Saturday, January 3, 2026

ಸತ್ಯ | ನ್ಯಾಯ |ಧರ್ಮ

ಗ್ರೋಕ್ ಎಐ ಅಶ್ಲೀಲ ಕಂಟೆಂಟ್ ತೆಗೆದುಹಾಕಲು ಎಕ್ಸ್‌ಗೆ ಕೇಂದ್ರದಿಂದ 72 ಗಂಟೆಗಳ ಗಡುವು

ಎಐ ಚಾಟ್‌ಬಾಟ್ ಗ್ರೋಕ್ (Grok) ಮೂಲಕ ಸೃಷ್ಟಿಸಲಾದ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು 72 ಗಂಟೆಗಳ ಒಳಗೆ ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಎಕ್ಸ್ (X) ಸಂಸ್ಥೆಗೆ ಗಡುವು ನೀಡಿದೆ. ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಚ್ಚರಿಸಿದೆ.

ಗ್ರೋಕ್ ಎಐ ಬಳಸಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸುಲಭವಾಗಿ ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ಶಿವಸೇನೆ (UBT) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಕಠಿಣ ಕ್ರಮ ಕೈಗೊಂಡಿದೆ.

ಐಟಿ ಕಾಯ್ದೆ 2000 ಮತ್ತು 2021ರ ಐಟಿ ನಿಯಮಗಳ ಅಡಿಯಲ್ಲಿ ಎಕ್ಸ್ ಸಂಸ್ಥೆಯು ಪಾಲಿಸಬೇಕಾದ ಕಾನೂನುಬದ್ಧ ಜವಾಬ್ದಾರಿಗಳಲ್ಲಿ ಗಂಭೀರ ಲೋಪಗಳಿರುವುದನ್ನು ಸಚಿವಾಲಯ ಪತ್ತೆಹಚ್ಚಿದೆ. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಅಶ್ಲೀಲ ಕಂಟೆಂಟ್ ಸೃಷ್ಟಿಸುತ್ತಿರುವುದಕ್ಕೆ ಸಚಿವಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಾನೂನುಬಾಹಿರ ಕಂಟೆಂಟ್ ಸೃಷ್ಟಿಯನ್ನು ತಡೆಯಲು ತನ್ನ ತಾಂತ್ರಿಕ ಮತ್ತು ಆಡಳಿತಾತ್ಮಕ ನೀತಿಗಳನ್ನು ಸಮಗ್ರವಾಗಿ ಮರುಪರಿಶೀಲಿಸುವಂತೆ ಎಕ್ಸ್‌ಗೆ ಸೂಚಿಸಲಾಗಿದೆ. ಅಲ್ಲದೆ, ಗ್ರೋಕ್ ಎಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಳಕೆದಾರರ ಖಾತೆಗಳನ್ನು ಅಮಾನತುಗೊಳಿಸಲು ಅಥವಾ ಶಾಶ್ವತವಾಗಿ ತೆಗೆದುಹಾಕಲು ಸರ್ಕಾರ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page