Thursday, October 2, 2025

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-53 : ಸಿಡಿ, ಬಾಯಿಗೆ ಬೀಗ, ಹರಕೆಗಾಗಿ ಕಳವು!

“..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ದಮನಿತರನ್ನು ದೇವರು ಮತ್ತು ನಂಬಿಕೆಯ ಹೆಸರಿನಲ್ಲಿ ಇನ್ನಷ್ಟು ದಮನಿಸಲು ನಮ್ಮ ಸಮಾಜವು ಕಂಡುಕೊಂಡಿರುವ ಆಚರಣಾ ವ್ಯವಸ್ಥೆಗಳು ಲೆಕ್ಕವಿಲ್ಲದಷ್ಟಿವೆ. ಇಂತಾ ಆಚರಣೆಗಳಲ್ಲಿ ಕೆಲವು ಹಿಂದೆ ಮುಕ್ತವಾಗಿ ಮತ್ತು ರಾಜಾರೋಷವಾಗಿ ನಡೆಯುತ್ತಿದ್ದು, ನಂತರ ಬಿಲ ಸೇರಿದ್ದರೂ, ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು.

ಸಿಡಿಯಾಟ
ಕರ್ನಾಟಕದಲ್ಲಿ ಅಮಾನವೀಯ ಪದ್ಧತಿಗಳ ದಾಖಲಾತಿ ನಡೆದಾಗ ಸಿಡಿ ಆಚರಣೆಯು ಮಂಡ್ಯ, ಚಿತ್ರದುರ್ಗ, ಕಲಬುರ್ಗಿ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿತ್ತು. ಕೆಲವು ಊರುಗಳ ಉದಾಹರಣೆ ಕೊಡಬೇಕೆಂದರೆ, ಆಳಂದ ತಾಲೂಕಿನ ಹಡಗಲಿ ಅಫ್ಜಲ್ ಪುರ ತಾಲೂಕಿನ ಘತ್ತರಗಿ, ಮಂಡ್ಯ ಜಿಲ್ಲೆಯ ಮಳವಳ್ಳಿ, ಹಲಗೂರು ಬಳಿಯ ಗುಂಡಾಪುರ, ದೊಡ್ಡರಸಿನಕೆರೆ, ಕಸಲಗೆರೆ, ಅರಸಿನಗೆರೆ, ಕನಕಪುರ ತಾಲೂಕಿನ ಸಾತನೂರು, ಕೇರಲಾಳಸಂದ್ರ, ಮಳಗಾಳ, ಕಬ್ಬಾಳ, ಜಗಳೂರು ತಾಲೂಕಿನ ಹಾಲೆಕಲ್ಲು ಮೊದಲಾದ ಹಳ್ಳಿಗಳಲ್ಲಿ ಒಂದೊಂದು ರೀತಿಯ ಸಿಡಿ ನಡೆಯುತ್ತಿತ್ತು.

ಸಿಡಿಯಾಟದಲ್ಲಿ ಹಿಂದುಳಿದ ಎಲ್ಲಾ ಜಾತಿಗಳವರು ಭಾಗವಹಿಸುತ್ತಾರಾದರೂ, ಮಾದಿಗರು, ನಾಯಕರು ಮುಂತಾದ “ಕೆಳ ಜಾತಿ”ಗಳಿಗೆ ಸೇರಿದವರೇ ಹೆಚ್ಚು ಮತ್ತು ಪುರುಷರಿಗಿಂತ ಮಹಿಳೆಯರೇ ಹೆಚ್ಚು. ಮಾರಮ್ಮ ಮುಂತಾದ ಹೆಣ್ಣು ದೇವತೆಗಳನ್ನು ಪ್ರಸನ್ನಗೊಳಿಸುವ ಹೆಸರಿನಲ್ಲಿ, ಹರಕೆ ರೂಪದಲ್ಲಿ ಸಿಡಿ ಆಡಲಾಗುತ್ತದೆ. ಉದಾಹರಣೆಗೆ ಕಬ್ಬಾಳದ ಕಬ್ಬಾಳಮ್ಮ, ಮಳಗಾಳದ ಮಸಣಮ್ಮ, ಹಾಲೇಕಲ್ಲಿನ ಕರಿಯಮ್ಮ, ಘತ್ತರಗಿಯ ಬಾಗಮ್ಮ… ಹೀಗೆ. ಊರಿಗೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಟ್ಟದಾಗುತ್ತದೆ ಎಂಬುದು ನಂಬಿಕೆ. ಹಲವಾರು ಕಾರಣಗಳಿಂದ ಹರಕೆ ಹೊತ್ತವರೂ ಇರುತ್ತಾರೆ.

