Home ದೇಶ ಕೇಂದ್ರದ ಕಳಪೆ ಆರ್ಥಿಕ ನೀತಿಯಿಂದಾಗಿ ನಿರುದ್ಯೋಗ ಮತ್ತು ಕಡಿಮೆ ಆದಾಯ – ಶಶಿ ತರೂರ್ ತರಾಟೆ

ಕೇಂದ್ರದ ಕಳಪೆ ಆರ್ಥಿಕ ನೀತಿಯಿಂದಾಗಿ ನಿರುದ್ಯೋಗ ಮತ್ತು ಕಡಿಮೆ ಆದಾಯ – ಶಶಿ ತರೂರ್ ತರಾಟೆ

0

“ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ಅಸಮರ್ಪಕ ಆರ್ಥಿಕ ನೀತಿಗಳನ್ನು ತಂದು ದೇಶದ ಜನರಿನ್ನು ದುಃಖಕ್ಕೆ ತಳ್ಳಿದೆ, ಆದಾಯ ಕಡಿಮೆಯಾಗಿ, ನಿರುದ್ಯೋಗ ಹೆಚ್ಚಾಗಿ ದೇಶವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ,” ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ನಡೆದ ಮಧ್ಯಂತರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಭಾಷಣ ಮಾಡಿದ ಇವರು ಕೇಂದ್ರದ ಕಳಪೆ ಹಣಕಾಸು ನಿರ್ವಹಣೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತರೂರ್ ತಮ್ಮ ಭಾಷಣದಲ್ಲಿ, 2016 ರ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಪ್ರಾರಂಭಿಸಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ದೇಶದಲ್ಲಿನ ಎಂಎಸ್‌ಎಂಇಗಳಿಗೆ ಹಾನಿ, ರೈತರ ಸಂಕಷ್ಟಗಳು, ಉದ್ಯೋಗ ಹೆಚ್ಚಳದಲ್ಲಿ ಕಳಪೆ ಸಾಧನೆ ಹಾಗೂ ವ್ಯಾಪಕ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ನೋಟು ಅಮಾನ್ಯೀಕರಣದಂತಹ ಕೆಟ್ಟ ನೀತಿಯನ್ನು ಕೆಟ್ಟದಾಗಿ ಜಾರಿಗೆ ಬಂದರೆ, ಜಿಎಸ್‌ಟಿಯು ಒಳ್ಳೆಯ ಆಲೋಚನೆಯಾದರೂ, ಕೆಟ್ಟದಾಗಿ ವಿನ್ಯಾಸಗೊಳಿಸಿ ಕಳಪೆ ರೀತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ತರೂರ್ ಹೇಳಿದ್ದಾರೆ.

“ಸರಕು ಮತ್ತು ಸೇವಾ ತೆರಿಗೆಯನ್ನು ನಮ್ಮ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ತುಳಿಯಲು ಬಳಸಲಾಗಿದೆ ಮತ್ತು ನೋಟು ರದ್ದತಿ ಭಾರತದ ಉದ್ಯೋಗ-ಉತ್ಪಾದಿಸುವ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಾಶವಾಗಲು ಕಾರಣವಾಯಿತು. ಇದು 45 ವರ್ಷಗಳ ನಿರುದ್ಯೋಗವನ್ನು ಉಂಟುಮಾಡಿತು ಮತ್ತು 2013 ರಲ್ಲಿ ಪ್ರಾರಂಭವಾದ ಆರ್ಥಿಕ ಚೇತರಿಕೆಯನ್ನು ಕೊನೆಗೊಳಿಸಿತು, ಆದರೆ ಅದರ ಎಲ್ಲಾ ಉದ್ದೇಶಗಳೂ ವಿಫಲವಾಗಿದೆ,” ಎಂದು ಅವರು ಹೇಳಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ನಾಲ್ಕು ‘ಜಾತಿಗಳು’ – ಮಹಿಳೆಯರು, ಯುವಕರು, ರೈತರು ಮತ್ತು ಬಡವರು – ಸಾಮಾಜಿಕ ಮತ್ತು ಆರ್ಥಿಕ ನೀತಿಯ ಕಾರ್ಯಕ್ಷಮತೆಯ ಸೂಚಕಗಳಲ್ಲಿ ಕೆಟ್ಟ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದ ಗುಂಪುಗಳಾಗಿವೆ ಎಂದು ಅವರು ಹೇಳಿದ್ದಾರೆ.

