Thursday, June 13, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಎಮ್ಮೆಲ್ಲೆ ಟಿಕೆಟ್ ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ಬಿಜೆಪಿ ಟಿಕೆಟ್ ಹಗರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳನ್ನು ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಆಕೆ ಸಂಪೂರ್ಣವಾಗಿ ನಾರ್ಮಲ್ ಆಗಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವಿಚಾರಣೆ ವೇಳೆ ಕುಸಿದು ಬಿದ್ದಿದ್ದರಿಂದ ಚೈತ್ರಾಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆ ಮೂರ್ಛೆ ರೋಗದಿಂದ ಬಳಲುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆದರೆ, ವಿಚಾರಣೆ ತಪ್ಪಿಸಲು ಹೈ ಡ್ರಾಮಾ ಸೃಷ್ಟಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ಹೇಳಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಚೈತ್ರಾಗೆ ಯಾವುದೇ ಸಮಸ್ಯೆಯಿಲ್ಲದಿರುವುದು ದೃಢಪಟ್ಟಿದೆ.

ಟಿಕೆಟ್ ಹಗರಣಕ್ಕೆ ಸಂಬಂಧಿಸಿದಂತೆ ಆಕೆಯಿಂದ ಎಸ್‌ಯುವಿ ಕಾರ್‌, 1.1 ಕೋಟಿ ರೂಪಾಯಿ ನಗದು ಮತ್ತು 40 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೈಗಾರಿಕೋದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ 5 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡವನ್ನು ವಿಶೇಷ ವಿಭಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಶಪಡಿಸಿಕೊಂಡಿರುವ ಸೊತ್ತುಗಳ ಕುರಿತು ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಉಡುಪಿ, ಕುಂದಾಪುರದಲ್ಲಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಉತ್ತರ ಕರ್ನಾಟಕ ಭಾಗದ ಬಾಗಲಕೋಟೆಯಲ್ಲಿ SUVಯನ್ನು ಪತ್ತೆಹಚ್ಚಲಾಗಿದೆ.

ಇದೇ ವೇಳೆ ಚೈತ್ರಾ ಹಗರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದು, ಹಗರಣದ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರವನ್ನೂ ಬರೆದಿದ್ದಾಳೆ.

ಈ ನಡುವೆ ಬಿಜೆಪಿ ಟಿಕೆಟ್ ಭರವಸೆ ನೀಡಿ ಕೈಗಾರಿಕೋದ್ಯಮಿಯಿಂದ 1.5 ಕೋಟಿ ರೂಪಾಯಿ ಪಡೆದಿದ್ದ ಖ್ಯಾತ ಮಠಾಧೀಶ ಅಭಿನವ ಹಾಲಶ್ರೀಗಾಗಿ ಪೊಲೀಸರ ಶೋಧ ಮುಂದುವರೆದಿದೆ.

Related Articles

ಇತ್ತೀಚಿನ ಸುದ್ದಿಗಳು