ದೆಹಲಿ: ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ಉಲ್ಲಂಘಿಸದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಜಾತಿ ಪ್ರಮಾಣಪತ್ರ ದಾಖಲೆಗಳ ಭಾಷೆಯಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠವು, ಪರಿಭಾಷೆಯನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗಿದೆ ಎಂದು ಹೇಳಿದೆ. ಜಾತಿ ಹೆಸರಿನ ಆಧಾರದ ಮೇಲೆ ವ್ಯಕ್ತಿಗಳನ್ನು ಗುರುತಿಸುವ ಅಭ್ಯಾಸವನ್ನು ಕೊನೆಗೊಳಿಸುವುದು ಸುಲಭವಲ್ಲ ಮತ್ತು ಅದು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಕೋರ್ಟ್ ಹೇಳಿತು.
ಆಯಾ ಜಾತಿ/ಸಾಮಾಜಿಕ ಗುಂಪುಗಳ ಜನರ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ಪರಿಭಾಷೆಯನ್ನು ಬದಲಾಯಿಸಬೇಕಾಗುತ್ತದೆ ಎಂದು ಅದು ಹೇಳಿದೆ. ಈ ಸೂಕ್ಷ್ಮ ವಿಷಯವನ್ನು ಎಚ್ಚರಿಕೆಯಿಂದ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಮುಂದಿನ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಲಾಯಿತು.
ಕೆಲವು ಜಾತಿಗಳ ಬಗ್ಗೆ ಅವಮಾನಕರ, ಅವಹೇಳನಕಾರಿ ಮತ್ತು ತಿರಸ್ಕಾರಾರ್ಹ ರೀತಿಯಲ್ಲಿ ಸಾಮಾನ್ಯ ಜನರು ಬಳಸುತ್ತಿದ್ದ ಪದಗಳಿಗೆ ಪರ್ಯಾಯ ಪದಗಳನ್ನು ಬಳಸಲು ಆದೇಶಿಸುವಂತೆ ಕೋರಿ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಕೇಂದ್ರಕ್ಕೆ ನೋಟಿಸ್ ನೀಡಲಾಗಿದೆ.
ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜನ್, ಜಾತಿಗಳ ಹೆಸರುಗಳನ್ನು ಬದಲಾಯಿಸುವುದರಿಂದ ಆಯಾ ಸಾಮಾಜಿಕ ಗುಂಪುಗಳ ಜನರ ಹಕ್ಕುಗಳು ಮತ್ತು ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದರು.