ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ದೇಶಕ್ಕೆ ವಾಪಸ್ ಕರೆತರುವುದಕ್ಕಾಗಿ ಕೇಂದ್ರ ಸಹಕಾರ ನೀಡಲಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಇಷ್ಟು ದಿನ ಕತ್ತೆ ಕಾಯುತ್ತಿದ್ದರೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.
ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಪತ್ರ ಬರೆದಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, “ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಇದೆ. ಇದುವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ದೂರಿದರು.
ಏಪ್ರಿಲ್ 21 ರಂದು ಪ್ರಜ್ವಲ್ ಇರುವಂಥ ಸ್ಪಷ್ಟ ಕ್ಲಿಪ್ಪಿಂಗ್ ಒಳಗೊಂಡ ಮೊದಲ ಪೆನ್ ಡ್ರೈವ್ ಹೊರಬಂದಿದೆ. ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ವಿದೇಶಕ್ಕೆ ತೆರಳಿದ್ದಾರೆ. ಈ ಏಳು ದಿನಗಳ ಕಾಲ ರಾಜ್ಯ ಸರ್ಕಾರದವರು ಕತ್ತೆಗಳನ್ನು ಕಾಯುತ್ತಿದ್ದರಾ? ಏಕೆ ಎಫ್‌ಐಆರ್ ದಾಖಲಿಸಿ ಬಂಧಿಸಲಿಲ್ಲ ಎಂದು ಜೋಶಿ ಪ್ರಶ್ನಿಸಿದರು.
ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ಕಾನೂನು ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.
“ಆದರೆ, ನಾವು ಸಿಎಂ ಅಥವಾ ರಾಜ್ಯ ಸರ್ಕಾರ ಪತ್ರ ಬರೆದ ತಕ್ಷಣ ಈ ವಿಷಯ ಇತ್ಯರ್ಥ ಮಾಡಬೇಕೆಂಬುದು ಸರಿಯೇ? ರಾಜ್ಯ ಸರ್ಕಾರ ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಅಂದರೆ ಏಪ್ರಿಲ್ 26ರವರೆಗೆ ಸುಮ್ಮನಿತ್ತು. ಒಕ್ಕಲಿಗರ ಮತಗಳಿಗಾಗಿ ಸುಮ್ಮನಿತ್ತು. ಈಗ ಅವರು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ತನಿಖೆಗಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಂದು ಜೋಶಿ ಹೇಳಿದರು.
ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಮತ್ತು ಗೃಹ ಸಚಿವಾಲಯಗಳನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳು ಮೇ 1 ರಂದು ಮೋದಿ ಅವರಿಗೆ ಪತ್ರ ಬರೆದಿದ್ದರು.