Sunday, October 12, 2025

ಸತ್ಯ | ನ್ಯಾಯ |ಧರ್ಮ

‘ನಮ್ಮ ಪಾತ್ರವಿಲ್ಲ’: ಅಫ್ಘಾನ್ ಸಚಿವರ ಸುದ್ದಿಗೋಷ್ಠಿಯಿಂದ ಮಹಿಳಾ ಪತ್ರಕರ್ತೆಯರ ಹೊರಗಿಡುವಿಕೆ ಕುರಿತು ಕೇಂದ್ರದ ಸ್ಪಷ್ಟನೆ

ದೆಹಲಿ: ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ಸರ್ಕಾರದ ನೇತೃತ್ವ ವಹಿಸಿರುವ ತಾಲಿಬಾನ್ ನಾಯಕ, ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಹೇರಲಾಗಿತ್ತು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮೊದಲ ಬಾರಿಗೆ ಸ್ಪಷ್ಟನೆ ನೀಡಿದೆ. ಈ ಘಟನೆಯಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.

ಈ ಕುರಿತು ವಿದೇಶಾಂಗ ಸಚಿವಾಲಯ (MEA) ಪ್ರತಿಕ್ರಿಯೆ ನೀಡಿದ್ದು, ಪತ್ರಿಕಾಗೋಷ್ಠಿಗೆ ಆಹ್ವಾನಗಳನ್ನು ಮುಂಬೈನಲ್ಲಿರುವ ಅಫ್ಘಾನಿಸ್ತಾನದ ಕಾನ್ಸುಲ್ ಜನರಲ್‌ನಿಂದ ಆಯ್ದ ಪತ್ರಕರ್ತರಿಗೆ ಕಳುಹಿಸಲಾಗಿತ್ತು. ಜೊತೆಗೆ, ಅಫ್ಘಾನ್ ರಾಯಭಾರ ಕಚೇರಿಯ ಪ್ರದೇಶವು ಭಾರತ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಶುಕ್ರವಾರ ಅಫ್ಘಾನಿಸ್ತಾನ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯರು ಭಾಗವಹಿಸದ ಕಾರಣ, ಮತ್ತು ಕೆಲವರನ್ನು ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ವಿವಾದ ಭುಗಿಲೆದ್ದಿತ್ತು. ಮಹಿಳಾ ವರದಿಗಾರರು ಡ್ರೆಸ್ ಕೋಡ್ ಗೌರವಿಸಿದ್ದರೂ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅನೇಕ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ತಾಲಿಬಾನ್ ಆಡಳಿತವು ಮಹಿಳೆಯರ ಮೇಲೆ ವಿಧಿಸುವ ನಿರ್ಬಂಧಗಳಿಗೆ (ಕೆಲಸ ಮಾಡುವುದನ್ನು ತಡೆಯುವುದು, ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಲೇಖಕರ ಪುಸ್ತಕ ನಿಷೇಧಿಸುವುದು ಮತ್ತು 18 ಕೋರ್ಸ್‌ಗಳನ್ನು ಕೈಬಿಡುವುದು ಸೇರಿದಂತೆ) ಹೆಸರುವಾಸಿಯಾಗಿದೆ.

ಕೇಂದ್ರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು

ಮಹಿಳಾ ಪತ್ರಕರ್ತರ ಮೇಲಿನ ಈ ನಿರ್ಬಂಧದ ಕುರಿತು ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

“ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲು ನೀವು ಅನುಮತಿಸಿದಾಗ, ಭಾರತದ ಪ್ರತಿಯೊಬ್ಬ ಮಹಿಳೆಗೂ ಅವರ ಪರವಾಗಿ ನಿಲ್ಲಲು ನೀವು ತುಂಬಾ ದುರ್ಬಲರು ಎಂದು ಹೇಳುತ್ತಿದ್ದೀರಿ. ಅಂತಹ ತಾರತಮ್ಯದ ವಿರುದ್ಧ ನಿಮ್ಮ ಮೌನವು ನಾರಿ ಶಕ್ತಿಯ ಕುರಿತಾದ ನಿಮ್ಮ ಘೋಷಣೆಗಳ ಶೂನ್ಯತೆಯನ್ನು ಬಯಲು ಮಾಡುತ್ತದೆ” ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯವರಲ್ಲದೆ, ಪ್ರಿಯಾಂಕಾ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಕೂಡ ಈ ವಿಚಾರವಾಗಿ ಕೇಂದ್ರವನ್ನು ಪ್ರಶ್ನಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page