Monday, June 17, 2024

ಸತ್ಯ | ನ್ಯಾಯ |ಧರ್ಮ

ಚಂದ್ರಯಾನ-3 ಕ್ರೆಡಿಟ್‌ ಮೋದಿಯವರಿಗೆ; NCERTಯಿಂದ ಮಕ್ಕಳಿಗೆ ಅವೈಜ್ಞಾನಿಕ ಪಠ್ಯ

ಬೆಂಗಳೂರು, ಅಕ್ಟೋಬರ್.‌18: ಎನ್‌ಸಿಇಆರ್‌ಟಿ ಹೊರತಂದಿರುವ ಚಂದ್ರಯಾನ ಮಿಷನ್‌ನ ವಿಶೇಷ ಪೂರಕ ಪಠ್ಯದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನ್ನಣೆ ನೀಡಿದ್ದು, ಬಾಹ್ಯಾಕಾಶ ವಿಜ್ಞಾನವನ್ನು ಪುರಾಣಗಳೊಂದಿಗೆ ಬೆರೆಸಿ ತಯಾರಿಸಲಾಗಿದೆ.

“ನಿಮಗೆ ಗೊತ್ತಾ, ಚಂದ್ರಯಾನ-2 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸದ ಕಾರಣ ಎಲ್ಲಾ ವಿಜ್ಞಾನಿಗಳ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. ಅವರು ತುಂಬಾ ದುಃಖ ಪಟ್ಟಿದ್ದರು. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ವಿಜ್ಞಾನಿಗಳಿಗೆ ಧೈರ್ಯವನ್ನು ತುಂಬಿ, ಮರುಪ್ರಯತ್ನ ಮಾಡಲು ಹೇಳಿದರು. ಎಲ್ಲಾ ವಿಜ್ಞಾನಿಗಳು ಒಟ್ಟಾಗಿ ಹಿಂದಿನ ಅನುಭವದಿಂದ ಕಲಿಯುವ ಮುಖಾಂತರ ಪ್ರಯತ್ನಿಸಿದರು ಮತ್ತು ಸುಧಾರಿಸಿದರು. ಇದರಿಂದಾಗಿ ಲ್ಯಾಂಡರ್  ಚಂದ್ರನ ಮೇಲೆ ಲಾಂಚರ್‌ನಿಂದ ಯಶಸ್ವಿಯಾಗಿ ಇಳಿಯಬಹುದು,” ಎಂದಿರುವ ನರ್ಸರಿ, ಒಂದನೇ ಮತ್ತು ಎರಡನೇ ತರಗತಿಯ ಮಕ್ಕಳಿಗೆ ಮಾಡ್ಯೂಲನ್ನು ತಯಾರಿಸಲಾಗಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಇದರನಲ್ಲಿ ಉಡಾವಣೆಯ ಲೈವ್ ಟೆಲಿಕಾಸ್ಟ್‌ನ ಚಿತ್ರಗಳು ಮತ್ತು ಚಂದ್ರಯಾನ-3 ಜೊತೆಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಯಲ್ಲಿ ವಿಜ್ಞಾನಿಗಳೊಂದಿಗೆ ಮೋದಿಯವರ ಸಂವಾದದ ಚಿತ್ರಗಳನ್ನು ಹಾಕಲಾಗಿದೆ.

ಅಕ್ಟೋಬರ್ 17 ಸೋಮವಾರ ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್.ಪಿ.ಸೋಮನಾಥ್ ಅವರ ಸಮ್ಮುಖದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಂದ್ರಯಾನ ಮಿಷನ್‌ನ ವಿಶೇಷ ಓದುವ ಸಾಮಗ್ರಿಗಳನ್ನು ಬಿಡುಗಡೆ ಮಾಡಿದ್ದರು.

“ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವು ಚಂದ್ರಯಾನ-3 ರ ವಿಜಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ನಮ್ಮ ದೇಶದ ಹೆಸರನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದೆ” ಎಂದು ಮಾಡ್ಯೂಲ್‌ಗಳಲ್ಲಿ ಒಂದು ಮೋದಿಯವರನ್ನು ಹೊಗಳಿದೆ.

ಟೆಲಿಗ್ರಾಫ್‌ ವರದಿ ಮಾಡಿರುವಂತೆ ಹಲವಾರು ಬಾಹ್ಯಾಕಾಶ ತಜ್ಞರು ಈ ಇದು ಸಮಸ್ಯಾತ್ಮಕ ಮಾತುಗಳು ಎಂದು ವಿವರಿಸಿದ್ದಾರೆ, ಏಕೆಂದರೆ ಅವರ ಪ್ರಕಾರ ಈ ಪಠ್ಯ ಚಂದ್ರಯಾನ -3 ಮಿಷನ್ ಮೋದಿಯವರಿಂದಲೇ ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ನೀಡುತ್ತದೆ. ಇದು ತನ್ನ ವೈಫಲ್ಯಗಳಿಂದ ಮತ್ತೆ ಪುಟಿದೇಳುವ ಇಸ್ರೋದ ದಾಖಲೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಸ್ರೋದ ಇತಿಹಾಸದಲ್ಲಿ ಇಂತಹ ಸೋಲು-ಗೆಲುವಿನ ಪಾಠಗಳು ಅನೇಕ ಬಾರಿ ನಡೆದಿದ್ದು, ಇವೇ ಇಸ್ರೋದ ಸಾಧನೆಗಳಿಗೆ ಕಾರಣವಾಗಿವೆ.  1979 ರಲ್ಲಿ  ಉಡಾವಣೆ ಮಾಡಿದ ಉಪಗ್ರಹ ಉಡಾವಣಾ ವಾಹನವು ವಿಫಲವಾಯಿತು. ಆದರೆ ಮುಂದಿನ ವರ್ಷ ಮತ್ತೆ  ಪ್ರಯತ್ನಿಸಿ ಯಶಸ್ವಿಯಾಯಿತು ಎಂದು ಬಾಹ್ಯಾಕಾಶ ತಜ್ಞರು ನೆನಪಿಸಿಕೊಂಡಿದ್ದಾರೆ. 1987 ರಲ್ಲಿ ವಿಫಲವಾದಾಗ ಮತ್ತೆ ತನ್ನ ಯೋಜನೆಯನ್ನು 1988 ರಲ್ಲಿ ಯಶಸ್ವಿಗೊಳಿಸಿತು. 1993 ರಲ್ಲಿ ವಿಫಲವಾದ ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ 1994 ರಲ್ಲಿ ಯಶಸ್ಸನ್ನು ಕಂಡಿತು.

ಶಾಲಾ ಮಕ್ಕಳಿಗಾಗಿ ಸಿದ್ದಪಡಿಸಿರುವ ಮತ್ತೊಂದು ಮಾಡ್ಯೂಲ್‌ನಲ್ಲಿ ಬಾಹ್ಯಾಕಾಶ ವಿಜ್ಞಾನದೊಂದಿಗೆ ಪುರಾಣವನ್ನು ಬೆರೆಸಲಾಗಿದೆ. “ವೈಜ್ಞಾನಿಕ ಸಾಧನೆಯು ಈಗ ಮಾತ್ರ ಸಂಭವಿಸಿದೆಯೇ? ಎಂಬ ಪಠ್ಯದಲ್ಲಿ ಅದನ್ನು ವೈಮಾನಿಕ ಶಾಸ್ತ್ರ ಎಂಬ ಪುರಾವೆ ರಹಿತ ಕಲ್ಪನೆಯನ್ನು ಮಕ್ಕಳಿಗೆ ಹಂಚಲಾಗಿದೆ. ಎಂದು ಹೇಳುತ್ತದೆ. “ಇದು ನಮ್ಮ ದೇಶವು ಈ ದಿನಗಳಲ್ಲಿ ಹಾರುವ ವಾಹನಗಳ ಜ್ಞಾನವನ್ನು ಹೊಂದಿತ್ತು ಎಂದು ತಿಳಿಸುತ್ತದೆ,” ಮಾಡ್ಯೂಲ್ ಹೇಳುತ್ತದೆ.

“ಭಾರತೀಯ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದ ವೇದಗಳು, ಪ್ರಾಣಿಗಳು, ಸಾಮಾನ್ಯವಾಗಿ ಕುದುರೆಗಳು ಎಳೆಯುವ ಚಕ್ರದ ರಥಗಳ ಮೇಲೆ ಸಾಗಿಸಲ್ಪಡುವ ವಿವಿಧ ದೇವರುಗಳ ಉಲ್ಲೇಖವನ್ನು ಮಾಡುತ್ತವೆ, ಆದರೆ ಈ ರಥಗಳು ಹಾರಬಲ್ಲವು ಕೂಡ” ಎಂದು ಅದು ಹೇಳುತ್ತದೆ.

ಮಾಡ್ಯೂಲ್‌ನಲ್ಲಿ ರಾಮಾಯಣದ ಹಾರುವ ರಥ ಪುಷ್ಪಕ ವಿಮಾನದ ಉಲ್ಲೇಖವನ್ನು ಸಹ ಮಾಡಲಾಗಿದೆ. “ಇದನ್ನು ಬ್ರಹ್ಮನಿಗಾಗಿ ದೇವತೆಗಳ ಮುಖ್ಯ ವಾಸ್ತುಶಿಲ್ಪಿ ವಿಶ್ವಕರ್ಮ ಸೂರ್ಯನ ಧೂಳಿನಿಂದ ಸೃಷ್ಟಿಸಿದ.  ಬ್ರಹ್ಮ ಇದನ್ನು ಕುಬೇರನಿಗೆ ಕೊಟ್ಟನು. ರಾವಣನು ಕುಬೇರನಿಂದ ಲಂಕೆಯನ್ನು ವಶಪಡಿಸಿಕೊಂಡಾಗ, ಅದನ್ನು ತನ್ನ ವೈಯಕ್ತಿಕ ವಾಹನವಾಗಿ ಬಳಸಿಕೊಂಡನು,” ಎಂದು ಬಾಹ್ಯಾಕಾಶ ವಿಜ್ಞಾನವನ್ನು ಸಮಸ್ಯಾತ್ಮಕವಾಗಿ ಪುರಾಣಗಳ ಜೊತೆಗೆ ಜೋಡಿಸಲಾಗಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆನೆ ತಲೆ ಇರುವ ದೇವತೆ ʼಗಣಪತಿʼಯನ್ನು ಪ್ಲಾಸ್ಟಿಕ್‌ ಸರ್ಜರಿ ಹಾಗೂ ಕರ್ಣನನ್ನು ಜೆನೆಟಿಕ್‌ ಟೆಕ್ನಾಲಜಿಯಿಂದ ಹುಟ್ಟಿದ್ದು ಎಂಬ ಅವೈಜ್ಞಾನಿಕ ಹೇಳಿಕೆಯನ್ನು ಮುಂಬೈಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದರು.

Related Articles

ಇತ್ತೀಚಿನ ಸುದ್ದಿಗಳು