ವಿಶೇಷವಾಗಿ ಆರಿಸಿದ ಮರದಿಂದ ಸಿಡಿಗೋಲು ಅಥವಾ ಸಿಡಿಮರ  ತಯಾರಿಸಲಾಗುತ್ತದೆ. ಜಾತ್ರೆಯ ದಿನ ಇದಕ್ಕೆ ವಿಶೇಷ ಪೂಜೆ, ಪ್ರಾಣಿಬಲಿ, ಅಲಂಕಾರಗಳು, ವಿಧಿವಿಧಾನಗಳು ಇರುತ್ತವೆ. ಅವೆಲ್ಲವೂ ಒತ್ತಟ್ಟಿಗಿರಲಿ. ಇದೊಂದು ಮರದ ಏತದಂತಾ ರಚನೆ.  ಅದನ್ನು ಆಕಾಶದತ್ತ ಮೇಲೆತ್ತಿ ಒಂದು ಕಡೆಯಲ್ಲಿರುವ ಹಗ್ಗದ ಮೂಲಕ ಗಾಳಿಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ತಿರುಗಿಸಬಹುದು. ಕೆಲವು ಕಡೆ ಇವುಗಳಿಗೆ ಚಕ್ರಗಳಿದ್ದು, ಬೇಕೆಂದರೆ ಮೆರವಣಿಗೆಯಲ್ಲಿ ಕೊಂಡೊಯ್ಯಬಹುದು. ಮರದ ಇನ್ನೊಂದು ತುದಿಯಲ್ಲಿ ಹಗ್ಗಕ್ಕೆ ಕಟ್ಟಿರುವ ಕೊಕ್ಕೆ ಇರುತ್ತದೆ. ಈ ಕೊಕ್ಕೆಯನ್ನು ಸಿಡಿಯಾಡುವವರ ಬೆನ್ನು ಹುರಿಗೆ ಸಿಕ್ಕಿಸಿ ಮೇಲೆತ್ತಲಾಗುತ್ತದೆ. ಕೋಲನ್ನು ಆ ಕಡೆ ಈ ಕಡೆ ಗಾಳಿಯಲ್ಲಿ ತೂಗಾಡಿಸುತ್ತಾ ಸಿಡಿಬಂಡಿಯು ಮೆರವಣಿಗೆಯಲ್ಲಿ ಹೋಗುತ್ತದೆ. ಆ ವ್ಯಕ್ತಿಯ ಒಂದು ಕೈಯಲ್ಲಿ  ಕತ್ತಿ ಇರುತ್ತದೆ. ಎಲ್ಲಾ ಮುಗಿದ ನಂತರ ಆ ವ್ಯಕ್ತಿಯನ್ನು ಕೆಳಗಿಳಿಸಲಾಗುತ್ತದೆ. ತೀರಾ ಅಪಾಯಕಾರಿಯಾದ, ಅಪಾರ ನೋವು ಮತ್ತು ದೇಹಹಾನಿ ಉಂಟುಮಾಡುವ ಈ ಆಚರಣೆ ಯಾಕಾಗಿ ಮಾಡುತ್ತಾರೋ! ಈ ರೀತಿ ಇರುವುದನ್ನು ಬಂಡಿ ಸಿಡಿ ಎನ್ನುತ್ತಾರೆ. ಕೆಲವು ಕಡೆ ಸಿಡಿಮರವು ಒಂದೇ ಜಾಗದಲ್ಲಿ ಇರುತ್ತದೆ. ಬೇರೆಬೇರೆ ಊರುಗಳಲ್ಲಿ ಬೇರೆಬೇರೆ ವಿಧಿವಿಧಾನಗಳಿವೆ. ಕೆಲವು ಕಡೆ ತೊಟ್ಟಿಲು ಸಿಡಿ ಇತ್ತು. ಅದರಲ್ಲಿ ಕೊಕ್ಕೆಯಲ್ಲಿ ಸಿಕ್ಕಿಸುವ ಬದಲು ತೊಟ್ಟಿಲಲ್ಲಿ ಕುಳ್ಳಿರಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಕೊಕ್ಕೆಯ ಬದಲು ಸೊಂಟಕ್ಕೆ ಕಟ್ಟಿ ತೂಗಾಡಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಮನುಷ್ಯರ ಬದಲು ಗೊಂಬೆಗಳನ್ನು ತೂಗಾಡಿಸಲಾಗುತ್ತದೆ. ಇವು ಬಹುಶಃ ಈ ಹಿಂಸಾತ್ಮಕ ಆಚರಣೆಗೆ ಕಾಲಕ್ರಮೇಣ ಮಾಡಲಾದ ಪರಿಷ್ಕರಣೆ ಅಥವಾ ಸುಧಾರಣೆಗಳಾಗಿರಬಹುದು.

ಅಫ್ಜಲ್ ಪುರ ತಾಲೂಕಿನ ಘತ್ತರಗಿಯಲ್ಲಿ ಭೀಮಾ ನದಿದಡದ ಬಾಗಮ್ಮನ ಗುಡಿಯಿದೆ. ದಾಖಲಾತಿ ಕಾಲಕ್ಕೆ ಬೇರೆಬೇರೆ ಊರುಗಳಿಂದ ಬರುವ ಸಿಡಿಯಾಡುವವರಿಗೆ ಉಳಿದುಕೊಳ್ಳಲು ಪ್ರತ್ಯೇಕ ಕೋಣೆಗಳೂ ಇದ್ದವು. ಇಲ್ಲಿ ಎರಡು ಗಾಲಿಗಳ ಇಲ್ಲಿನ ಸಿಡಿಬಂಡಿಯ ತೊಲೆ 40ರಿಂದ 50 ಅಡಿ ಉದ್ದವಿತ್ತು. ತೊಲೆಯ ಕೊನೆಗೆ ಹಗ್ಗದಿಂದ ಕಟ್ಟಿದ ಕೊಕ್ಕೆ ಇತ್ತು. ಪಕ್ಕವೇ ಇನ್ನೊಂದು ಹಗ್ಗವಿದ್ದು, ಇದನ್ನು ಸಿಡಿಯಾಡುವವರು ಆಧಾರವಾಗಿ ಬಳಸಿಕೊಳ್ಳಬಹುದು. ದೀಪಾವಳಿ ಕಾಲದಲ್ಲಿ ಈ ಸಿಡಿ ನಡೆಯುತ್ತಿತ್ತು. ಈ ದಾಖಲಾತಿ ಸಮಯದಲ್ಲಿ (ಎರಡು ದಶಕಗಳಿಗೂ ಹಿಂದೆ) ಇದೊಂದು ದೊಡ್ಡ ಮಟ್ಟದ ವ್ಯಾಪಾರ, ಆರ್ಥಿಕ ವಹಿವಾಟು ನಡೆಯುವ ಜಾತ್ರೆ. ಆ ವರ್ಷ 42 ಮಹಿಳೆಯರು, 18 ಪುರುಷರು ಮತ್ತು ಐವರು ಇತರರು ಸಿಡಿಯಾಡಲು ಬಂದಿದ್ದರು. ಮೊದಲ ಸಿಡಿ 4,751 ರೂ.ಗಳಿಗೆ ಹರಾಜಾಗಿದ್ದರೆ, 65ನೆಯದು 501 ರೂ.ಗಳಿಗೆ. ಇಲ್ಲಿ ನದಿಯಲ್ಲಿ ಸ್ನಾನ ಇತ್ಯಾದಿ ಹಲವು ವಿಧಿಗಳಿದ್ದು, ಅವುಗಳ ವಿವರಣೆ ನಮಗೆ ಸದ್ಯ ಬೇಡ. ಸಿಡಿ ಆಚರಣೆಯ ಹಿಂಸಾತ್ಮಕ ವಿಧಾನಗಳನ್ನು ಸರಕಾರ ಹಿಂದೇಯೇ ನಿಷೇದಿಸಿತ್ತು. ಸಿಡಿ ಆಚರಣೆಗೆ ಪರವಿರೋಧಗಳು ಸಮಾಜದ ನಡುವೆಯೇ ಇವೆ. ಸರಕಾರ ನಿಷೇಧಿಸಿದರೂ ಜನರ ಮನಃಪರಿವರ್ತನೆ ಆಗದೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.

