Thursday, December 18, 2025

ಸತ್ಯ | ನ್ಯಾಯ |ಧರ್ಮ

ಕೇರಳ ಚಲನಚಿತ್ರೋತ್ಸವದ 19ಸಿನಿಮಾಗಳಿಗೆ ಕೇಂದ್ರದ ತಡೆ: ನಿಷೇಧಿತ ಚಿತ್ರಗಳನ್ನೂ ಪ್ರದರ್ಶಿಸುವುದಾಗಿ ಸಿಎಂ ವಿಜಯನ್ ಘೋಷಣೆ

ತಿರುವನಂತಪುರಂನಲ್ಲಿ ನಡೆಯುತ್ತಿರುವ ೩೦ನೇ ಆವೃತ್ತಿಯ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK) ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ೧೯ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ವಿಶ್ವದ ೮೨ ದೇಶಗಳ ೨೦೬ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದರೂ, ರಾಜಕೀಯ ಮತ್ತು ಸೈದ್ಧಾಂತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಲವು ಪ್ರಮುಖ ಸಿನಿಮಾಗಳನ್ನು ತಡೆಹಿಡಿಯಲಾಗಿದೆ ಎಂದು ಚಲನಚಿತ್ರ ಅಕಾಡೆಮಿ ಆಕ್ರೋಶ ವ್ಯಕ್ತಪಡಿಸಿದೆ.

ವಿಶೇಷವೆಂದರೆ, ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲ್ಪಟ್ಟಿರುವ ನೂರು ವರ್ಷ ಹಳೆಯ ಸೋವಿಯತ್ ಕ್ಲಾಸಿಕ್ ‘ಬ್ಯಾಟಲ್‌ಶಿಪ್ ಪೊಟೆಮ್ಕಿನ್’ ನಂತಹ ಚಿತ್ರಗಳಿಗೂ ಕೇಂದ್ರವು ಪ್ರದರ್ಶನದ ಅನುಮತಿ ನಿರಾಕರಿಸಿರುವುದು ಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕೇಂದ್ರದ ಈ ನಿರ್ಧಾರದ ಹಿಂದೆ ಸಂಘ ಪರಿವಾರದ ಸೈದ್ಧಾಂತಿಕ ದ್ವೇಷ ಅಡಗಿದೆ ಎಂದು ಚಿತ್ರೋತ್ಸವದ ವೇದಿಕೆಯಲ್ಲಿ ತೀವ್ರ ನಿರಸನಗಳು ವ್ಯಕ್ತವಾಗಿವೆ. ಪ್ಯಾಲೆಸ್ಟೈನ್ ಸಂಘರ್ಷದ ಕುರಿತಾದ ‘ಒನ್ಸ್ ಅಪಾನ್ ಎ ಟೈಮ್ ಇನ್ ಗಾಜಾ’ ಮತ್ತು ‘ವಜೀಬ್’ ಅಂತಹ ಚಿತ್ರಗಳನ್ನು ಕಟ್ಟುನಿಟ್ಟಾದ ಪರಿಶೀಲನೆಗೆ ಒಳಪಡಿಸಿ ತಡೆಯಲಾಗಿದೆ.

ಹಾಗೆಯೇ ಸಂಧ್ಯಾ ಸೂರಿ ನಿರ್ದೇಶನದ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದ ಭಾರತೀಯ ಮೂಲದ ‘ಸಂತೋಷ್’ ಚಿತ್ರಕ್ಕೂ ಪ್ರದರ್ಶನದ ಅವಕಾಶ ತಪ್ಪಿದೆ. ಇಂಗ್ರಿಡ್ ಸ್ಯಾಂಟೋಸ್ ನಿರ್ದೇಶನದ ಸ್ಪ್ಯಾನಿಷ್ ಚಿತ್ರವೊಂದಕ್ಕೆ ‘ಬೀಫ್’ ಎಂಬ ಹೆಸರಿರುವ ಕಾರಣಕ್ಕಾಗಿಯೇ ಅನುಮತಿ ನಿರಾಕರಿಸಲಾಗಿದೆ ಎಂದು ಪ್ರತಿನಿಧಿಗಳು ಆರೋಪಿಸಿದ್ದು, ಆ ಚಿತ್ರವು ವಾಸ್ತವವಾಗಿ ಮಹಿಳಾ ಸಬಲೀಕರಣ ಮತ್ತು ಹಿಪ್-ಹಾಪ್ ಸಂಸ್ಕೃತಿಯ ಬಗ್ಗೆ ಚರ್ಚಿಸುತ್ತದೆ ಎಂಬುದು ಗಮನಾರ್ಹ.

ಕೇಂದ್ರ ಸರ್ಕಾರದ ಈ ಧೋರಣೆಯನ್ನು ಮುಖ್ಯಮಂತ್ರಿ ಪಿನರಯಿ ವಿಜಯನ್ ಅವರು ಕಟುವಾಗಿ ಟೀಕಿಸಿದ್ದಾರೆ. ಕೇಂದ್ರದ ಇಂತಹ ಏಕಪಕ್ಷೀಯ ಮತ್ತು ಅಸಂಬದ್ಧ ನಿರ್ಧಾರಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಅನುಮತಿ ನಿರಾಕರಿಸಲಾದ ಚಿತ್ರಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಿಯೇ ತೀರುತ್ತೇವೆ ಎಂದು ಘೋಷಿಸಿದ್ದಾರೆ.

ಪ್ರಗತಿಪರ ಚಿಂತನೆಗಳ ನೆಲೆಯಾಗಿರುವ ಕೇರಳ ಇಂತಹ ಬೆದರಿಕೆಗಳಿಗೆ ಅಥವಾ ಸಾಂಸ್ಕೃತಿಕ ಹಸ್ತಕ್ಷೇಪಕ್ಕೆ ಬಗ್ಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈವಿಧ್ಯಮಯ ಸೃಜನಾತ್ಮಕ ಅಭಿವ್ಯಕ್ತಿಗಳನ್ನು ಹತ್ತಿಕ್ಕುವ ಇಂತಹ ಕ್ರಮಗಳು ಪ್ರಜಾಪ್ರಭುತ್ವದ ವಿರೋಧಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ಅವರು ಸಹ ಕೇಂದ್ರದ ಈ ಕ್ರಮವನ್ನು ಖಂಡಿಸಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ದೇಶಾದ್ಯಂತ ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಸೆನ್ಸಾರ್‌ಶಿಪ್ ಅನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಹಾದಿ ಗುಂಪುಗಳನ್ನು ಟೀಕಿಸುವ ‘ಟಿಂಬಕ್ಟು’ ಅಂತಹ ಗಂಭೀರ ಸಿನಿಮಾಗಳನ್ನು ತಡೆದಿರುವುದು ಕೇವಲ ಆಡಳಿತ ಪಕ್ಷದ ನಿರಂಕುಶ ಧೋರಣೆಯನ್ನು ತೋರಿಸುತ್ತದೆ ಎಂದು ಪ್ರತಿನಿಧಿಗಳ ನಡುವೆ ವ್ಯಾಪಕ ಚರ್ಚೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page