Friday, November 15, 2024

ಸತ್ಯ | ನ್ಯಾಯ |ಧರ್ಮ

ಮಂಗಳೂರು ರೈಲ್ವೇ ಸ್ಟೇಷನ್ನಿನಲ್ಲಿ ಮಲಯಾಳಿ ಬೋರ್ಡ್:‌ ಪ್ರಯಾಣಿಕರಿಂದ ರೈಲ್ವೇ ಸಚಿವರಿಗೆ ದೂರು

ಮಂಗಳೂರು: ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ಮಂಗೂರು ನಿಲ್ದಾಣದಲ್ಲಿ ಮಲಯಾಳಂ ಪಾರುಪತ್ಯ ಮೊದಲಿನಿಂದಲೂ ನಡೆದಿದೆ. ಈಗ ಅದಕ್ಕೆ ಹೊಸ ಸೇರ್ಪಡೆಯೆಂಬಂತೆ ಪ್ರಯಾಣಿಕರ ಮಾಹಿತಿ ಫಲಕವೊಂದು ಮಲಯಾಳದಲ್ಲಿ ಬಂದು ಕುಳಿತಿದೆ.

ಮಂಗಳೂರಿನ ಸೆಂಟ್ರಲ್‌ ನಿಲ್ದಾಣದ ಟಿಕೆಟ್‌ ಬುಕಿಂಗ್‌ ಕೌಂಟರ್‌ ಬಳಿ ಇರಿಸಲಾಗಿರುವ ಮಾಹಿತಿ ಫಲಕದಲ್ಲಿ ಮಲಯಾಳಿ ಭಾಷೆಯೇ ತುಂಬಿದ್ದು ಅಲ್ಲಿ ಕನ್ನಡ ಮಾಹಿತಿ ಲಭ್ಯವಿಲ್ಲದಿರುವುದರಿಂದಾಗಿ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ತುಳು, ಕನ್ನಡ, ಕೊಂಕಣಿ, ಬ್ಯಾರಿ ಮೊದಲಾದ ಭಾಷೆ ಮಾತನಾಡುವ ಜನರು ಹೆಚ್ಚಿರುವ ಮಂಗಳೂರಿನಲ್ಲಿ ಮಲಯಾಳಂ ಬೋರ್ಡ್‌ ಹಾಕಿರುವುದರ ಹಿಂದಿನ ಲಾಜಿಕ್‌ ಅರ್ಥವಾಗದೆ ಜನರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಮಂಗಳೂರಿನಲ್ಲಿ ಹಲವು ಭಾಷೆ ಮಾತನಾಡುವ ಜನರಿದ್ದೂ ಅಲ್ಲಿ ಕನ್ನಡ ಸಾರ್ವಜನಿಕ ಮಾಹಿತಿಯ ಭಾಷೆಯಾಗಿರುವುದರಿಂದ ಮಾಹಿತಿಯನ್ನು ತುಳು ಅಥವಾ ಕನ್ನಡದಲ್ಲಿ ನೀಡಬೇಕೆಂದು ದಕ್ಷಿಣ ಕನ್ನಡ ರೈಲ್ವೇ ಬಳಕೆದಾರರು ತಮ್ಮ ಟ್ವಿಟರ್‌ ಹ್ಯಾಂಡಲ್‌ ಮೂಲಕ ಆಗ್ರಹಿಸಿದ್ದಾರೆ. ಈ ಕುರಿತು ಗಮನಹರಿಸುವಂತೆ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್‌ ಹಾಗೂ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರನ್ನೂ ಕೋರಿದ್ದಾರೆ.‌

ರೈಲ್ವೇ ಬಳಕೆದಾರರ ಕೂಗಿಗೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರೂ ಸ್ಪಂದಿಸಿದ್ದು, ಅವರು “ಮಂಗಳೂರಿನ ರೈಲು ನಿಲ್ದಾಣಗಳು ದಕ್ಷಿಣ ರೈಲ್ವೆಯ ಅಡಿಯಲ್ಲಿ ಬರುತ್ತವೆ ಆದರೆ ಅವು ಕರ್ನಾಟಕದ ಮಂಗಳೂರಿನಲ್ಲಿವೆ. ಭಾರತೀಯ ರೈಲ್ವೆ ಮಾನದಂಡಗಳ ಪ್ರಕಾರ, ನಿಲ್ದಾಣದ ಮಾಹಿತಿ ಫಲಕಗಳು ಇಂಗ್ಲಿಷ್, ಹಿಂದಿ ಮತ್ತು ರಾಜ್ಯದ ಅಧಿಕೃತ ಭಾಷೆ ಕನ್ನಡದಲ್ಲಿರಬೇಕು.

ಕರ್ನಾಟಕದ ನಿಲ್ದಾಣದಲ್ಲಿ ಮಲಯಾಳಂ ಬೋರ್ಡ್ ಏಕೆ? ಕಣ್ಣೂರು ಅಥವಾ ಕಾಸರಗೋಡು ನಿಲ್ದಾಣಗಳಲ್ಲಿ ಕನ್ನಡ ಬೋರ್ಡುಗಳನ್ನು ನೋಡಲು ಸಾಧ್ಯವೇ? ಮಾಹಿತಿ ಫಲಕವನ್ನು ತುಳು ಭಾಷೆಯಲ್ಲಿ ಆಳವಡಿಸುವುದಾದರೆ ಅದು ಸ್ವಾಗತಾರ್ಹ, ಆದರೆ ಇಲ್ಲಿ ಮಲಯಾಳಂ ಬೋರ್ಡ್ ಸೂಕ್ತವಲ್ಲ.

ಅದನ್ನು ತೆಗೆದು ಕನ್ನಡ ಫಲಕವನ್ನು ಹಾಕುವ ಮೂಲಕ ಮಂಗಳೂರಿನ ಜನತೆಗೆ ಗೌರವ ನೀಡಬೇಕಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ ಸಚಿವ ಸೋಮಣ್ಣ ಅವರಿಗೂ ವಿಷಯ ತಿಳಿಯುವಂತೆ ಟ್ಯಾಗ್‌ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page