ಯಾಕೆಂದರೆ, ನಿಷೇಧದ ಹೊರತಾಗಿಯೂ ವರ್ಷಗಳಿಂದ ಸಿಡಿ ಆಚರಣೆಯು ಅಲ್ಲಲ್ಲಿ ನಡೆಯುತ್ತಲೇ ಬಂದಿದೆ. ಕೆಲವು ಕಡೆ ಸಂಘಟಕರ ವಿರುದ್ಧ ಕೇಸುಗಳು ಕೂಡಾ ದಾಖಲಾಗುತ್ತಾ ಬಂದಿವೆ. ದಲಿತ ಸಂಘಟನೆಗಳ ಪ್ರತಿಭಟನೆಗಳು ಕೂಡಾ ನಡೆಯುತ್ತಲೇ ಬಂದಿವೆ. 2024ರ ಪತ್ರಿಕಾ ವರದಿಗಳನ್ನು, ಯೂಟ್ಯೂಬ್ ವಿಡಿಯೋಗಳನ್ನು ನೋಡಿದರೂ ಸಾಕು. ಹಲವಾರು ಕಡೆಗಳಲ್ಲಿ ಸಿಡಿ ಆಚರಣೆಯು ನಡೆದಿರುವುದು ತಿಳಿಯುತ್ತದೆ. ಉದಾಹರಣೆಗೆ ಮಂಡ್ಯ ಜಿಲ್ಲೆಯ ಸಂತೆ ಕೆಸಲಕೆರೆ‌, ಚಳ್ಳಕೆರೆ ತಾಲೂಕಿನ ಗೌರಸಮುದ್ರ ಬಳಿಯ ತುಮಲಿ ಮಾರಮ್ಮನ ಜಾತ್ರೆ…ಹೀಗೆ. ಅವುಗಳ ಪಟ್ಟಿಯನ್ನಿಲ್ಲಿ ನೀಡಲು ಹೋಗುವುದಿಲ್ಲ.

ನಂಬಿಕೆ ಮತ್ತು ಧರ್ಮಾಚರಣೆಯ ಹೆಸರಿನಲ್ಲಿ ಬಿಜೆಪಿ ಮತ್ತು ಕೆಲವು ಬಲಪಂಥೀಯ ಸಂಘಟನೆಗಳು ಸಿಡಿ ಆಚರಣೆಯನ್ನು ಬೆಂಬಲಿಸುತ್ತಿವೆ ಮತ್ತು ಈಗಾಗಲೇ ನಿಂತಿರುವ ಕಡೆಗಳಲ್ಲೂ ಈ ಆಚರಣೆಯನ್ನು ಮತ್ತೆ ಆರಂಭಿಸಿವೆ. ಕೆಲವು ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಇವುಗಳನ್ನು ಅಮಾನವೀಯ ಎಂದು ಕರೆದು ಆಕ್ಷೇಪದ ಧ್ವನಿಯಲ್ಲಿ ವರದಿ ಮಾಡಿದ್ದರೆ, ಇನ್ನೂ ಕೆಲವು “ಭಕ್ತರು ಭಾವಪರವಶರಾಗಿ ಈ ಸಾಂಸ್ಕೃತಿಕ ಆಚರಣೆಯನ್ನು ಕಣ್ತುಂಬಿಕೊಂಡರು” ಇತ್ಯಾದಿಯಾಗಿ ಈ ಆಚರಣೆಯನ್ನು ವೈಭವೀಕರಿಸಿ ಅತಿರಂಜಿತವಾಗಿ ವರ್ಣಿಸಿವೆ. ಇದಕ್ಕೆ ಒಂದು ಸಾಕ್ಷ್ಯವಾಗಿ ಹೇಳಬೇಕೆಂದರೆ , ಈ ಆಚರಣೆಗೆ ಕಾನೂನು ಪ್ರಕಾರ ನಿಷೇಧವಿದ್ದರೂ, ದಾವಣಗೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿ ಉತ್ಸವ ಕಳೆದ ಸಲ ಶಾಸಕ ಎಂ.ಪಿ. ರೇಣುಕಾಚಾರ್ಯ ಎದುರೇ ನಡೆದು ವಿವಾದಕ್ಕೆ ಕಾರಣವಾಗಿತ್ತು.

