Thursday, June 13, 2024

ಸತ್ಯ | ನ್ಯಾಯ |ಧರ್ಮ

‘ಚಲಂ’ ಎಂಬ ಬದುಕಿನ ಕಡು ವ್ಯಾಮೋಹಿ

ತೆಲುಗಿನ ಪ್ರಭಾವಿ ಲೇಖಕ  ಗುಡಿಪಾಟಿ ವೆಂಕಟಾಚಲಂ ಬದುಕಿದ ರೀತಿ ಅದ್ಭುತ. ʼಚಲಂʼ ಅವರ ಆತ್ಮಕತೆ. ಅವರಷ್ಟು ನಿರ್ಭಿಡೆಯಿಂದ ಆತ್ಮಕತೆಯನ್ನು ಬರೆದವರು ವಿರಳಾತಿ ವಿರಳ ಅನ್ನಬಹುದು. ಚಲಂ ಅವರ ಬಗ್ಗೆ ಆಪ್ತವಾಗಿ ಈ ವಾರದ ʼಯುವನೋಟʼದಲ್ಲಿ ಬರೆದಿದ್ದಾರೆ ಗುರು ಸುಳ್ಯ

ಇಪ್ಪತ್ತನೆಯ ಶತಮಾನ ಬಾಯಿ ತೆರೆಯುತ್ತಿದ್ದಾಗ..

ರವಿ ಬೆಳಗೆರೆಯೆಂಬ ಬರಹಗಾರನನ್ನು ಓದಲು ನಿಲ್ಲಿಸಿ ಅದಾವುದೋ ಕಾಲವಾಯಿತು. ಆದರೆ ಆತ ಅನುವಾದಿಸಿದ ತೆಲುಗು ಬರಹಗಾರ ‘ಗುಡಿಪಾಟಿ ವೆಂಕಟಾಚಲಂ’ ನ ಜೀವನಚರಿತ್ರೆ ‘ಚಲಂ’ ಮಾತ್ರ ನನ್ನನ್ನು ಬಿಟ್ಟು ಹೋಗಲೇ ಇಲ್ಲ. ಹದಿನೈದು ವರ್ಷಗಳ ಹಿಂದೆ ಓದಿದಾಗ ನನ್ನೊಳಗೆ ಒಂದು ಸಣ್ಣ ಕಿಡಿ ಹೊತ್ತಿಸಿದ್ದ ಪುಸ್ತಕವದು. ಆವತ್ತು, ಆವಾಗಷ್ಟೇ  ಒಳಗೆ ಭುಗಿಲೇಳುತ್ತಿದ್ದ ಪ್ರಶ್ನೆಗಳ ಮೇಲೆ ರೋಡ್ ರೋಲರ್ ಹತ್ತಿಸಿದ ಹಾಗಾಗಿತ್ತು. ಇವತ್ತು ಮತ್ತೆ ಓದಿದಾಗ, ಅನುವಾದಕನ ಹಂಗಿಲ್ಲದೇ ಚಲಂ ಅನ್ನೋ ವ್ಯಕ್ತಿತ್ವ, ಆತ ಸೃಷ್ಟಿಸಿದ ಕಲೆ, ಬದುಕಿದ ರೀತಿ- ವೈಭವೀಕರಿಸ ಬೇಕಾದದ್ದಾಗಿಯೋ, ತಿರಸ್ಕರಿಸ ಬೇಕಾದದ್ದಾಗಿಯೋ ಕಾಣಿಸುತ್ತಿಲ್ಲ. ಚಲಂನನ್ನು ಅನುಕರಿಸಲು ಸಾಧ್ಯವಿಲ್ಲ, ಪ್ರಯತ್ನಿಸಬೇಡಿ ಅನ್ನುತ್ತಾರೆ ರವಿ. ನನಗನಿಸುವ ಮಟ್ಟಿಗೆ ಯಾರು ಯಾರನ್ನು ಅನುಕರಿಸಬೇಕಿಲ್ಲ. ಪ್ರತಿಯೊಬ್ಬರ ಬದುಕು, ಅದರ ಭಾವನೆಗಳ ಆವೇಗ, ಅಲೋಚನೆಯ ರೂಪಾಂತರಗಳು ಭಿನ್ನ. ಸಾಯುವವರೆಗೆ ಬದುಕುವ ನಶೆ ಕಳೆದುಹೋಗದಿರಲಿ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

