Friday, June 14, 2024

ಸತ್ಯ | ನ್ಯಾಯ |ಧರ್ಮ

ಗೃಹಜ್ಯೋತಿ ಯೋಜನೆ: ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳ ನಿಯಮಗಳಲ್ಲಿ ಬದಲಾವಣೆ

ಬೆಂಗಳೂರು: ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಪ್ರತಿ ತಿಂಗಳು 53 ಯೂನಿಟ್ಸ್ ಜೊತಗೆ ಹೆಚ್ಚುವರಿ 10% ವಿದ್ಯುತ್ ಮತ್ತು ಅಮೃತ ಜ್ಯೋತಿ ಯೋಜನೆಯಡಿ ವಿದ್ಯುತ್‌ ಸಂಪರ್ಕ ಹೊಂದಿರುವವರು 75 ಯೂನಿಟ್ಸ್ ಜೊತೆಗೆ ಹೆಚ್ಚುವರಿ 10% ವಿದ್ಯುತ್ತನ್ನು ಉಚಿತವಾಗಿ ಗೃಹ ಜ್ಯೋತಿ ಯೋಜನೆಯಡಿ ಪಡೆಯುತ್ತಾರೆ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಘೋಷಿಸುವ ಮೊದಲು, ಕುಟೀರ ಜ್ಯೋತಿಯಡಿಯಲ್ಲಿ ಬರುವ ಕುಟುಂಬಗಳು ಪ್ರತಿ ತಿಂಗಳು 40 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದವು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್‌ಸಿ ಮತ್ತು ಎಸ್‌ಟಿ) ಕುಟುಂಬಗಳು ಅಮೃತ ಜ್ಯೋತಿ ಯೋಜನೆಯಡಿ 75 ಯೂನಿಟ್‌ಗಳನ್ನು ಉಚಿತವಾಗಿ ಪಡೆಯುತ್ತಿದ್ದವು. ಇದನ್ನು ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯ ಮೂಲಕ ಹಣದ ರೂಪದಲ್ಲಿ ನೀಡಲಾಗುತ್ತಿತ್ತು.

ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಿಂತ ಕಡಿಮೆ ಗೃಹಬಳಕೆಯ ವಿದ್ಯುತ್ ಬಳಸುವ ಕುಟುಂಬಗಳಿಗೆ ವಿದ್ಯುತ್‌ ಉಚಿತ ಎಂದು ಘೋಷಣೆಯಾದ ನಂತರ ಈ ಯೋಜನೆಗಳು ಕುರಿತು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮೇಲಿನಂತೆ ಸ್ಪಷ್ಟನೆ ನೀಡಿದೆ. ಎಸ್ಕಾಂ ಕಂಪನಿಗಳು ಈ ವಿಷಯದಲ್ಲಿ ಗೊಂದಲವನ್ನು ನಿವಾರಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದವು.

ಹೊಸ ಆದೇಶದಂತೆ, ಇನ್ನು ಮುಂದೆ ಕುಟೀರ ಜ್ಯೋತಿ ಫಲಾನುಭವಿಗಳು 53 ಯೂನಿಟ್ ಉಚಿತ ವಿದ್ಯುತ್ ಪಡೆಯಲಿದ್ದಾರೆ. ಕರ್ನಾಟಕದ ಸರಾಸರಿ ಮನೆಯೊಂದರ ವಿದ್ಯುತ್‌ ಬಳಕೆ ಲೆಕ್ಕಾಚಾರದಡಿ ಇದನ್ನು ನಿರ್ಧರಿಸಲಾಗಿದೆ . ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳು ಉಚಿತ 75 ಯೂನಿಟ್‌ಗಳ ಜೊತೆ ಹೆಚ್ಚುವರಿಯಾಗಿ 10% ಉಚಿತ ಯೂನಿಟ್‌ಗಳನ್ನು ಪಡೆಯಲಿದ್ದಾರೆ.ಗೃಹ ಜ್ಯೋತಿ ಯೋಜನೆಯು ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಆದೇಶ ಜಾರಿ ಮಾಡಿತ್ತು. ಯೋಜನೆಗೆ ನೋಂದಣಿ ಜೂನ್ 18ರಂದು ಪ್ರಾರಂಭವಾಗಿತ್ತು. ಸರಕಾರಿ ದಾಖಲೆಗಳ ಪ್ರಕಾರ ಜುಲೈ 16ರವರೆಗೆ ಒಟ್ಟು 1,13,24,564 ಗ್ರಾಹಕರು ಕರ್ನಾಟಕದಾದ್ಯಂತ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು