ನವದೆಹಲಿ: ದೇಶಾದ್ಯಂತ ಮಕ್ಕಳ ನಾಪತ್ತೆ, ಅಪಹರಣ ಹಾಗೂ ಬಲವಂತವಾಗಿ ಕರೆದೊಯ್ಯುವ ಪ್ರಕರಣಗಳ ತನಿಖೆಗೆ ಏಕರೂಪ ವ್ಯವಸ್ಥೆ ರೂಪಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿತುಅರ್ಜಿದಾರರು, ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳ ತನಿಖೆಗೆ ದೇಶಾದ್ಯಂತ ಒಂದೇ ರೀತಿಯ ಮಾರ್ಗಸೂಚಿ ಹಾಗೂ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ. ಇಂತಹ ಪ್ರಕರಣಗಳ ತನಿಖೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಮಕ್ಕಳನ್ನು ಅಪಹರಿಸುವ ಅಥವಾ ಬಲವಂತವಾಗಿ ಕರೆದೊಯ್ಯುವ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ಪ್ರಕ್ರಿಯೆ ರೂಪಿಸಬೇಕು ಎಂದು ಕೋರಲಾಗಿದೆ.ಅಲ್ಲದೆ, ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗೆ ಶಿಕ್ಷಣ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಕಾನೂನು ಆಯೋಗಕ್ಕೂ ನೋಟಿಸ್ ಜಾರಿ ಮಾಡಿದೆ.ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಯಲ್ಲಿ ವಿಳಂಬವಾಗದಂತೆ ದೇಶಾದ್ಯಂತ ಪರಿಣಾಮಕಾರಿ ಹಾಗೂ ಸಮನ್ವಯಿತ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂಬುದು ಅರ್ಜಿಯ ಪ್ರಮುಖ ಅಂಶವಾಗಿದೆ. ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ನೋಟಿಸ್ಗಳಿಗೆ ಸಂಬಂಧಪಟ್ಟ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಇತರ ಸಂಸ್ಥೆಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಬೇಕಿದೆ.
