Saturday, January 3, 2026

ಸತ್ಯ | ನ್ಯಾಯ |ಧರ್ಮ

ಕಾರ್ಮಿಕರ ದೈನಂದಿನ ಕೆಲಸದ ಗಂಟೆಗಳ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೇ ಬಿಟ್ಟ ಕೇಂದ್ರ ಸರ್ಕಾರ; ಕಾರ್ಮಿಕ ಸಂಘಟನೆಗಳಿಂದ ಆಕ್ಷೇಪ

ದೆಹಲಿ: ಕಾರ್ಮಿಕರ ದೈನಂದಿನ ಕೆಲಸದ ಗಂಟೆಗಳನ್ನು ಖರಾರು ಮಾಡುವ ನಿರ್ಧಾರವನ್ನು ಹೊಸ ಕಾರ್ಮಿಕ ಸಂಹಿತೆಗಳ ಕರಡು ನಿಯಮಗಳು ರಾಜ್ಯಗಳಿಗೇ ಬಿಟ್ಟಿರುವುದರಿಂದ, ಖಾಸಗಿ ಆಡಳಿತ ಮಂಡಳಿಗಳು ಕಾರ್ಮಿಕರನ್ನು ಶ್ರಮ ಶೋಷಣೆಗೆ ಗುರಿಪಡಿಸುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಮತ್ತು ಕಾರ್ಮಿಕ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

2019 ರಲ್ಲಿ ಅಂಗೀಕರಿಸಲಾದ ನಾಲ್ಕು ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ನೂತನ ಕರಡು ನಿಯಮಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಂಗಳವಾರ ಬಿಡುಗಡೆ ಮಾಡಿ ಅವುಗಳ ಮೇಲೆ ಅಭಿಪ್ರಾಯಗಳನ್ನು ಕೇಳಿದೆ.

2020 ರಲ್ಲಿ ಬಿಡುಗಡೆ ಮಾಡಿದ್ದ ಕರಡು ನಿಯಮಗಳನ್ನು ಕಾರ್ಮಿಕ ಸಂಘಟನೆಗಳು ತಡೆದಿದ್ದರಿಂದ ಸರ್ಕಾರವು ಹೊಸದಾಗಿ ಇವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಬೇಕಾಯಿತು. ವೇತನ ಕಾಯ್ದೆಗೆ ಸೇರಿದ ಹೊಸ ಕರಡು ನಿಯಮಗಳು ಹಿಂದಿನ ಕರಡು ನಿಯಮಗಳಿಗಿಂತಲೂ ಕಳಪೆಯಾಗಿವೆ ಎಂದು ವಿಮರ್ಶಕರು ವ್ಯಾಖ್ಯಾನಿಸಿದ್ದಾರೆ.

1948 ರ ಕನಿಷ್ಠ ವೇತನ ಕಾಯ್ದೆಯ ಮಾದರಿಯಲ್ಲೇ ಹಳೆಯ ಕರಡು ನಿಯಮಗಳೂ ಸಹ ಒಂದು ಗಂಟೆ ವಿರಾಮದೊಂದಿಗೆ ದಿನಕ್ಕೆ 9 ಗಂಟೆಗಳ ಕೆಲಸದ ಅವಧಿಯನ್ನು ನಿರ್ದೇಶಿಸಿದ್ದವು. ಆದರೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ನಿರ್ದೇಶಿಸಿದ ನಿಯಮಗಳಿಗೆ ಅನುಗುಣವಾಗಿ ವಾರಕ್ಕೆ 48 ಕೆಲಸದ ಗಂಟೆಗಳಂತೆ, ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ಭಾರತ ಅಂಗೀಕರಿಸಿದೆ.

ಆದರೆ ಹೊಸ ಕರಡು ನಿಯಮಗಳು ದೈನಂದಿನ ಕೆಲಸದ ಗಂಟೆಗಳ ಮಿತಿಯನ್ನು ನಿರ್ದೇಶಿಸಿಲ್ಲ. ಇದನ್ನು ರಾಜ್ಯಗಳಿಗೇ (ಕಾರ್ಮಿಕ ಕ್ಷೇತ್ರವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬೇಕು) ಕೇಂದ್ರವು ಬಿಟ್ಟುಕೊಟ್ಟಿದೆ.