“ಭಾರತದಲ್ಲಿ ಕೆಲಸವಿಲ್ಲದ ಹತಾಶ ಯುವಕರು ಇಸ್ರೇಲ್‌ನಲ್ಲಿ ಉದ್ಧದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡಲು ಸರತಿ ಸಾಲಿನಲ್ಲಿ ನಿಂತಿರುವಾಗ ಸರ್ಕಾರ ತನ್ನ ಯಶಸ್ಸಿನ ಬಗ್ಗೆ ಹೇಳಿಕೆಗಳನ್ನು ನೀಡುವುದು ದುರಂತ ವ್ಯಂಗ್ಯ,” ಎಂದು ತರೂರ್ ವಿಷಾದಿಸಿದ್ದಾರೆ.

“ಒಟ್ಟಾರೆಯಾಗಿ, 8-9 ಪ್ರತಿಶತದಷ್ಟು ನಿರುದ್ಯೋಗ ದರವು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. 2017 ರಲ್ಲಿ ನಿರುದ್ಯೋಗವು 45 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ, ಪ್ರಸ್ತುತ CMIE ಡೇಟಾದ ಪ್ರಕಾರ 7.3 ಪ್ರತಿಶತದಷ್ಟಿದೆ, ಆದರೆ ಕೆಲವೇ ತಿಂಗಳುಗಳ ಹಿಂದೆ 8 ಶೇಕಡಾಕ್ಕಿಂತ ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ.

ಭಾರತದ ಆರ್ಥಿಕತೆಯು ಸದ್ಯ 2012 ರಲ್ಲಿ ಉದ್ಯೋಗ ನೀಡಿದ್ದಕ್ಕಿಂತ ಕಡಿಮೆ ಜನರಿಗೆ ಉದ್ಯೋಗ ಕೊಡುತ್ತಿದೆ ಎಂದು ಆರೋಪಿಸಿರುವ ತರೂರ್‌, “ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ ಉದ್ಯೋಗಗಳ ಪ್ರಮಾಣ ಕುಸಿದಿವೆ, ಆರ್ಥಿಕವಾಗಿ ಅನಿಶ್ಚಿತ ಆದಾಯ ತರುವ ಕನ್ಸ್ಟ್ರಕ್ಷನ್‌ ಕೆಲಸಗಳಲ್ಲಿ ಮತ್ತು ಕೆಳ-ಮಟ್ಟದ ಸೇವಾ ವಲಯದಲ್ಲಿ ಮಾತ್ರ ಅವರು ಏನಾದರೂ ಒಂದು ಉದ್ಯೋಗ ನೋಡುತ್ತಿದ್ದಾರೆ. ಇಸ್ರೇಲ್‌ನಲ್ಲಿ ಉದ್ಯೋಗ ಹುಡುಕಲು ಹೊರಟಿರುವ ನಮ್ಮ ಜನರು ತಮ್ಮ ಜೀವ ಮತ್ತು ದೇಹವನ್ನು ಅಪಾಯಕ್ಕೆ ಒಡ್ಡಿಕೊಳ್ಳಲು ಸಿದ್ಧರಾಗಿದ್ದಾರೆ, ಜೀವನೋಪಾಯಕ್ಕಾಗಿ ಸಾವನ್ನೂ ಎದುರಿಸಲು ಹಿಂದೆಮುಂದೆ ನೋಡುತ್ತಿಲ್ಲ,” ಎಂದು ತರೂರ್‌ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆ ಉದ್ಯೋಗಗಳಲ್ಲಿ ಕೃಷಿಯ ಪಾಲು ಹೆಚ್ಚಿದೆ, ಕೃಷಿ ವಲಯದ ಹೊರಗೆ ಸಾಕಷ್ಟು ಉದ್ಯೋಗಗಳು ಲಭ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ತರೂರ್‌ ಹೇಳಿದ್ದಾರೆ.

You cannot copy content of this page

Exit mobile version