Saturday, July 12, 2025

ಸತ್ಯ | ನ್ಯಾಯ |ಧರ್ಮ

ನಮ್ಮ ಪಕ್ಷದ ಅಕೌಂಟಿನಲ್ಲಿದ್ದ 66 ಕೋಟಿ ರೂ ಎಗರಿಸಿದ ಕೇಂದ್ರ: ಕಾಂಗ್ರೆಸ್‌ ಮುಖಂಡರ ಆರೋಪ


ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 66 ಕೋಟಿ ರೂ.ಗಳನ್ನು ತೆರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.


ಈ ಸಂಬಂಧ ಗುರುವಾರ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಅಜಯ್ ಮಾಕೆನ್ ಅವರು ಕಾಂಗ್ರೆಸ್ ಪಕ್ಷ, ಭಾರತೀಯ ಯುವ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ಮೇಲೆ ವಿಧಿಸಿರುವ 210 ಕೋಟಿ ರೂಪಾಯಿ ತೆರಿಗೆ ಬೇಡಿಕೆಯ ಹಿನ್ನೆಲೆಯಲ್ಲಿ ಬ್ಯಾಂಕುಗಳು 66 ಕೋಟಿ ರೂಪಾಯಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾಯಿಸುವಂತೆ ಬಲವಂತಪಡಿಸಲಾಗಿದೆ. ಈ ತೆರಿಗೆ ಬೇಡಿಕೆಯ ಬಗ್ಗೆ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿರುವ ಅರ್ಜಿ ಇನ್ನೂ ಬಾಕಿ ಇರುವಾಗಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.


ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಪ್ರಮುಖ ವಿರೋಧ ಪಕ್ಷವನ್ನು ಸದೆಬಡಿಯುವ ಉದ್ದೇಶದಿಂದ ಪಕ್ಷದ ಖಾತೆಯಿಂದ ಸುಮಾರು 66 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಇದು ‘ತೆರಿಗೆ ಭಯೋತ್ಪಾದನೆʼಯಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದರು.


ರಾಜಕೀಯ ಎದುರಾಳಿಗಳನ್ನು ಕಂಗೆಡಿಸುವ ಸಲುವಾಗಿ ಖಾತೆಯಿಂದ ಬಲವಂತವಾಗಿ ಹಣ ಪಡೆಯುವಂತೆ ಮಾಡಿರುವುದು ದೇಶದಲ್ಲಿ ಇದೇ ಮೊದಲು. 2017ರ ನೋಟು ರದ್ದತಿಯಂತಹ ಕ್ರಮಗಳು ಬಿಜೆಪಿಯ ಹತಾಶ ಪ್ರಯತ್ನಗಳು ಎಂದು ಆಪಾದಿಸಿದರು.


ಕಾಂಗ್ರೆಸ್ ಪಕ್ಷದ ಹಣವನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ. ನಾವು ಚುನಾವಣೆ ಪ್ರಚಾರ ಕೈಗೊಳ್ಳುವುದು, ಚುನಾವಣೆಯಲ್ಲಿ ಹೋರಾಡುವುದು ಹೇಗೆ? ಇದು ಕಾಂಗ್ರೆಸ್ ನ ಹತ್ಯೆಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ನಿರಂಕುಶ ಪ್ರಭುತ್ವದತ್ತ ಒಯ್ಯುತ್ತಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್‌ ಮುಖಂಡರು ಮಾಡಿದರು.


ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಜೈರಾಮ್ ರಮೇಶ್ ಅವರು ಕೇಂದ್ರದ ಕ್ರಮವನ್ನು ತೆರಿಗೆ ದರೋಡೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆಯಿಂದ ವಿನಾಯ್ತಿ ಇದ್ದು, 2019ರಲ್ಲಿ ನಿಗದಿತ ಗಡುವು ಮುಗಿದು ಕೆಲವೇ ದಿನಗಳಲ್ಲಿ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲಾಗಿದ್ದನ್ನೇ ಆಧಾರವಾಗಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ದಶಕಗಳಲ್ಲಿ ಬಿಜೆಪಿ ಮೇಲೆ ಯಾವ ಹಂತದಲ್ಲಾದರೂ ತೆರಿಗೆ ಬೇಡಿಕೆಯನ್ನು ಹೇರಲಾಗಿತ್ತೇ ಎಂಬುದನ್ನು ಬಿಜೆಪಿ ಬಹಿರಂಗಪಡಿಸಲಿ ಎಂದು ಮಾಕೆನ್ ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page