Tuesday, October 29, 2024

ಸತ್ಯ | ನ್ಯಾಯ |ಧರ್ಮ

ಚನ್ನಪಟ್ಟಣ ಉಪಚುನಾವಣೆ: ಪ್ರಚಾರದಿಂದ ಜಿಟಿ ದೇವೇಗೌಡ ಹೊರಗಿಟ್ಟ NDA ಕೂಟ ; ನನಗೆ ಆಹ್ವಾನವಿಲ್ಲ ಎಂದ ಜಿಟಿಡಿ

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ನನಗೆ ಉಪಚುನಾವಣೆ ಪ್ರಚಾರಕ್ಕೆ ಆಹ್ವಾನವಿಲ್ಲ, ನಾನು ಪ್ರಚಾರಕ್ಕೆ ಹೋಗುವ ಮನಸ್ಸು ಮಾಡಿಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಂದು ಬೆಳಗ್ಗೆ ಹಾಸನದಲ್ಲಿ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಮಾಡಿದ ಜಿಟಿ ದೇವೇಗೌಡ “ನನ್ನ ಜೀವನದಲ್ಲಿ ಎರಡನೇ ಬಾರಿ ಹಾಸನಾಂಬೆ ತಾಯಿ ದರ್ಶನವನ್ನು ಮಾಡುತ್ತಿದ್ದೇನೆ‌. ಎಲ್ಲಾ ಜನರಿಗೂ ಪ್ರೀತಿ, ಶಾಂತಿ, ಆರೋಗ್ಯ, ಮಳೆ, ಬೆಳೆ, ಸೌಖ್ಯ, ಸಮೃದ್ಧಿಯನ್ನ ಆ ತಾಯಿ ನೀಡಬೇಕು. ಎಲ್ಲರೂ ಕೂಡ ಪ್ರೀತಿ, ವಿಶ್ವಾಸದಿಂದ ಬದುಕುವಂತಾಗಲಿ. ಎಲ್ಲರಿಗೂ ಆರೋಗ್ಯವನ್ನು ಕೊಡು ಎಂದು ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ” ಎಂದು ಹೇಳಿದರು.

ನಂತರ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ “ನಾನೇನು ಚುನಾವಣೆಗೆ ಹೋಗಿಲ್ಲ. ನನ್ನದೇ ಕ್ಷೇತ್ರದ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ, ಹಾಗಾಗಿ ನಾನು ಯಾವುದೇ ಚುನಾವಣೆಗೆ ಹೋಗಿಲ್ಲ. ಹಾಗೂ ಇನ್ನೂ ಹೋಗುವ ತೀರ್ಮಾನ ಕೂಡ ಮಾಡಿಲ್ಲ” ಎಂದು ಉತ್ತರಿಸಿದ್ದಾರೆ.

“ಚನ್ನಪಟ್ಟಣ ಉಪಚುನಾವಣೆ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ, ಪಕ್ಷದಿಂದಲೂ ನನಗೆ ಆಹ್ವಾನವಾಗಲಿ ಏನೂ ಬಂದಿಲ್ಲ. ಅದಕ್ಕೂ ಮೀರಿ ನಾನು ಹೋಗುವ ತೀರ್ಮಾನ ಕೂಡ ಮಾಡಿಲ್ಲ. ಕ್ಷೇತ್ರದಲ್ಲಿ ಕೆಲಸಗಳ ಒತ್ತಡದಲ್ಲಿ ಇದ್ದೀನಿ ಮುಂದೆ ನೋಡೋಣ. ಚುನಾವಣೆ ಬಗ್ಗೆ ಮಾಹಿತಿ ಪಡೆದಿಲ್ಲ, ಅದರ ಬಗ್ಗೆ ನಾನು ಮಾತನಾಡಲ್ಲ. ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ” ಎಂದು ನಗುತ್ತಲೇ ಅಲ್ಲಿಂದ ತೆರಳಿದ್ದಾರೆ.

ಜೆಡಿಎಸ್‌ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರೂ ಆಗಿರುವ ಜಿ.ಟಿ.ದೇವೇಗೌಡರನ್ನು ಪಕ್ಷದ ಪ್ರಚಾರಕ್ಕೆ ಆಹ್ವಾನಿಸದೇ ಇರುವುದು ಮತ್ತು ಚನ್ನಪಟ್ಟಣದಲ್ಲಿ ಒಕ್ಕಲಿಗ ಐಡೆಂಟಿಟಿ ಮೇಲಷ್ಟೇ ಜೆಡಿಎಸ್ ಮತ ಕೇಳುತ್ತಿರುವ ಎರಡು ಜೆಡಿಎಸ್ ಪಕ್ಷದ ವ್ಯತಿರಿಕ್ತ ನಿಲುವು ಎಂಬ ಅಂಶ ಎದ್ದು ಕಾಣುತ್ತಿದೆ.

ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಿಗೇ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸದೇ ಬಿಜೆಪಿಯೊಟ್ಟಿಗೆ ಸಖ್ಯ ಬೆಳೆಸಿರುವ ಕುಮಾರಸ್ವಾಮಿ ಕೇವಲ ತನ್ನ ಕುಟುಂಬದ ಫೇಸ್ ವ್ಯಾಲ್ಯೂ ಮೇಲೆ ನಿಖಿಲ್ ಗೆಲುವಿಗೆ ಶ್ರಮಿಸುತ್ತಿರುವುದೂ ಅವರ ನಿಲುವಿನ ಬಗ್ಗೆ ಗೊಂದಲ ಶುರುವಾಗಿದೆ. ಹಾಗೇ ಜಿಟಿ ದೇವೇಗೌಡ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರೀತಿ ಸಹ ತಾವೆಲ್ಲಾ ಜೆಡಿಎಸ್ ಪಕ್ಷಕ್ಕೆ ಬಳಕೆಯ ವಸ್ತು ಎಂಬ ರೀತಿಯಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.

ಜೆಡಿಎಸ್ ನ ರಾಜ್ಯ ನಾಯಕರನ್ನೆಲ್ಲಾ ಕಡೆಗಣಿಸಿರುವ ಕುಮಾರಸ್ವಾಮಿ ಬಿಜೆಪಿ ನಾಯಕರನ್ನೆಲ್ಲಾ ಬಳಸಿ ಚುನಾವಣೆಗೆ ಮುಂದಾಗಿರುವುದರ ಹಿಂದೆ, ಮುಂದೊಂದು ದಿನ ಜೆಡಿಎಸ್ ಪಕ್ಷದ ಇಬ್ಭಾಗದ ಮುನ್ಸೂಚನೆ ಹೊರಹಾಕಿದಂತಿದೆ. ಶಾಸಕ ಜಿಟಿ ದೇವೇಗೌಡರ ಹೇಳಿಕೆಯಂತೆ ಉದ್ದೇಶಪೂರ್ವಕವಾಗಿ ಅವರನ್ನು ಹೊರಗಿಟ್ಟಿದ್ದೇ ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ಜೆಡಿಎಸ್ ನಿಂದ ಕಾಲ್ಕೀಳುವ ಸಾಧ್ಯತೆಗೆ ಮುನ್ಸೂಚನೆ ಕೊಟ್ಟಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page