1894 ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಇಪ್ಪತ್ತನೆಯ ಶತಮಾನ ಬಾಯ್ತೆರೆಯುವಾಗ ಬದುಕಲಾರಂಭಿಸಿದವನು ಚಲಂ. ಆವಾಗ ಅಧಿಕಾರದ ಗದ್ದುಗೆಯಲ್ಲಿದ್ದವರು ಮುಂದೆ ಭಾರತವೆಂಬ ದೇಶವನ್ನು ಹುಟ್ಟು ಹಾಕಿದ ಬ್ರಿಟೀಷರು. ಜಾತಿ ಪದ್ಧತಿಯ ಕೊಳಚೆಯಿಂದಾಗಿ, ಬ್ರಿಟೀಷರ ಸರಕಾರದಲ್ಲಿ ದೊಡ್ಡ ಹುದ್ದೆಗಳನ್ನು, ಹೆಚ್ಚಿನ ವಿದ್ಯಾಭ್ಯಾಸಗಳನ್ನು ಬ್ರಾಹ್ಮಣರು ಮಾತ್ರ ಪಡೆಯುತ್ತಿದ್ದ ಕಾಲಘಟ್ಟವದು. ಇಂಗ್ಲೀಷರ ಸರಕಾರವಿದ್ದುದರಿಂದಲೇ ಚಲಂನ ಬರಹಗಳು ನಿ‍ಷೇಧಕ್ಕೆ ಒಳಗಾಗಿರಲಿಲ್ಲ. ವಿಜ್ಞಾನ ತನ್ನ ಹೆಜ್ಜೆಗಳನ್ನು ವೇಗವಾಗಿರಿಸುತ್ತಿದ್ದ ವರುಷಗಳು ಅವು. ಇಂಗ್ಲೀಷ್ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಚಲಂ, ಜೀವ ವಿಕಾಸದ ಸಂಶೋಧನೆಗಳನ್ನು ಹೆಚ್ಚಾಗಿ ಓದಿಕೊಂಡಿರುವ ಸಾಧ್ಯತೆಗಳಿವೆ. ದೇವರನ್ನು ತಿರಸ್ಕರಿಸಿ ಬದುಕಿದರೂ, ದೇವರ ಇರುವಿಕೆ-ಇಲ್ಲದಿರುವಿಕೆಯ ಕುರಿತು ಚಲಂ ಗೊಂದಲದ ಗೂಡಾಗಿದ್ದುದು, ಅದು ಅವನನ್ನು ತಳಮಳಕ್ಕೀಡು ಮಾಡಿದ್ದು ಗೊತ್ತಾಗುತ್ತದೆ. ಆದ್ದರಿಂದಲೇ, ಆತನ ವೈಜ್ಞಾನಿಕ ಅರಿವಿಗೆ ಇತಿ-ಮಿತಿಗಳಿರುವುದು ತಿಳಿಯುತ್ತದೆ. ಆದರೂ, ಯಾವ ಗೊಡ್ಡು ನಂಬಿಕೆಗಳಿಗು ಬಲಿಯಾಗದೆ ಬದುಕಿನ ರಸವನ್ನೆಲ್ಲ ಹೀರುತ್ತಾ, ನಿರ್ಭಿಡೆಯಾಗಿ ಬರೆದು, ಬದುಕಿಕೊಂಡ ಚಲಂ.

ಮಾನವತಾವಾದಿ ಚಲಂ

ಮೊದ ಮೊದಲು ಬ್ರಹ್ಮ ಸಮಾಜದೆಡೆಗೆ ಆಕರ್ಷಿತನಾಗಿ ಅವರ ತತ್ವಗಳನ್ನು ಪಾಲಿಸಲು ಶ್ರಮಿಸಿದ. ತನ್ನ ಜನಿವಾರ ಕಿತ್ತೆಸೆದ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಚಲಂನ ಹೆಂಡತಿ ತನ್ನ ತಾಳಿಯನ್ನು ಕಿತ್ತೆಸೆಯುತ್ತಾಳೆ. ಬ್ರಹ್ಮ ಸಮಾಜವನ್ನು ಸ್ಥಾಪಿಸಿದ ‘ರಾಜಾರಾಮ್ ಮೋಹನ ರಾಯ್’ ರ ಚಳುವಳಿಯು ಪ್ರಮುಖ ಕಾರಣವಾಗಿ ‘ವಿಧವಾ ಮರು ವಿವಾಹ’ ಕಾನೂನು ಜಾರಿಗೆ ಬಂದಿತ್ತು. ವಿಧವಾ ಮರು ವಿವಾಹ ಚಳುವಳಿಯನ್ನು ಆಂಧ್ರದಲ್ಲಿ ಮುಂದುವರಿಸಿದವರು ಒಂದು ಹಂತದಲ್ಲಿ ಚಲಂನ ಗುರುವಾಗಿ ಕಂಡ ವೀರೇಶ ಲಿಂಗಂ. ಆದರೆ ಚಲಂ ವಿವಾಹ ಅನ್ನೋ ಪದ್ಧತಿಯನ್ನೆ ವಿರೋಧಿಸುತ್ತಾನೆ. ಸಂಪೂರ್ಣ ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾನೆ, ಹಾಗೆಯೇ ಬದುಕುತ್ತಾನೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಗಂಡಿನಷ್ಟೇ ಹಕ್ಕು ಹೆಣ್ಣಿಗು ಸಿಗಬೇಕೆಂದು ಒತ್ತಾಯಿಸುತ್ತಾ, ವೈಯಕ್ತಿಕ ಕ್ರಾಂತಿಗೆ ಒಳಗಾಗುತ್ತಾನೆ. ಹೆಣ್ಣಿನೆಡೆಗಿನ ಆಕರ್ಷಣೆ ಅವನನ್ನು ಬ್ರಹ್ಮ ಸಮಾಜದಿಂದ ವಿಮುಖನನ್ನಾಗಿಸುತ್ತದೆ. ಧಾರ್ಮಿಕ ಪರಿಶುದ್ಧತೆಯನ್ನು ಆಚರಿಸಲಾಗದೆ ತೊಳಲಾಡುತ್ತಾನೆ. ದೇವರನ್ನು ಹಾಗು ಮನುಷ್ಯ ಬದುಕಿಗೆ ವಿರುದ್ಧವಾದ ಎಲ್ಲಾ ಆಚರಣೆಗಳನ್ನು ಧಿಕ್ಕರಿಸುತ್ತಾನೆ. ದಿಕ್ಕಿಲ್ಲದವರನ್ನು, ದಿಕ್ಕೆಟ್ಟವರನ್ನು, ಮುಟ್ಟಬಾರದವರನ್ನು, ದರಿದ್ರರೆನಿಸಿಕೊಂಡವರನ್ನು ಜಾತಿ-ಮತ-ಧರ್ಮಗಳ ಹಂಗಿಲ್ಲದೇ ಅಪ್ಪಿಕೊಳ್ಳುತ್ತಾನೆ. ಇಡೀ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಬರೆಯುತ್ತಿದ್ದ ಚಲಂನನ್ನು ಅತಿಯಾಗಿ ಪ್ರೀತಿಸುವ ಮತ್ತು ಅತಿಯಾಗಿ ದ್ವೇಷಿಸುವ ಎರಡೂ ಬಗೆಯ ಜನರೂ ಇದ್ದರು. ಪರಿಚಯಸ್ಥ ಸಮಾಜದಿಂದ ಬಹಿಷ್ಕೃತನಾದ. ಸಂಪ್ರದಾಯವಾದಿಗಳನ್ನು ಎದುರು ಹಾಕಿಕೊಂಡ. ಯಾವುದಕ್ಕು ಜಗ್ಗದೆ ತನ್ನಿಷ್ಟದಂತೆಯೇ ಜೀವಿಸುತ್ತಾನೆ ಚಲಂ ಅನ್ನೋ ಮಾನವತಾವಾದಿ.

