Tuesday, June 18, 2024

ಸತ್ಯ | ನ್ಯಾಯ |ಧರ್ಮ

ಚಾಮರಾಜನಗರ ಜಿಲ್ಲೆ: ಕೈ ಕೋಟೆಯ ಗೋಡೆ ಅಲುಗಾಡಿಸುವ ಯತ್ನದಲ್ಲಿ ಕಮಲ

ನಾಲ್ಕು ವಿಧಾನಸಭಾ ಕ್ಷೇತ್ರಗಳಿರುವ ಗಡಿ ಜಿಲ್ಲೆ ಚಾಮರಾಜನಗರವೀಗ ಚುನಾವಣೆಯ ಗಡಿಬಿಡಿಯಲ್ಲಿದೆ. ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಈ ಜಿಲ್ಲೆಗೆ ಹೋಗಲು ಶಕುನದ ಕಾರಣಕ್ಕೆ ಮುಖ್ಯಮಂತ್ರಿಗಳು ಹಿಂದೆಮುಂದೆ ನೋಡುತ್ತಾರೆ. ಬೆಟ್ಟ ಗುಡ್ಡಗಳ ಈ ಊರಿನಲ್ಲಿ ಅಭಿವೃದ್ಧಿಯೆನ್ನುವುದು ಮರೀಚಿಕೆಯಾಗಿದೆ.

ಈ ಬಾರಿ ಇಲ್ಲಿನ ನಾಲ್ಕು ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 61 ಅಭ್ಯರ್ಥಿಗಳು ಕಣದಲ್ಲಿದ್ದು ಜಿದ್ದಾಜಿದ್ದಿನ ಹೋರಾಟ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಕಂಡು ಬರುತ್ತಿದೆ.

ಚಾಮರಾಜನಗರ

ಚಾಮರಾಜನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಸತಿ ಸಚಿವ ವಿ. ಸೋಮಣ್ಣ ಕಣದಲ್ಲಿದ್ದು ಕಾಂಗ್ರೆಸ್ಸಿನಿಂದ ಹ್ಯಾಟ್ರಿಕ್‌ ಹೀರೋ ಪುಟ್ಟರಂಗ ಶೆಟ್ಟಿ ಕಣದಲ್ಲಿದ್ದಾರೆ. ಜೆಡಿಎಸ್‌ ಪಕ್ಷದಿಂದ ಆಲೂರು ಮಲ್ಲು ಕಣಕ್ಕಿಳಿದಿದ್ದು ಅವರನ್ನು ನಾಮಪತ್ರ ಹಿಂದೆ ತೆಗೆದುಕೊಳ್ಳುವಂತೆ ಆಗ್ರಹಿಸಿ ರೋಪು ಹಾಕಿದ್ದು ಈಗ ಅವರ ವಿರುದ್ಧ ಎಫ್‌ಐಆರ್‌ ಹಾಕಲು ಕಾರಣವಾಗಿದೆ. ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಸೋಮಣ್ಣ ತೀರಾ ಹತಾಶೆಗೆ ಒಳಗಾಗಿರುವುದು ಕಾಣುತ್ತಿದೆ. ವೀರಶೈವರೇ ಗೆಲ್ಲುತ್ತಿದ್ದ ಈ ಕ್ಷೇತ್ರದಲ್ಲಿ 2008ರಿಂದ ಉಪ್ಪಾರ ಸಮುದಾಯದ ಪುಟ್ಟರಂಗ ಶೆಟ್ಟಿಯವರೇ ಗೆಲ್ಲುತ್ತಿದ್ದು ಈ ಬಾರಿಯೂ ಗೆಲ್ಲುವ ಭರವಸೆಯಲ್ಲಿದ್ದಾರೆ. ವೀರಶೈವ ಮತಗಳು ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಹಂಚಿ ಹೋಗುವ ಸಾಧ್ಯತೆಯಿದ್ದು ಪುಟ್ಟರಂಗ ಶೆಟ್ಟಿ ಧ್ರುವ ನಾರಾಯಣರ ಅನುಪಸ್ಥಿತಿಯಲ್ಲಿ ದಲಿತ ಮತಗಳನ್ನು ತನ್ನತ್ತ ತಿರುಗಿಸಿಕೊಳ್ಳಬೇಕಿದೆ.

ಕೊಳ್ಳೆಗಾಲ

ದಲ್ಲಿ ಕಳೆದ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಎನ್‌ ಮಹೇಶ್‌ ಈ ಬಾರಿ ಬಿಜೆಪಿ ಅಭ್ಯರ್ಥಿ. ಈ ಬಾರಿ ಈ ಮೊದಲು ಬಿಎಸ್‌ಪಿ ತನ್ನ ಅಭ್ಯರ್ಥಿಯಾಗಿ ರೇಖಾ ಅವರನ್ನು ಕಣಕ್ಕಿಳಿಸಿತ್ತಾದರೂ ಮಹೇಶ್‌ ಅವರನ್ನು ಮನೆಗೆ ಕಳುಹಿಸುವ ಸಲುವಾಗಿ ಬಿಎಸ್‌ಪಿ ತನ್ನ ಉಮೇದುವಾರಿಕೆಯನ್ನು ಹಿಂಪಡೆದು ಕಾಂಗ್ರೆಸ್ಸಿಗೆ ತನ್ನ ಬೆಂಬಲ ನೀಡಿದೆ. ಇಲ್ಲಿ ಕಾಂಗ್ರೆಸ್ಸಿನಿಂದ ಎ ಆರ್‌ ಕೃಷ್ಣಮೂರ್ತಿ ಕಣದಲ್ಲಿದ್ದು ಹಿಂದಿನ ಚುನಾವಣೆಯಲ್ಲಿ ಅವರು 52,338 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಈ ಬಾರಿ ಬಿಜೆಪಿ ಬೆಂಬಲ ಮಹೇಶ್‌ ಅವರನ್ನು ದಡ ಮುಟ್ಟಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಜೆಡಿಎಸ್‌ ಪಕ್ಷದಿಂದ ಪುಟ್ಟಸ್ವಾಮಿಯವರು ಕಣದಲ್ಲಿದ್ದು ತ್ರಿಕೋನ ಸ್ಪರ್ಧೆಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಗುಂಡ್ಲುಪೇಟೆ

ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ ಬಿಜೆಪಿಯ ಸಿ. ಎಸ್. ನಿರಂಜನಕುಮಾರ್ ಅವರಿಗೇ ಮತ್ತೆ ಟಿಕೆಟ್‌ ಸಿಕ್ಕಿದ್ದು ಅವರು ಬಂಡಾಯದ ಬಿಸಿ ಎದುರಿಸುತ್ತಿದ್ದಾರೆ. ಅಲ್ಲಿ ಎಮ್‌ ಪಿ ಸುನೀಲ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇತ್ತ ಜೆಡಿಎಸ್‌ ಅಭ್ಯರ್ಥಿಯಾಗಿರುವ ಕಡಬೂರ್ ಮಂಜುನಾಥ್ ಕೂಡಾ ಈ ಹಿಂದೆ ಬಿಜೆಪಿಯಲ್ಲಿದ್ದವರು. ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಮ್‌ ಗಣೇಶ್‌ ಪ್ರಸಾದ್‌ ಕಣದಲ್ಲಿದ್ದು ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಲಿದೆ.

ಹನೂರು

ಹನೂರು ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ನೆರಳು ತೀವ್ರವಾಗಿದೆ. ಈ ಹಿಂದೆ ಜನತಾ ಪರಿವಾರದ ಜೊತೆಗಿದ್ದ ನಾಗಪ್ಪನವರ ಕುಟುಂಬ ಈಗ ಬಿಜೆಪಿ ಜೊತೆಗಿದೆ. ಕಳೆದ ಬಾರಿ 56,931 ಮತಗಳನ್ನು ಪಡೆದು ಮೂರು ಸಾವಿರ ಚಿಲ್ಲರೆ ಮತಗಳ ಅಂತರದಿಂದ ಸೋತಿದ್ದ ಪ್ರೀತನ್‌ ನಾಗಪ್ಪ ಮತ್ತೆ ಕಣದಲ್ಲಿದ್ದಾರೆ. ಹನೂರು ನಾಗಪ್ಪ ಈ ಹಿಂದೆ ಇಲ್ಲಿ ಶಾಸಕರಾಗಿದ್ದವರು. ನಂತರ ವೀರಪ್ಪನ್‌ ಕೈಯಿಂದ ಹತ್ಯೆಗೀಡಾದರು. ಅವರ ನಂತರ ಪತ್ನಿ ಪರಿಮಳಾ ನಾಗಪ್ಪ ಕೂಡಾ ಇಲ್ಲಿ ಒಮ್ಮೆ ಶಾಸಕರಾಗಿದ್ದರು. ಈಗ ಮಗ ಬಿಜೆಪಿಯಿಂದ ಕಣದಲ್ಲಿದ್ದಾರೆ.

ಇನ್ನು ಕಾಂಗ್ರೆಸ್ಸಿನಿಂದ ಆರ್. ನರೇಂದ್ರ ಕಣದಲ್ಲಿದ್ದು ಇವರು ಇಲ್ಲಿನ ಹಾಲಿ ಶಾಸಕ ಕೂಡಾ ಹೌದು. ಕಳೆದ ಬಾರಿಯ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಇವರಿಗೆ ಮಂತ್ರಿ ಪದವಿ ಕೊಡಬೇಕೆನ್ನುವ ದೊಡ್ಡ ಮಟ್ಟದ ಕೂಗಿತ್ತು. ಈ ಬಾರಿ ಗೆದ್ದಲ್ಲಿ ಸಚಿವ ಪದವಿ ಸಿಕ್ಕರೂ ಆಶ್ಚರ್ಯವಿಲ್ಲ. ನರೇಂದ್ರ ಅವರದ್ದು ಕಾಂಗ್ರೆಸ್‌ ನಿಷ್ಠೆ ಕುಟುಂಬವಾಗಿದ್ದು ಈ ಹಿಂದೆ ಚಿ ರಾಜು ಗೌಡ ಕೂಡಾ ಇಲ್ಲಿಂದ ಹಲವು ಬಾರಿ ಗೆದ್ದಿದ್ದಾರೆ. ಜೆಡಿಎಸ್‌ ಈ ಬಾರಿ ಇಲ್ಲಿಂದ ಕುರುಬ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಜನರು ಈ ಅಭ್ಯರ್ಥಿಯ ಕಡೆಗೂ ಒಲವನ್ನು ಹೊಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಂಜುನಾಥ್‌ ಕೂಡಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಆಮ್‌ ಆದ್ಮಿ ಪಕ್ಷದಿಂದ ಇಲ್ಲಿ ಹರೀಶ್ ಕಣದಲ್ಲಿದ್ದಾರೆ.

ಇದನ್ನೂ ಓದಿhttps://peepalmedia.com/mysuru-election-2023-congress-bjp-jds/ http://ಮೈಸೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳು: ಅಹಿಂದ ನಾಯಕರ ಜಿಲ್ಲೆಯಲ್ಲಿ ಕೋಮು ಗಲಭೆಯ ಕಿಡಿಗಳು

Related Articles

ಇತ್ತೀಚಿನ ಸುದ್ದಿಗಳು