕ ತಂಡಗಳು ಜಂಟಿಯಾಗಿ ಕಳೆದ ಕೆಲವು ದಿನಗಳಿಂದ ಈ ಪೋರ್ಟಲ್‌ನ ಸೈಬರ್ ಭದ್ರತೆಯನ್ನು ಬಲಪಡಿಸಲು ಶ್ರಮಿಸುತ್ತಿವೆ. ಸದ್ಯ ಪತ್ತೆಯಾಗಿರುವ ದೋಷಗಳನ್ನು ನಿಯಂತ್ರಣಕ್ಕೆ ತರಲಾಗಿದ್ದು, ಒಎಸ್ಎಮ್ (OSM) ಪೋರ್ಟಲ್‌ಗೆ ಮತ್ತಷ್ಟು ಕಠಿಣ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ,” ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಹ್ಯಾಕರ್‌ಗಳಿಗೆ ಧನ್ಯವಾದ ಅರ್ಪಿಸಿದ ಮಂಡಳಿ: ಪೋರ್ಟಲ್‌ನಲ್ಲಿದ್ದ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಿ ಇಡೀ ವ್ಯವಸ್ಥೆಯನ್ನು ಎಚ್ಚರಿಸಿದ ಎಥಿಕಲ್ ಹ್ಯಾಕರ್‌ಗಳು ಮತ್ತು ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಧನ್ಯವಾದಗಳನ್ನು ಅರ್ಪಿಸಿದೆ. ಲೋಪಗಳನ್ನು ತೋರಿಸಿಕೊಟ್ಟ ಯುವಕರನ್ನು ಈಗಾಗಲೇ ನೇರವಾಗಿ ಸಂಪರ್ಕಿಸಿ ಪ್ರಶಂಸಿಸಲಾಗಿದೆ ಎಂದು ತಿಳಿಸಿರುವ ಮಂಡಳಿಯು, ಇನ್ನೂ ಯಾರಾದರೂ ಪೋರ್ಟಲ್‌ನಲ್ಲಿ ದೋಷಗಳನ್ನು ಗುರುತಿಸಿದರೆ ತಕ್ಷಣವೇ ತಮ್ಮ ಸೈಬರ್ ಸೆಕ್ಯೂರಿಟಿ ತಂಡದ ಗಮನಕ್ಕೆ ತರಬೇಕಾಗಿ ಕೋರಿದೆ. 19 ವರ್ಷದ ನಿಸರ್ಗ್ ಅಧಿಕಾರಿ ಈ ಹಗರಣವನ್ನು ಬಯಲಿಗೆಳೆದ ನಂತರವೇ ಇಡೀ ದೇಶದ ಗಮನ ಈ ಕಡೆ ಹರಿದಿತ್ತು. ಆರಂಭದಲ್ಲಿ ಹ್ಯಾಕಿಂಗ್ ವರದಿಗಳನ್ನು ಅಲ್ಲಗಳೆದಿದ್ದ ಮಂಡಳಿಯು, ಈಗ ಕೊನೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿರುವುದು ವಿದ್ಯಾರ್ಥಿಗಳ ಮತ್ತು ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