ದೇಹದ ಮೋಹವ ಹತ್ತಿಕ್ಕದಿರು

ಗೋದಾವರಿಯ ತೀರಗಳಲ್ಲಿ, ತುಂಗೆಯ ಮಡಿಲಲ್ಲಿ , ಮದ್ರಾಸಿನ ಬೀದಿಗಳಲ್ಲಿ ಓಡಾಡಿದ ಚಲಂ ಸ್ವಾತಂತ್ರ್ಯವನ್ನೇ ಉಸಿರಾಡಿದ. ಕಾಕಿನಾಡ, ಕರೀಂನಗರ, ರಾಜಮಂಡ್ರಿ ಮುಂತಾದೆಡೆ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಲೇ, ಸರಕಾರದ ಈ ಕೆಲಸವೆಂಬುದು ಗುಲಾಮಗಿರಿ ಅಂತಂದುಕೊಂಡ. ಆತನ ಬರಹಗಳಿಂದ ಪ್ರೇರಿತರಾಗಿ, ಅವನಂತೆಯೇ ಸ್ವಚ್ಛಂದವಾಗಿ ಬದುಕಲು, ಇದ್ದ ನೌಕರಿಗೆ ರಾಜೀನಾಮೆ ಕೊಟ್ಟು ಹೊರಟವರಿದ್ದಾರೆ. ಅವನನ್ನು ಅನುಕರಿಸಲು ಹೋಗಿ, ಸಾಧ್ಯವಾಗದೇ ಭ್ರಮನಿರಸನ ಗೊಂಡವರಿದ್ದಾರೆ. ಆತನನ್ನು ದ್ವೇಷಿಸುತ್ತಲೇ, ಅವನ ಪ್ರಭಾವದಿಂದ ತಪ್ಪಿಸಿ ಕೊಳ್ಳಲಾಗದೆ ಹೋದವರು ಅನೇಕರು. ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಹೊರಟವನ ರೊಮ್ಯಾನ್ಸಿನ ತಪನೆ ಯಾವತ್ತಿಗೂ ಮುಗಿಯಲಿಲ್ಲ. ತನ್ನನ್ನು ಸಂಪೂರ್ಣನನ್ನಾಗಿಸುವ ಸ್ತ್ರೀ ಚೈತನ್ಯವೊಂದರ ಬರುವಿಕೆಯ ಕಲ್ಪನೆಯಲ್ಲೇ ಬಹುಕಾಲ ಬದುಕಿದ್ದ ಆತ. ಅವನ ಶೃಂಗಾರ ವಾಂಛೆಗಳು ಯಾವತ್ತಿಗೂ ಒಂದು ಹೆಣ್ಣು ಅನ್ನುವಲ್ಲಿಗೆ ನಿಂತಿರಲಿಲ್ಲ. “ಹೆಣ್ಣಿಗೊಂದು ದೇಹವಿದೆ ಅದಕ್ಕೆ ವ್ಯಾಯಾಮ ಬೇಕು, ಹೆಣ್ಣಿಗೊಂದು ಮೆದುಳಿದೆ ಅದಕ್ಕೆ ಅರಿವು ಬೇಕು, ಹೆಣ್ಣಿಗೊಂದು ಹೃದಯವಿದೆ ಅದಕ್ಕೆ ಅನುಭವ ಬೇಕು’ ಎಂದು ವಾದಿಸಿದ, ಬರೆದ, ಬದುಕಿದ ಚಲಂ. ತಾನು ಪ್ರೀತಿಸಿದವರೆಲ್ಲರಿಗೂ ಎಲ್ಲಾ ಕಾಲದಲ್ಲು ಹೆಗಲಾಗಿರುವುದು ಚಲಂಗೆ ಸಾಧ್ಯವಾಗದೇ ಇರಬಹುದು. ಆದರೆ, ಅವರಿಗೆ ಮಡಿಲಾಗಿ, ಜೊತೆಗೇ ಕೂತು ಅಳುತ್ತಲೂ ಇದ್ದ ವಾಸ್ತವ ಮತ್ತು ಭಾವತೀವ್ರತೆಯ ಮಿಶ್ರಣದಂತಿದ್ದ ಚಲಂ. ಸೆಕ್ಸಿಗು, ರೊಮ್ಯಾನ್ಸಿಗು, ರೇಪಿಗು ವ್ಯತ್ಯಾಸವೇ ಗೊತ್ತಿಲ್ಲದ, ಕಾಮವನ್ನು ನಿಷಿದ್ಧವೆನ್ನುವ ಸಮಾಜದಲ್ಲಿ ಚಲಂ ಎಂಬ ರೊಮ್ಯಾಂಟಿಸ್ಟ್ ನಿರಾಡಂಬರವಾದ ಪ್ರೇಮ ಪಾಠವನ್ನು ಬೋಧಿಸಿದ. ಚಲಂನ  ‘ಪ್ರೇಮಲೇಖನುಲು’ ಪರಿಮಿತಿಗಳಿಲ್ಲದ ಪ್ರೇಮಿಗಳಿಗೆ ಹೊಸತೊಂದು ಲೋಕವನ್ನು ತೆರೆದು ಕೊಟ್ಟಿತು. ದೇಹದ ಮೋಹವನ್ನು ತೊರೆಯದಿರಿ, ಅದಕ್ಕೆ ಪರಿಶುದ್ಧತೆಯನ್ನು ಲೇಪಿಸದಿರಿ, ವೈವಿಧ್ಯತೆಯನ್ನು ಅರಸಿ ಹೋಗುವ ದೇಹವನ್ನು ನಿರ್ಬಂಧಿಸದಿರಿ, ಅದರ ಇಂಚಿಂಚನ್ನು ಅನುಭವಿಸಿರಿ ಎಂದು ಕರೆ ಕೊಟ್ಟ. “ಹೆಣ್ಣೇ, ಗಂಡು ಮೆದುಳಿನ ಕುತಂತ್ರಗಳಿಗೆ ಬಲಿಯಾಗದಿರು – ನಿನ್ನ ದೇಹ ಮತ್ತು ಮನಸ್ಸಿನ ಸಂಪೂರ್ಣ ಹಕ್ಕು ನಿನ್ನದು, ನಿನ್ನದು ಮಾತ್ರ” ಎಂದು ಸಾರಿ ಹೇಳಿದ.

ಮೈದಾನಂ ಮತ್ತು ಹೆಣ್ಣು

ಆ ಕಾಲಕ್ಕೆ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದ ಚಲಂನ ‘ಮೈದಾನಂ’ ಕಾದಂಬರಿಯನ್ನು ‘ರಮೇಶ್ ಅರೋಲಿ’ ಕನ್ನಡಕ್ಕೆ ತಂದಿದ್ದಾರೆ. ಇದೇ ಡಿಸೆಂಬರ್ ಮೊದಲ ವಾರದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಭಾಷಾ ವಿಭಾಗ, ಆ ಕಾದಂಬರಿಯಲ್ಲಿನ ಸ್ತ್ರೀ ಸಂವೇದನೆಯ ಮೇಲೆ ಸಂವಾದವೊಂದನ್ನು ಏರ್ಪಡಿಸಿತ್ತು. ಗೌರವಾನ್ವಿತ ಸಮಾಜದಲ್ಲಿ ಬದುಕುವ ಅರ್ಹತೆಯನ್ನೇ ಕಳೆದು ಕೊಂಡಂತಿರುವ ಅಮೀರ್ ಮತ್ತು ಶೋಕೇಸಿನಂತ ತನ್ನ ದಾಂಪತ್ಯವನ್ನು ತೊರೆದು ಅವನ ಮೋಹದಲ್ಲಿ ಬೀಳುವ ಬ್ರಾಹ್ಮಣ ಕುಲದ ರಾಜೇಶ್ವರಿಯ ಪ್ರೇಮವನ್ನು ಜಲಪಾತವಾಗಿಸಿ, ಜಾತಿ-ಮತಗಳನ್ನು ಕೊಚ್ಚೆಯಾಗಿಸಿ ಬಿಡುತ್ತಾನೆ ಚಲಂ. ಹೆಣ್ಣನ್ನು ಪಾಪಿಯನ್ನಾಗಿ ಬಿಂಬಿಸುತ್ತಿದ್ದ ಶೃಂಗಾರದ ಎಲ್ಲಾ ಮಿತಿಗಳನ್ನು ಒಡೆದು ಬದುಕಿನ ಆನಂದವನ್ನು ಸವಿಯಲು ಎಲ್ಲಾ ಮಹಿಳೆಯರಿಗು ಕರೆಕೊಡುತ್ತದೆ ರಾಜೇಶ್ವರಿಯ ಪಾತ್ರ. ಒಂದು ಬದಿಯಲ್ಲಿ ವಿವಾಹವೆಂಬ ಸ್ತ್ರೀ ವಿರೋಧಿ ವ್ಯವಸ್ಥೆಯನ್ನು ಚಿಂದಿ ಮಾಡುವ ಕಾದಂಬರಿಯದು. ಇನ್ನೊಂದು ಬದಿಯಲ್ಲಿ ಸ್ತ್ರೀ ಸಂವೇದನೆಗೆ ವಿರುದ್ಧವೆನಿಸುವ ಹೆಣ್ಣಿನ ಅಸಹಾಯಕತೆ ಮತ್ತು ತ್ಯಾಗಗಳು ಕಾದಂಬರಿಯಲ್ಲಿ ಸೇರಿಕೊಂಡಿರುವುದು ಸುಳ್ಳಲ್ಲ. ಚಲಂ ಸುಸಂಸ್ಕೃತ ಸಮಾಜಕ್ಕೆ ನಿಷಿದ್ಧ ಎನಿಸಿದ ಎಲ್ಲವನ್ನೂ ಬಿಡು ಬೀಸಾಗಿ ಬರೆದು ಬಿಟ್ಟಿದ್ದ. ಒಂಟಿ ಕೋಣೆಯೊಳಗಿನ ಕತ್ತಲೆಯನ್ನು ಸರಿಸಲು, ಗುಟ್ಟಾಗಿ ನಡೆಯುವ ಪ್ರಣಯ ಕೇಳಿಯನ್ನು ಪ್ರಕೃತಿಯ ಸಹಜತೆಯೊಂದಿಗೆ ಮಿಲನ ಗೊಳಿಸಲು, ಆಡಂಬರಗಳಿಂದ ಪ್ರೇಮವನ್ನು ಮುಕ್ತಗೊಳಿಸಲು ಚಲಂ ಸ್ತ್ರೀ ಪಾತ್ರಗಳು ಶ್ರಮಿಸುತ್ತವೆ. ನಿಜ ಬದುಕಿನಲ್ಲಿ ಚಲಂ ಮತ್ತು ‘ವೊಯ್ಯಿ’ಯ ಪ್ರಣಯವು ಹಾಗೇ, ಅದಿರುಗಳಿಲ್ಲದ್ದು. ಚಲಂನ ಹೆಂಡತಿಯ ಹೆಸರು ‘ರಂಗನಾಯಕಮ್ಮ’. ವೊಯ್ಯಿ ಚಲಂನ ಹೆಂಡತಿಯ ಅಕ್ಕ. ಅವಳ ಹೆಸರು ಕೂಡ ರಂಗನಾಯಕಮ್ಮ ಅಂತಲೇ. ಅದರೆ ಮಕ್ಕಳು ಮತ್ತು ಚಲಂ ಅವಳನ್ನು ವೊಯ್ಯಿ ಅಂತಲೇ ಕರೆಯುತ್ತಾರೆ. ಅವರಿಬ್ಬರೂ ಸೇರಿ ತೊರೆಗಳಲ್ಲಿ, ಕಾಡಿನ ಕುಟೀರಗಳಲ್ಲಿ, ನದಿ ತೀರಗಳಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡು ಪ್ರೇಮಿಸುತ್ತಿದ್ದರು. ಇಂಗ್ಲೀಷ್ ಓದಲು ಬರದಿದ್ದ ವೊಯ್ಯಿಯನ್ನು ಅವಳಿಷ್ಟದಂತೆ ಓದಿಸಿ ಡಾಕ್ಟರ್ ಮಾಡಿಸುತ್ತಾನೆ ಚಲಂ. ವೊಯ್ಯಿ – ಚಲಂನನ್ನು, ಅವನ ಸ್ವಂತ ಮತ್ತು ಸಾಕಿದ ಮಕ್ಕಳನ್ನು, ದಿಕ್ಕಿಲ್ಲದೆ ಬಂದ ಹೆಣ್ಣುಗಳನ್ನು, ಅವರ ಮಕ್ಕಳನ್ನು ತಾನು ಸಾಯುವವರೆಗು ಅಕ್ಷರಶಃ ಪೊರೆದವಳು.