ಇಂತಾ ಪ್ರಕರಣಗಳಲ್ಲಿ ಮುಂದೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಯಾರೂ ನಿಗಾ ಇಟ್ಟಂತೆ ಅಥವಾ ಕಾಳಜಿ ವಹಿಸಿದಂತೆ ಕಾಣುವುದಿಲ್ಲ. ತೀರಾ ಹಿಂಸಾತ್ಮಕವಾದ ಕೊಕ್ಕೆ ಸಿಡಿಯ ವರದಿಗಳು ನೋಡಲು ಸಿಗದಿರುವುದೇ ಒಂದು ಸಮಾಧಾನ. ಸರಕಾರ ಸದ್ಯಕ್ಕೆ ಒಂದೋ ಹಿಂಸಾತ್ಮಕವಲ್ಲದ ಸರಳ, ಸಾಂಕೇತಿಕ ಆಚರಣೆಗೆ ಅವಕಾಶ ಮಾಡಿಕೊಡಬೇಕು; ಇಲ್ಲವೇ ಕಾನೂನು ಉಲ್ಲಂಘಿಸುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ತಾನೇ ಅನುಷ್ಟಾನಗೊಳಿಸಲು ಆಗದ, ಅಥವಾ ಅನುಷ್ಟಾನಗೊಳಿಸಲು ಮನಸ್ಸಿಲ್ಲದ ಕತ್ತೆ ಕಾನೂನು ತಂದಾದರೂ ಏನು ಪ್ರಯೋಜನ?

ಸ್ವಯಂ ಹಿಂಸೆ, ಬಾಯಿಗೆ ಬೀಗ
ಸ್ವಯಂ ಹಿಂಸೆಯ ಆಚರಣೆ ಬೇರೆಬೇರೆ ಕಡೆ ಬೇರೆಬೇರೆ ರೀತಿಯಲ್ಲಿ ಇವೆ. ಕಲಬುರ್ಗಿಯ ಬೂಪಾಲ ತ್ಯಾಗನೂರು, ಅಳಂದ ತಾಲೂಕಿನ ಹಡಗಲಿ, ಧಾರವಾಡ ಜಿಲ್ಲೆಯ ಹಡಗಲಿ ತಾಲೂಕಿನ ಕಮತಗಿ, ಬಳ್ಳಾರಿಯ ಹಂಪಿ ಮುಂತಾದ ಕಡೆಗಳಲ್ಲಿ ಮಾದಿಗ ಜನಾಂಗದವರು ಹರಕೆ ಹೊತ್ತು ಮೈಗೆ ಕೊಕ್ಕೆಗಳನ್ನು ಸಿಕ್ಕಿಸಿ ಸ್ವಯಂ ಹಿಂಸೆ ಅನುಭವಿಸುವುದು ಕಂಡುಬಂದಿತ್ತು. ಸ್ವಯಂ ಹಿಂಸೆಯು ಮುಸ್ಲಿಮರ ಮುಖ್ಯವಾಗಿ ಶಿಯಾ ಪಂಗಡದಲ್ಲಿಯೂ ಇದೆ. ಮೊಹರಂ ಸಮಯದಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ಶಿಯಾ ಸಮುದಾಯದವರು ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗಳಾದ ಹಸನ್ ಮತ್ತು ಹುಸೇನ್ ಕಾದಾಡಿದ ಕರ್ಬಲಾ ಯುದ್ಧದ ನೆನಪಿನಲ್ಲಿ ನಡೆಯುವ ಮೆರವಣಿಗೆಯಲ್ಲಿ ಆವೇಶದಿಂದ ಕುಣಿಯುತ್ತಾ, ಕೊರಡೆ ಮತ್ತಿತರ ಆಯುಧಗಳಿಂದ ಮೈಗೆ ಹೊಡೆದುಕೊಂಡು ಸ್ವಯಂ ಗಾಯ ಮಾಡಿಕೊಳ್ಳುವುದು ನಡೆಯುತ್ತದೆ. ಇದು ಇಸ್ಲಾಮೇತರ ಆಚಾರ ಎಂದು ವಿರೋಧಿಸುವ ಪ್ರಬಲ ವರ್ಗವೊಂದು ಮುಸ್ಲಿಮರಲ್ಲೇ ಇದೆ.

ಇದಕ್ಕೆ ಕಲಶವಿಟ್ಟಂತೆ ಮಂಡ್ಯದ ಕೆಲವು ಕಡೆ ಬಾಯಿಗೆ ಬೀಗ ಎಂಬ ಆಚರಣೆಯೊಂದು ನಡೆಯುತ್ತಿತ್ತು. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಬಾಯಿಗೆ ಅಡ್ಡವಾಗಿ ಅಥವಾ ನಾಲಗೆಗೆ ಲಂಬವಾಗಿ ಸರಳುಗಳನ್ನು ಚುಚ್ಚಿಕೊಳ್ಳುತ್ತಾರೆ. ದಾಖಲಾತಿ ನಡೆದ ಸಮಯದಲ್ಲಿ ಒಂದು ಕಡೆ ಒಂಭತ್ತು ಪುರುಷರು ಮತ್ತು ಮೂವರು ಮಹಿಳೆಯರು ಈ ಆಚರಣೆಯಲ್ಲಿ ಭಾಗವಹಿಸಿದ್ದರು. ವಣ್ಣಿಯರ್ ಭಕ್ತ ಮಂಡಲಿ ಎಂಬ ಹೆಸರಿನಲ್ಲಿ ನಡೆದ ಈ ಆಚರಣೆಯಲ್ಲಿ ಒಬ್ಬರು ಮಹಿಳೆ 12 ಅಡಿ ಉದ್ದದ ಸರಳೊಂದನ್ನು ಬಾಯಿಗೆ ಅಡ್ಡಲಾಗಿ ಚುಚ್ಚಿಕೊಂಡಿದ್ದೇ ಅಲ್ಲದೇ, ಅದು ಸಾಲದು ಎಂಬಂತೆ, ಡಬ್ಬಣದ ಮೂಲಕ ಮೈಗೆ ನಿಂಬೆಹಣ್ಣುಗಳನ್ನೂ ಚುಚ್ಚಿಕೊಂಡಿದ್ದರು! ಈ ಚಿತ್ರವು ಕೆಲವು ಪತ್ರಿಕೆಗಳಲ್ಲಿಯೂ ಪ್ರಕಟವಾಗಿತ್ತು.

