Wednesday, March 11, 2026

ಸತ್ಯ | ನ್ಯಾಯ |ಧರ್ಮ

ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರ: ಚೀನಾ ಹೂಡಿಕೆ ನಿಯಮ ಸಡಿಲಿಕೆ, ಜಲ ಜೀವನ ಮಿಷನ್ ಅವಧಿ ವಿಸ್ತರಣೆ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ದೇಶದ ಆರ್ಥಿಕತೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮುಖ್ಯವಾಗಿ, ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ದೇಶಗಳಿಂದ ಬರುವ ವಿದೇಶಿ ನೇರ ಹೂಡಿಕೆ (FDI) ನಿಯಮಗಳನ್ನು ಕೇಂದ್ರ ಸರ್ಕಾರ ಸರಳಗೊಳಿಸಿದೆ. ಚೀನಾ ಸೇರಿದಂತೆ ಗಡಿ ರಾಷ್ಟ್ರಗಳ ಹೂಡಿಕೆಗೆ ಈವರೆಗೆ ಇದ್ದ ‘ಪೂರ್ವಾನುಮತಿ’ ಪಡೆಯುವ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿರುವುದು ಕೈಗಾರಿಕಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ದೇಶದ ಪ್ರತಿಯೊಂದು ಗ್ರಾಮೀಣ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೈಪ್ ಮೂಲಕ ಒದಗಿಸುವ ಮಹತ್ವಾಕಾಂಕ್ಷೆಯ ‘ಜಲ ಜೀವನ ಮಿಷನ್’ ಯೋಜನೆಯ ಗಡುವುವನ್ನು 2028ರ ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ. ಯೋಜನೆಯ ವ್ಯಾಪ್ತಿಯನ್ನು ಸಂಪೂರ್ಣವಾಗಿ ಪೂರೈಸುವ ಮತ್ತು ಬಾಕಿ ಉಳಿದಿರುವ ಗ್ರಾಮಗಳಿಗೆ ನಳದ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಕಾಲಮಿತಿ ಹೆಚ್ಚಿಸಲಾಗಿದೆ. ಇದು ಗ್ರಾಮೀಣ ಭಾಗದ ಜನರಿಗೆ ಸುಸ್ಥಿರ ನೀರಿನ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.

ಮೂಲಸೌಕರ್ಯ ವಿಸ್ತರಣೆಯ ಭಾಗವಾಗಿ, ತಮಿಳುನಾಡಿನ ಮಧುರೈ ವಿಮಾನನಾಳವನ್ನು ‘ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಘೋಷಿಸಲು ಕೇಂದ್ರ ಸಂಪುಟವು ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ದಕ್ಷಿಣ ಭಾರತದ ಪ್ರವಾಸೋದ್ಯಮ ಮತ್ತು ವ್ಯಾಪಾರ ವಹಿವಾಟಿಗೆ ಹೆಚ್ಚಿನ ವೇಗ ಸಿಗಲಿದ್ದು, ವಿದೇಶಿ ಪ್ರಯಾಣಿಕರಿಗೆ ಮಧುರೈಗೆ ನೇರ ಸಂಪರ್ಕ ಸಾಧ್ಯವಾಗಲಿದೆ. ಈ ಬದಲಾವಣೆಯು ಸ್ಥಳೀಯ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page