‘T’

ಚಲಂ ತನ್ನ ಹೆಂಡತಿ ರಂಗನಾಯಕಮ್ಮಳನ್ನು ‘T’ ಅಂತ ಕರೆಯುತ್ತಾನೆ. ಮನೆ, ಮಕ್ಕಳು, ಗಂಡ  ಅಂತ ಗಂಡನ ಅಡಿಯಾಳಾಗಿ ಬದುಕಿದ ಹೆಂಗಸರ ನಡುವೆ ಚಲಂನಿಂದ ಪ್ರತ್ಯೇಕ ವ್ಯಕ್ತಿತ್ವವಾಗಿ ನಿಲ್ಲುತ್ತಾಳೆ ರಂಗನಾಯಕಮ್ಮ. ಚಲಂ ತನ್ನ ಹೆಂಡತಿಯನ್ನೂ ಸೇರಿಸಿ, ಎಲ್ಲಾ ಮಹಿಳೆಯರಿಗೂ ಅವರದೇ ಆದ ವ್ಯಕ್ತಿತ್ವವಿದೆ, ಅವರು ಯಾರ ಸೊತ್ತೂ ಅಲ್ಲ, ಅವರು ಅವರಿಗೆ ಬೇಕಾದ ಹಾಗೇ ಬದುಕಲು ಸ್ವತಂತ್ರರು ಅಂತ  ಹೇಳುತ್ತಲೇ, ಬದುಕಿನುದ್ದಕ್ಕೂ ಹಾಗೆಯೇ ನಡೆದುಕೊಂಡ. ಅವಳನ್ನು ಓದಿಸಲು ಮನೆಮಂದಿಯ ವಿರೋಧ ಕಟ್ಟಿಕೊಂಡ. ಸೈಕಲ್ ಮೇಲೆ ಹೆಂಡತಿ ರಂಗನಾಯಕಮ್ಮನವರನ್ನು ಕಾನ್ವೆಂಟ್ ಶಾಲೆಗೆ ಬಿಟ್ಟು ಬರುತ್ತಿದ್ದ ಚಲಂನನ್ನು ಅವನದೇ ಸಮುದಾಯದವರು ಗೇಲಿ ಮಾಡುತ್ತಿದ್ದರು. ಚಲಂಗೋಸ್ಕರ ತನ್ನಿಡೀ ಪರಿವಾರವನ್ನು, ಆಸ್ತಿಯನ್ನು ಬಿಟ್ಟು ಬಂದಿದ್ದಳು ರಂಗನಾಯಕಮ್ಮ. ಚಲಂಗೆ ಇದ್ದ ಪ್ರೇಯಸಿಯರು, ಸ್ವಾತಂತ್ರ್ಯವೇ ಪರಮೋನ್ನತವಾದುದು ಎಂಬ ಬದುಕು ಅವಳನ್ನು ಒಂದಿಷ್ಟು ಕಂಗೆಡಿಸಿದ್ದು ಸುಳ್ಳಲ್ಲ. ಮಕ್ಕಳು ಕೂಡ ಚಲಂನ ಪರವಾಗಿಯೇ ಇದ್ದುದು ಅವಳನ್ನು ಇನ್ನಷ್ಟು ಅಧೀರಳನ್ನಾಗಿಸಿತ್ತು. ಮಕ್ಕಳನ್ನು ಹೊಡೆಯುವುದು ಮತ್ತು ಬಯ್ಯುವುದು ಮಾಡಿದರಷ್ಟೇ ತಡೆಯುತ್ತಿದ್ದ ಚಲಂ, ಉಳಿದಂತೆ ಗಂಡು ಸಮಾಜದ ಬೇರೇ ಯಾವುದೇ ನಿರ್ಬಂಧಗಳನ್ನು ಅವಳ ಮೇಲೆ ಹೇರಲು ತಯಾರಿರಲಿಲ್ಲ. ತನ್ನ ಕೊನೆಯ ದಿನಗಳಿಗೂ ಮುಂಚೆ ರಂಗನಾಯಕಮ್ಮ  ಅರುಣಾಚಲಂನ ರಮಣ ಮಹರ್ಷಿಗಳ ಆಶ್ರಮದಲ್ಲಿದ್ದಳು. ಅಲ್ಲಿಂದ ಆಕೆ ಬರೆದು ಕಳುಹಿಸಿದ ರಾಶಿಗಟ್ಟಲೆ ಪತ್ರಗಳನ್ನು ಚಲಂ ಕಸದ ಬುಟ್ಟಿಗೆ ಹಾಕುತ್ತಾನೆ. ಅದಕ್ಕೆ ಕಾರಣ, ಮನೋ ವೈಕಲ್ಯದಿಂದ ಬಳಲುತ್ತಿದ್ದ ಅವಳ ಪತ್ರಗಳಲ್ಲಿ ಯಾವುದೇ ಅರ್ಥವಿಲ್ಲದೆ ಎಲ್ಲವೂ ಕಲಸುಮೇಲೋಗರವಾಗಿರುತ್ತಿದ್ದುದು. ಮುಂದೆ, ಆ ಪತ್ರಗಳು ಸಾಧಾರಣ ಮನುಷ್ಯರು ಓದಲಾಗದ್ದಕ್ಕೆ, ನನ್ನ ಪರಿಮಿತಿಗಳು ಕಾರಣವಾಗಿದ್ದಿರಬಹುದು ಎಂದು ನೊಂದುಕೊಳ್ಳುತ್ತಾನೆ ಚಲಂ. ಒಳಗಿನ ತಿರುಳನ್ನು ಬಸಿದು ಬರೆದರೆ ಅರ್ಥವಾಗದೆಂದು ದೂರ ತಳ್ಳುವವರ ನಡುವೆ ರಂಗನಾಯಕಮ್ಮ ಬರೆದ ಪತ್ರಗಳು ಹುಚ್ಚಿಯ ಪ್ರಲಾಪಗಳಾದವು. ಚಲಂನ ಸಂಗ ಮಾಡಿದ ಯಾರೂ ಮೊದಲಿನ ಹಾಗಿರುತ್ತಿರಲಿಲ್ಲ. ರೂಪಾಂತರಗೊಳ್ಳುತ್ತಿದ್ದರು. ವೈವಿಧ್ಯರಾಗಿರುತ್ತಿದ್ದರು, ಅವರ ಚಿತ್ತ ಚಿತ್ತಾರವಾಗಿ ಬಿಡುತ್ತಿತ್ತು.

ಠಾಗೋರ್ ಮತ್ತು ಉಮಾರ್ ಖಯ್ಯಾಂ

ಚಲಂ ಮಕ್ಕಳಿಗೆ ಸ್ವತಃ ತಾನೇ ಅಕ್ಷರಾಭ್ಯಾಸ ಮಾಡಿಸುತ್ತಿದ್ದ. ಠಾಗೋರಾರ ಗೀತಾಂಜಲಿಯನ್ನು, ಉಮರ್ ಖಯಾಮನ  ರುಬಾಯಿಗಳನ್ನು ಮಕ್ಕಳಿಗಾಗಿ, ಸ್ನೇಹಿತರಿಗಾಗಿ ಅನುವಾದಿಸಿ ಓದಿ ಹೇಳುತ್ತಿದ್ದ. ಅವರು ಖುಷಿ ಪಡದ ಯಾವುದನ್ನೂ ಮಾಡು ಎಂದು ಒತ್ತಾಯಿಸುತ್ತಿರಲಿಲ್ಲ. ಗೋದಾವರಿ ನದಿಯಲ್ಲಿ ಮಕ್ಕಳನ್ನು ಕರೆದುಕೊಂಡು ದೋಣಿ ಏರಿ ಹೊರಟು ಬಿಡುತ್ತಿದ್ದ, ಮಕ್ಕಳೊಂದಿಗೆ ಈಜಾಡುತ್ತಿದ್ದ ಚಲಂಗೆ ಮಕ್ಕಳ ಬಗ್ಗೆ ಅತೀವ ಪ್ರೀತಿಯಿತ್ತು. ಆದ್ದರಿಂದಲೇ, ಬದುಕಿರುವವರೆಗು ಮದುವೆ ಮತ್ತು ವಿದ್ಯಾಭ್ಯಾಸ ವ್ಯವಸ್ಥೆಯ ಕಡು ವಿರೋಧಿಯಾಗಿದ್ದ. ಮಕ್ಕಳು ನಿಭಾಯಿಸಬೇಕಾದ ಶಾಲೆಗಳನ್ನು ದೊಡ್ಡವರು ಜೈಲು ಮಾಡಿ ಬಿಟ್ಟಿದ್ದಾರೆ ಅನ್ನುತ್ತಿದ್ದ. ಹಾಡು ಕೇಳಿಸಿಕೊಂಡ ಹಾಗೆ, ರುಚಿಯಾದ ತಿಂಡಿಯನ್ನು ಬಾಯಿ ಚಪ್ಪರಿಸಿ ತಿಂದ ಹಾಗೆ, ಆಟವಾಡಿದ ಹಾಗೆ – ಯಾವುದೇ ಒತ್ತಾಯವಿಲ್ಲದೆ ಖುಷಿಯಿಂದ ಇಷ್ಟವಾದದ್ದನ್ನು ಕಲಿಯಬೇಕಾದದ್ದಷ್ಟೇ ವಿದ್ಯೆ ಅನ್ನುತ್ತಿದ್ದ.

