ಟಿವಿ ಚಾನೆಲ್‌ಗಳಿಗೆ ಪ್ರತಿ ಗಂಟೆಗೆ 12 ನಿಮಿಷಗಳ ಜಾಹೀರಾತು ಮಿತಿ ರದ್ದು: ಕೇಂದ್ರ ಸರ್ಕಾರದಿಂದ ತೀರ್ಮಾನ

ಹೊಸದೆಹಲಿ: ದೂರದರ್ಶನ ಚಾನೆಲ್‌ಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 12 ನಿಮಿಷಗಳ ಜಾಹೀರಾತು ಪ್ರಸಾರಕ್ಕೆ ವಿಧಿಸಲಾಗಿದ್ದ ಕಾಲಮಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಮಾಧ್ಯಮ ಕ್ಷೇತ್ರದಲ್ಲಿ ನ್ಯಾಯಯುತ ಸ್ಪರ್ಧೆಯನ್ನು ಉತ್ತೇಜಿಸಲು ಹಾಗೂ ಸುಲಭ ವ್ಯಾಪಾರ ವಹಿವಾಟಿಗೆ (Ease of Doing Business) ಪೂರಕ ವಾತಾವರಣ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ದೂರದರ್ಶನದಲ್ಲಿ ಜಾಹೀರಾತುಗಳ ಅವಧಿಯ ಈ ಮಿತಿಯನ್ನು ‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು-1994’ ರ ಅಡಿಯಲ್ಲಿ 2006 ರಲ್ಲಿ ಜಾರಿಗೆ ತರಲಾಗಿತ್ತು. ಆ ಸಮಯದಲ್ಲಿ ಭಾರತದಲ್ಲಿ ಕೇವಲ 62 ಟಿವಿ ಚಾನೆಲ್‌ಗಳಿದ್ದವು. ಆದರೆ ಪ್ರಸ್ತುತ ದೇಶದಲ್ಲಿ 900 ಕ್ಕೂ ಹೆಚ್ಚು ಚಾನೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸಾರ ಮಾಧ್ಯಮ ಕ್ಷೇತ್ರವು ಅಗಾಧ ಬದಲಾವಣೆ ಕಂಡಿದೆ.

2006 ರ ಅವಧಿಯಲ್ಲಿ ಅನಲಾಗ್ ತಂತ್ರಜ್ಞಾನದ ಕೇಬಲ್ ಟಿವಿ ಪ್ರಮುಖ ಮಾಧ್ಯಮವಾಗಿದ್ದು, ಸೀಮಿತ ಚಾನೆಲ್‌ಗಳು ಮಾತ್ರ ಲಭ್ಯವಿದ್ದವು. ಆದರೆ ಈಗ ಕೇಬಲ್ ಟಿವಿ, ಡಿಟಿಎಚ್ (DTH), ಹಿಟ್ಸ್ (HITS) ಹಾಗೂ ಐಪಿಟಿವಿ (IPTV) ಸೇರಿದಂತೆ ಎಲ್ಲಾ ವಿತರಣಾ ವೇದಿಕೆಗಳು ಸಂಪೂರ್ಣ ಡಿಜಿಟಲೀಕರಣಗೊಂಡಿವೆ. ಪ್ರತಿಯೊಂದು ವೇದಿಕೆಯಲ್ಲೂ 300 ರಿಂದ 500 ಕ್ಕೂ ಅಧಿಕ ಚಾನೆಲ್‌ಗಳು ಲಭ್ಯವಿದ್ದು, ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನಿರ್ಮಾಣವಾಗಿದೆ.

ಭಾರತದಲ್ಲಿ ಪೇ-ಚಾನೆಲ್ ಅಥವಾ ಉಚಿತ ಚಾನೆಲ್ (Free-to-Air) ಎರಡೂ ಹೆಚ್ಚಾಗಿ ಜಾಹೀರಾತು ಆದಾಯದ ಮೇಲೆಯೇ ಅವಲಂಬಿತವಾಗಿವೆ. ಮತ್ತೊಂದೆಡೆ, ಡಿಜಿಟಲ್ ಮಾಧ್ಯಮಗಳಿಗೆ ಯಾವುದೇ ಜಾಹೀರಾತು ಕಾಲಮಿತಿಯ ನಿಯಮವಿಲ್ಲದ ಕಾರಣ, ಸಾಂಪ್ರದಾಯಿಕ ಟಿವಿ ಚಾನೆಲ್‌ಗಳು ಹಿನ್ನಡೆ ಅನುಭವಿಸುತ್ತಿದ್ದವು. ಈ ಅಸಮಾನತೆಯನ್ನು ಸರಿಪಡಿಸಲು ಹಾಗೂ ಟಿವಿ ಮಾಧ್ಯಮಕ್ಕೂ ಸಮಾನ ವೇದಿಕೆ ಕಲ್ಪಿಸಲು ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.

‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು-1994’ ಕ್ಕೆ ಮಾಡಲಾದ ತಿದ್ದುಪಡಿಯ ಅಧಿಸೂಚನೆ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಈ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು