Home ವಿಶೇಷ ಚಂದ್ರೇಗೌಡ ನಿಧನ ತುಂಬಲಾರದ ನಷ್ಟವೇ ಸರಿ : ಬೆಳಗೂರು ಸಮೀಯುಲ್ಲಾ

ಚಂದ್ರೇಗೌಡ ನಿಧನ ತುಂಬಲಾರದ ನಷ್ಟವೇ ಸರಿ : ಬೆಳಗೂರು ಸಮೀಯುಲ್ಲಾ

0

ಚಂದ್ರೇಗೌಡರದ್ದು ಎತ್ತರದ ವ್ಯಕ್ತಿತ್ವ. ರಾಜಕಾರಣಿಗಳ ಬಗ್ಗೆ ಗೌರವ ಹೆಚ್ಚಿಸುವ ನಡವಳಿಕೆ. ಒಂದು ತಲೆಮಾರಿನ ಮೇಲೆ ಪ್ರಭಾವ ಬೀರುವಷ್ಟು, ತರುಣ ಸಮುದಾಯ ಅವರ ಬಗ್ಗೆ ಹೆಮ್ಮೆಪಡುವಷ್ಟು. ತಾವೂ ಕೂಡ ರಾಜಕಾರಣಕ್ಕೆ ಬರಬೇಕು ಎಂದು ಯುವಕರಿಗೆ ಪ್ರೇರೇಪಿಸುವಷ್ಟು ಪ್ರಭಾವಶಾಲಿ.

ಆ ಕಾಲಕ್ಕೆ ಶ್ರೀಮಂತ ಮನೆತನದಿಂದ ಬಂದ ಚಂದ್ರೇಗೌಡರ ಆಲೋಚನೆ, ದೂರದೃಷ್ಟಿ ಹೊಸತನದಿಂದ ಕೂಡಿರುತ್ತಿತ್ತು. ಆಡಳಿತ ಮತ್ತು ಕಾನೂನು ಹೇಗೆ ಜನಪರವಾಗಿರಬೇಕು. ಸರಳವಾಗಿರಬೇಕು ಎಂಬ ಬಗ್ಗೆ ಅವರು ಸದಾ ಅಧ್ಯಯನ ನಡೆಸುತ್ತಿದ್ದರು.ಅದನ್ನು ಆಡಳಿತದಲ್ಲಿ ಜಾರಿ ಮಾಡಲು ಯತ್ನಿಸುತ್ತಿದ್ದರು.

ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗ್ರಾಮೀಣ ಕೃಪಾಂಕ ಪದ್ಧತಿಯನ್ನು ಬಂಗಾರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದರು. ಮುಂದೆ ಅದನ್ನು ಸುಪ್ರೀಂ ಕೋರ್ಟ್ ಅವೈಜ್ಞಾನಿಕ ಎಂದು ರದ್ದು ಮಾಡಿತು. ಈ ಪದ್ಧತಿಯಲ್ಲಿ ಕೆಲ್ಸ ಗಿಟ್ಟಿಸಿಕೊಂಡಿದ್ದ ಸಾವಿರಾರು ಸರಕಾರಿ ನೌಕರರು ಬೀದಿ ಪಾಲಾಗುವ ಪರಿಸ್ಥಿತಿ ಬಂದಾಗ ಅವರನ್ನು ಉಳಿಸಿಕೊಳ್ಳಲು ಚಂದ್ರೇಗೌಡರು ನಡೆಸಿದ ಕಾನೂನು ಹೋರಾಟ ಅಂತಿಥದ್ದಲ್ಲ.

ಕಾನೂನಿನ ಬಳಕೆ ಹಾಗೂ ತಮ್ಮದೇ ಶೈಲಿಯಲ್ಲಿ ತಮ್ಮ ವಾದಕ್ಕೆ ಬೇಕಾದಂತೆ ಅದನ್ನು ವಿಶ್ಲೇಷಿಸುವ ಅವರ ಒಳನೋಟ, ಸಾಮರ್ಥ್ಯ ಅದ್ಭುತ. ಹೀಗಾಗಿ ಅವರು ಜಾಣ ಮತ್ತು ಚಾಣಾಕ್ಷರು ಆಗಿದ್ದರು.

ಕಾವೇರಿ ನದಿ ವಿವಾದ ಸೇರಿ ರಾಜ್ಯದ ಹಿತಾಸಕ್ತಿಯ ಪ್ರತಿಪಾದಿಸುವ ಕಾನೂನು ಹೋರಾಟ ಬಂದರೆ, ಕಪ್ಪು ಕೋಟು ಹಾಕಿಕೊಂಡು ಸುಪ್ರೀಂ ಕೋರ್ಟ್ ಗೆ ಹೋಗಿ ವಾದ ಮಂಡಿಸುತ್ತಿದ್ದ ವಕೀಲರಿಗೆ ಬೇಕಾದ ಪೂರಕ ಅಂಶಗಳನ್ನು ಅವರೇ ಒದಗಿಸುತ್ತಿದ್ದರು.

ವೈಯುಕ್ತಿಕವಾಗಿ ಅಪಾರ ಸಜ್ಜನಿಕೆಯ ಮನುಷ್ಯ ಅವರು. ಪತ್ರಕರ್ತರ ಬಗ್ಗೆ ಪ್ರೀತಿ , ಗೌರವ ಇಟ್ಟುಕೊಂಡವರು. ಇಂಥ ಅಪರೂಪದ ನಾಯಕನ ಕಣ್ಮರೆ ನಿಜವಾದ ಅರ್ಥದಲ್ಲಿ “ತುಂಬಲಾರದ ನಷ್ಟ”ವೇ ಆಗಿದೆ.

  • ಬೆಳಗೂರು ಸಮೀಯುಲ್ಲಾ

You cannot copy content of this page

Exit mobile version