ಕೆಲಸದ ಗಂಟೆಗಳನ್ನು ನಿರ್ದೇಶಿಸದ ಕಾರಣ ರಾಜ್ಯ ಸರ್ಕಾರಗಳು ದಿನಕ್ಕೆ 10 ರಿಂದ 12 ಗಂಟೆ ಕೆಲಸ ಮಾಡಬೇಕೆಂದು ಆದೇಶಿಸಿ ನೋಟಿಫಿಕೇಶನ್ ಹೊರಡಿಸುವ ಸಾಧ್ಯತೆಯಿದೆ ಎಂದು ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಮತ್ತು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಇನ್ನಷ್ಟು ಶ್ರಮ ಶೋಷಣೆಗೆ ಗುರಿಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದಿನಂತೆಯೇ ವಾರಕ್ಕೆ 48 ಕೆಲಸದ ಗಂಟೆಗಳನ್ನು ಹೊಸ ಕರಡು ನಿರ್ದೇಶಿಸಿದರೂ ಸಹ, ದಿನಕ್ಕೆ ಎಷ್ಟು ಗಂಟೆ ಇರಬೇಕೆಂದು ಹೇಳದ ಕಾರಣ ದಿನಕ್ಕೆ 12 ಗಂಟೆಗಳಂತೆ ವಾರಕ್ಕೆ ನಾಲ್ಕು ದಿನ ಕೆಲಸ ಮಾಡಿಸಿಕೊಳ್ಳುವ ಅಪಾಯವಿದೆ ಎಂದು ಅವರು ತಿಳಿಸಿದ್ದಾರೆ.

ಫುಡ್ ಡೆಲಿವರಿ ಏಜೆಂಟ್‌ಗಳನ್ನು, ಕ್ಲೀನರ್‌ಗಳನ್ನು ಅಥವಾ ಕ್ಷೌರಿಕರನ್ನು ಕೆಲಸಗಳ ನಿಮಿತ್ತ ಮನೆಗಳಿಗೆ ಕಳುಹಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ದಿನಕ್ಕೆ ಹೆಚ್ಚು ಕೆಲಸದ ಅವಧಿಯನ್ನು ಮಾಡಿಸಿಕೊಂಡ ಪಕ್ಷದಲ್ಲಿ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಯಿದೆ ಎಂದು ತಜ್ಞರು ವಾದಿಸುತ್ತಿದ್ದಾರೆ.

ಫ್ಯಾಕ್ಟರಿಗಳಲ್ಲಿ ವಾರಕ್ಕೊಮ್ಮೆ ಅಥವಾ ಮಾಸಿಕ ವೇತನ ಪಡೆಯುವ ಕಾರ್ಮಿಕರ ಕೈಯಲ್ಲಿ ಓವರ್‌ಟೈಮ್ ಪೇಮೆಂಟ್ ಇಲ್ಲದೆಯೇ ದಿನದಲ್ಲಿ ಹೆಚ್ಚು ಗಂಟೆ ಕೆಲಸ ಮಾಡಿಸಿಕೊಂಡು, ವಾರಕ್ಕೆ 48 ಗಂಟೆಗಳ ನಿಯಮಕ್ಕೆ ಒಳಪಟ್ಟು ಇತರ ದಿನಗಳಲ್ಲಿ ಹೆಚ್ಚುವರಿಯಾಗಿ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಅವರು ವಾದಿಸಿದ್ದಾರೆ.

ವಿಶ್ವದಾದ್ಯಂತ ಪ್ರಾಮಾಣಿಕವಾಗಿರುವ ದಿನಕ್ಕೆ 8 ಗಂಟೆಗಳ ಕೆಲಸದ ವಿಧಾನವನ್ನು ಕಾರ್ಮಿಕ ಸಚಿವಾಲಯವು ಸ್ಪಷ್ಟವಾಗಿ ಪ್ರಸ್ತಾಪಿಸಬೇಕಿತ್ತು ಎಂದು ಗುರಗಾಂವ್‌ನ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್ ಮತ್ತು ಕಾರ್ಮಿಕ ಅರ್ಥಶಾಸ್ತ್ರಜ್ಞ ಶ್ಯಾಮ್ ಸುಂದರ್ ತಿಳಿಸಿದ್ದಾರೆ.

ವಾರಕ್ಕೆ 48 ಗಂಟೆಗಳ ಕೆಲಸದ ಅವಧಿಯನ್ನು ಕೇಂದ್ರವು ಉಲ್ಲೇಖಿಸಿದರೂ ಸಹ, ದಿನಕ್ಕೆ ಎಷ್ಟು ಗಂಟೆ ಕೆಲಸ ಎಂದು ನಿರ್ದೇಶಿಸದ ಕಾರಣ ಇದನ್ನು ರಾಜ್ಯ ಸರ್ಕಾರಗಳು ತಮಗೆ ಅನುಕೂಲಕರವಾಗಿ ಬಳಸಿಕೊಂಡು ಕಾರ್ಮಿಕರ ಶ್ರಮ ಶೋಷಣೆಗೆ ಮುಂದಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page