ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಅಶ್ಲೀಲ, ಅನುಚಿತ ಮತ್ತು ಕಾನೂನುಬಾಹಿರ ವಿಷಯಗಳ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು (MeitY) ತೀವ್ರವಾಗಿ ಪ್ರತಿಕ್ರಿಯಿಸಿದೆ.
ವಿಶೇಷವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ಕಂಟೆಂಟ್ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯವು ಹೊಸ ಮಾರ್ಗಸೂಚಿಯನ್ನು (Advisory) ಹೊರಡಿಸಿದೆ.
ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ, ಯಾವುದೇ ಮೂರನೇ ವ್ಯಕ್ತಿಯ ಮಾಹಿತಿಯನ್ನು ತನ್ನ ವೇದಿಕೆಯಲ್ಲಿ ಅಪ್‌ಲೋಡ್ ಮಾಡಿದರೆ ಅಥವಾ ಪ್ರಕಟಿಸಿದರೆ, ಅದರ ಸಂಪೂರ್ಣ ಜವಾಬ್ದಾರಿಯು ಆಯಾ ಸೋಶಿಯಲ್ ಮೀಡಿಯಾ ಸಂಸ್ಥೆಗಳದ್ದೇ ಆಗಿರುತ್ತದೆ ಎಂದು ಸರ್ಕಾರ ನೆನಪಿಸಿದೆ.
ಸದ್ಯಕ್ಕೆ ಅನೇಕ ವೇದಿಕೆಗಳು ಇಂತಹ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕುವಲ್ಲಿ ವಿಫಲವಾಗಿವೆ ಎಂದು ಐಟಿ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.
ಒಂದು ವೇಳೆ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ಐಟಿ ಕಾಯ್ದೆ ಮಾತ್ರವಲ್ಲದೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಇತರ ಕಾನೂನುಗಳ ಅಡಿಯಲ್ಲಿ ಸಂಬಂಧಿತ ಸಂಸ್ಥೆಗಳು ಮತ್ತು ಬಳಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ಎಚ್ಚರಿಸಿದೆ. ಆನ್‌ಲೈನ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಅನಿವಾರ್ಯ ಎಂದು ಸಚಿವಾಲಯ ತಿಳಿಸಿದೆ.