ಲೋಕ ನಿಂದಿತ ಚಲಂ

ಚಲಂ ತುಂಬಾ ಇಷ್ಟ ಪಡುವ ‘ರವೀದ್ರನಾಥ್ ಠಾಗೋರ್’ ಅವನ ಮನೆಯ ಸಮೀಪದಲ್ಲೇ ಒಂದೆರಡು ದಿನ ವಾಸವಿದ್ದರಾದರೂ  ಚಲಂಗೆ ಅವರನ್ನು ನೋಡುವ ಉಮೇದಿರಲಿಲ್ಲ. ತಾನು ತುಂಬಾ ಇಷ್ಟ ಪಡುವವರು ತನ್ನೆಡೆಗೆ ಬಂದು ತನ್ನಲ್ಲಿ ಐಕ್ಯವಾಗಬೇಕು ಅನ್ನುವಂತಿತ್ತು ಅವನ ಸೆಳೆತ. ಒಂದು ಭೇಟಿಯಿಂದ, ಔಪಚಾರಿಕ ಮಾತುಗಳಿಂದ ತೃಪ್ತನಾಗುವಂತಿರಲಿಲ್ಲ ಅವನು. ಸಿಕ್ಕರೆ ಪೂರ್ತಿಯಾಗಿ ಸಿಗುವಂತಿರಬೇಕು, ಇಲ್ಲದಿದ್ದರೆ ಏನು ಬೇಕಾಗಿಲ್ಲ ಎಂದವನಿಗೆ ನಡುವಿನ ದಾರಿ ಎಂಬುದಿರಲಿಲ್ಲ. ಅದು ತನ್ನ ಪ್ರೇಯಸಿಯರಾದರು ಅಷ್ಟೇ , ತಾನು ಇಷ್ಟ ಪಡುವ ಗಾಂಧಿಯಾದರು ಸರಿಯೇ. ಚಲಂ ಗೆಳೆಯರೆಡೆಗೆ ಆಕರ್ಷಿತನಾಗುತ್ತಿದ್ದನೇ ಹೊರತು, ಸಿನಿಮಾ, ಸಂಗೀತ ಕಛೇರಿಗಳು ಸೇರಿದಂತೆ ಇಂತಹ ಉಳಿದ ವಿಷಯಗಳೆಡೆಗೆ ಆಕರ್ಷಿತನಾಗಿರಲಿಲ್ಲ. ಅವನ ಅಭಿರುಚಿಯೆಂದರೆ ಪುಸ್ತಕಗಳು, ಅದರಲ್ಲು ತನ್ನನ್ನು ಎಲ್ಲಿಂದೆಲ್ಲಿಗೋ ಕರೆದೊಯ್ಯುವ ಇಂಗ್ಲೀಷ್ ಪುಸ್ತಕಗಳು. ನನ್ನನ್ನು ಓದು ಓದು ಎಂದು ತೀವ್ರತರವಾಗಿ ಹುರಿದುಂಬಿಸಿದ ಒಂದೇ ಒಂದು ತೆಲುಗು ಪುಸ್ತಕ ಇಲ್ಲ ಅನ್ನುತ್ತಾನೆ ಚಲಂ. ಹಾಗೆಯೇ ಚಲಂ ಕಾಟಾಚಾರಕ್ಕೆ ಏನನ್ನೂ ಬರೆಯಲಿಲ್ಲ. ಅಡುಗೆ ಮನೆ, ಮಲಗುವ ಕೋಣೆಗಳ ನಲುಗುಗಳನ್ನು ಜಗಕ್ಕೆ ತಿಳಿಸಿದ. ಹೆಣ್ಣಿನ ಕೊರಳಿನಲ್ಲಿ ಸಿಲುಕಿಕೊಂಡ ಧ್ವನಿಗೆ ಮೈಕ್ ಕೊಟ್ಟ. ಲೋಕವನ್ನೇ ಮರೆತು ಬೀದಿ ಬೀದಿಯಲ್ಲಿ, ಹೊಳೆ ತೀರಗಳಲ್ಲಿ, ಬೆಳದಿಂಗಳ ರಾತ್ರಿಗಳಲ್ಲಿ ಕಳೆದು ಹೋಗುತ್ತಾ, ಊರೂರು  ಅಲೆದಾಡುವುದನ್ನು ಇಷ್ಟ  ಪಡುತ್ತಿದ್ದಾತ ಲೋಕ ನಿಂದಿತ ಚಲಂ.

ಕೊನೆಗೆ ತನ್ನ ಪ್ರೀತಿಯ ನಾಯಿ ‘ಲೂಲು’ವನ್ನು ಬಿಡದೇ, ತನ್ನ ಜೊತೆಗಿರುವವರನ್ನೆಲ್ಲಾ ಕಟ್ಟಿಕೊಂಡು ರಮಣಾಶ್ರಮ ಸೇರಿಕೊಂಡು ಬಿಡುತ್ತಾನೆ. ಕೊನೆಯ ಮೂವತ್ತು ವರ್ಷ ಏನೂ ಬರೆಯದ ಚಲಂ, ತಾನು ಬರೆದ ಯಾವುದನ್ನೂ ಹಿಂತಿರುಗಿ ನೋಡುವುದೂ ಇಲ್ಲ. ಅತ್ತ ಆಂಧ್ರದಲ್ಲಿ ಮಾತ್ರ ಚಲಂ ಸಾಹಿತ್ಯದ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆಗಳಾದುವು. ‘ಚಲಂ ಸ್ಮಶಾನ ಸಾಹಿತ್ಯ’ ಅಂತ ಲೇಖನಗಳೂ ಬರೆಯಲ್ಪಟ್ಟವು. ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಚಲಂ ಎಲ್ಲರಂತೆಯೇ ಸತ್ತು ಹೋದ.

ಗುರು ಸುಳ್ಯ

ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

Related Articles

ಇತ್ತೀಚಿನ ಸುದ್ದಿಗಳು