Wednesday, December 31, 2025

ಸತ್ಯ | ನ್ಯಾಯ |ಧರ್ಮ

ಅಮೆರಿಕದೊಂದಿಗಿನ ಒಪ್ಪಂದದ ಪರಿಣಾಮ: ಅಡುಗೆ ಅನಿಲ ಸಬ್ಸಿಡಿಗೆ ಕತ್ತರಿ ಹಾಕಲು ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಅಡುಗೆ ಅನಿಲಕ್ಕೆ (LPG) ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಇತ್ತೀಚೆಗೆ ಅಮೆರಿಕದ ರಫ್ತುದಾರರೊಂದಿಗೆ ಮಾಡಿಕೊಂಡಿರುವ ವಾರ್ಷಿಕ ಒಪ್ಪಂದದ ಹಿನ್ನೆಲೆಯಲ್ಲಿ, ಸಬ್ಸಿಡಿ ಲೆಕ್ಕಾಚಾರದ ಸೂತ್ರವನ್ನು ಬದಲಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಸರ್ಕಾರವು ಪಶ್ಚಿಮ ಏಷ್ಯಾದ ದೇಶಗಳಿಂದ ಅನಿಲ ಪೂರೈಕೆಗೆ ಮಾನದಂಡವಾಗಿರುವ ‘ಸೌದಿ ಕಾಂಟ್ರಾಕ್ಟ್ ಪ್ರೈಸ್’ (CP) ಆಧಾರದ ಮೇಲೆ ಸಬ್ಸಿಡಿಯನ್ನು ನಿರ್ಧರಿಸುತ್ತಿದೆ.

ಆದರೆ, ಕಳೆದ ತಿಂಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಅಮೆರಿಕದಿಂದ ಸುಮಾರು 2.2 ಮಿಲಿಯನ್ ಮೆಟ್ರಿಕ್ ಟನ್ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ.

ಇದು ಭಾರತದ ಒಟ್ಟು ಆಮದಿನ ಶೇ. 10 ರಷ್ಟಿದೆ. ಅಮೆರಿಕದ ಮಾನದಂಡದ ಬೆಲೆಗಳನ್ನು ಲೆಕ್ಕಾಚಾರಕ್ಕೆ ಸೇರಿಸಿಕೊಂಡರೆ ಸಬ್ಸಿಡಿ ಪ್ರಮಾಣದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಸೌದಿ ಅರೇಬಿಯಾಕ್ಕೆ ಹೋಲಿಸಿದರೆ ಅಮೆರಿಕದಿಂದ ಅನಿಲ ಸಾಗಣೆಯ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿರುವುದರಿಂದ, ಇದು ನೇರವಾಗಿ ಎಲ್‌ಪಿಜಿ ಬೆಲೆಗಳ ಮೇಲೆ ಪರಿಣಾಮ ಬೀರಬಹುದು ಎಂದು ತೈಲ ಕಂಪನಿಗಳ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಸೌದಿ ಅರೇಬಿಯಾದ ದರಕ್ಕೆ ಸಮನಾಗಿ ಅಮೆರಿಕದ ಎಲ್‌ಪಿಜಿ ದೊರೆತರೆ ಮಾತ್ರ ಭಾರತಕ್ಕೆ ಆರ್ಥಿಕ ಲಾಭವಾಗಲಿದೆ. ಇಲ್ಲದಿದ್ದಲ್ಲಿ, ಹೆಚ್ಚುವರಿ ಸಾಗಣೆ ವೆಚ್ಚದ ಹೊರೆಯು ಗ್ರಾಹಕರ ಮೇಲೆ ಬೀಳುವ ಅಥವಾ ಸರ್ಕಾರದ ಸಬ್ಸಿಡಿ ಹೊರೆ ತಗ್ಗಿಸಲು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಈ ಹೊಸ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page