ಹರಕೆ ಹೊತ್ತು ಕಳವು ಮಾಡುವ ಒಂದು ಪದ್ಧತಿ ಉತ್ತರ ಕನ್ನಡದ ಒಂದು ದೇವಾಲಯದಲ್ಲಿ ನಡೆಯುತ್ತಿತ್ತು. ಅಲ್ಲಿ ದೇವರಿಗೆ ಬೇರೆಬೇರೆ ರೀತಿಯಲ್ಲಿ ಹರಕೆ ಹೊರುವ ಹಾಗೆ ಜನರು ಕಳ್ಳತನದ ಹರಕೆ ಹೊರುತ್ತಿದ್ದರು. ಹೀಗೆ ಕಳವು ಮಾಡಿದ ಸೊತ್ತನ್ನು ದೇವಾಲಯಕ್ಕೆ ಸಲ್ಲಿಸಬೇಕು ಎಂಬುದು ವಿಪರ್ಯಾಸ! ಸಿಕ್ಕಿಬಿದ್ದರೆ ಏಟು ತಿನ್ನಬೇಕಾದವರು ಒಬ್ಬರು, ಕಳ್ಳಮಾಲನ್ನು ಅನುಭವಿಸುವವರು ಬೇರೊಬ್ಬರು! ಇಂತಾ ಒಂದು ವಂಚಕ ಹರಕೆ ರೂಪಿಸಿದವರ ಚಾಲಾಕಿತನವನ್ನು ಮೆಚ್ಚಲೇಬೇಕು. ಹಾಗೆಂದು ಶಿವರಾತ್ರಿಯಂದು ಕಳವು ಮಾಡುವುದು ಕರಾವಳಿಯಲ್ಲಿ ಸಾಮಾನ್ಯವೇ ಆಗಿತ್ತು. ಶಿವರಾತ್ರಿಯಂದು ಜಾಗರಣೆ ಇರಬೇಕು. ರಾತ್ರಿ ಹೊತ್ತು ಕಳವು ಮಾಡುವವರೂ, ಕಾಯುವವರೂ ಜಾಗರಣೆ ಮಾಡಲೆಂದು ಈ ಪದ್ಧತಿ ತರಲಾಗಿದೆ ಎಂಬ ಸಮಜಾಯಿಶಿಯೂ ಇತ್ತು. ಸಾಮಾನ್ಯವಾಗಿ ಬೇರೆಯವರ ತರಕಾರಿ, ತೆಂಗಿನಕಾಯಿ ಕದ್ದು, ಬೇರೆಯವರ ಮನೆಯ, ವಿಶೇಷವಾಗಿ ಬಡವರ ಮನೆಯ ಮುಂದೆ ಇಡುವುದು, ಮನೆ ಮಾಡಿಗೆ ಕಲ್ಲೆಸೆಯುವುದು, ವಸ್ತುಗಳನ್ನು ಕದ್ದು ಎಲ್ಲೆಲ್ಲಿಯೋ ಇಡುವುದು ಇತ್ಯಾದಿ ಕಿಡಿಗೇಡಿ ಕೃತ್ಯಗಳು ಸಾಮಾನ್ಯವಾಗಿದ್ದವು, ಮನರಂಜಕವಾಗಿಯೂ ಇದ್ದವು. ಇದು ಅತಿರೇಕವಾಗಿ ಸಾರ್ವಜನಿಕ ರಸ್ತೆಗಳಿಗೆ ಕಲ್ಲು ಉರುಳಿಸಿ ತಡೆ ಮಾಡುವುದು, ಬೆಳೆಗಳನ್ನು ಹಾಳುಮಾಡುವುದು, ತಮಗಾಗದವರ ಮನೆ ಮುಂದೆ ಮಲವಿಸರ್ಜನೆ ಮಾಡುವುದು, ಲಾಭಕ್ಕೆಂದೇ ಕದಿಯುವುದು ಇವೆಲ್ಲ ಕೂಡಾ ಮಿತಿ ಮೀರಿ ನಡೆಯುತ್ತಿದ್ದವು. ರಾತ್ರಿಯಿಡೀ ಇಸ್ಪೀಟು ಭಜನೆ ಇರುತ್ತಿತ್ತು. ಇವೆಲ್ಲವೂ ಕಾಲಕ್ರಮೇಣ ಕಡಿಮೆಯಾಗಿ ಇಲ್ಲವೇ ಎನ್ನುವಷ್ಟು ಕಡಿಮೆಯಾಗಿವೆ.

ಆದರೆ, ಧರ್ಮದ ಹೆಸರಿನಲ್ಲಿ ನಡೆಯುವ ಇಂತಾ ಆಚರಣೆಗಳಲ್ಲಿ ಭಕ್ತಿಶ್ರದ್ಧೆಗಳು ಮಾಯವಾಗಿ ಮನರಂಜನೆಯೇ ಉದ್ದೇಶವಾಗಿದೆ, ಆಧ್ಯಾತ್ಮಿಕತೆ ಮಾಯವಾಗಿ ಕಾಟಾಚಾರಗಳಷ್ಟೇ ಉಳಿದಿವೆ ತಿರುಳು ಮಾಯವಾಗಿ, ಚಿಪ್ಪನ್ನೇ ಜಗಿಯಲಾಗುತ್ತಿದೆಎಂಬುದನ್ನು ಇದು ಸೂಚಿಸುತ್ತದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಇನ್ನೂ ಕೆಲವು ವಿಚಿತ್ರ ಆಚರಣೆಗಳನ್ನು ಮುಂದಿನ ಕಂತಿನಲ್ಲಿ ಚುಟುಕಾಗಿ ನೋಡಿ ಮುಗಿಸೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page