Wednesday, July 3, 2024

ಸತ್ಯ | ನ್ಯಾಯ |ಧರ್ಮ

ಚನ್ನಪಟ್ಟಣ ಟಿಕೆಟ್ ಕೈತಪ್ಪಿದರೆ ನಿಖಿಲ್ ಗೆ ಭರ್ಜರಿ ಸ್ಥಾನಮಾನ, ಏನು ಗೊತ್ತಾ?

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ರಾಜ್ಯ ರಾಜಕೀಯದ ಹಾಟ್ ಸ್ಪಾಟ್ ಆಗಿ ಪರಿಣಮಿಸಲಿದೆಯೆ ಎಂಬ ಅನುಮಾನ ಎಲ್ಲರಲ್ಲೂ ದಟ್ಟವಾಗಿ ಕೂತಿದೆ. ಈ ನಡುವೆ ಜೆಡಿಎಸ್ ಬಿಜೆಪಿ ಎರಡೂ ಪಕ್ಷಗಳು ಚನ್ನಪಟ್ಟಣ ಚುನಾವಣೆಯಲ್ಲೂ ತಮ್ಮ ಮೈತ್ರಿ ಮುಂದುವರೆಸುವ ಬಗ್ಗೆ ಗಟ್ಟಿ ನಿರ್ಧಾರ ಮಾಡಿವೆ. ಈ ನಡುವೆ ಅಭ್ಯರ್ಥಿ ಆಯ್ಕೆಯ ಗೊಂದಲ ಇನ್ನೂ ಮುಂದುವರೆದಿದ್ದು, ನಿಖಿಲ್ ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೇಶ್ವರ್ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ.

ಟಿಕೇಟ್ ಗಾಗಿ ನಿಖಿಲ್ ಮತ್ತು ಸಿಪಿ ಯೋಗೇಶ್ವರ್ ನಡುವಿನ ತೀವ್ರ ಪೈಪೋಟಿಯ ನಡುವೆಯೇ ಇನ್ನೊಂದು ಹೆಸರು ಕೂಡ ಮೈತ್ರಿ ನಾಯಕರ ನಡುವೆ ನಡೆದಿದ್ದು, ದೇವೇಗೌಡರ ಪುತ್ರಿ ಹಾಗೂ ಸಂಸದ ಡಾ.ಮಂಜುನಾಥ್ ಅವರ ಪತ್ನಿ ಅನಸೂಯಾ ಮಂಜುನಾಥ್ ಅವರೇ ಇಲ್ಲಿ ಸೂಕ್ತ ಎಂಬ ಮಾತುಗಳು ಕೇಳಿ ಬಂದಿವೆ. ಅನಸೂಯಾ ಮಂಜುನಾಥ್ ಅವರೇ ಮೈತ್ರಿ ಅಭ್ಯರ್ಥಿ ಆದರೆ ಅವರು ಎರಡೂ ಪಕ್ಷಕ್ಕೂ ಸಲ್ಲುವವರೇ.. ಹೀಗಾಗಿ ಎರಡೂ ಪಕ್ಷಗಳ ಮೈತ್ರಿಗೆ ಇನ್ನಷ್ಟು ಗಟ್ಟಿಯಾಗಿ ಮುಂದುವರೆಯಲು ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ನಡುವೆ ನಿಖಿಲ್ ಕುಮಾರಸ್ವಾಮಿ ಈಗಾಗಲೇ ನಾನು ಅಭ್ಯರ್ಥಿ ಆಗುವುದಿಲ್ಲ, ಪಕ್ಷದ ನಾಯಕರು ಕೊಟ್ಟ ಜವಾಬ್ಧಾರಿಯನ್ನು ನಿಭಾಯಿಸುತ್ತೇನೆ ಎಂದು ಹೇಳಿದರೂ ಹಿಂಬಾಗಿಲಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗೆ ಕಸರತ್ತು ಜೋರಾಗಿಯೇ ನಡೆದಿದೆ. ತಂದೆ ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೂ ಕೂಡ ಮಗ ಶಾಸಕನಾಗಬೇಕು ಎಂಬ ಕನಸು ಹಲವು ವರ್ಷಗಳಿಂದ ಇದ್ದರೂ ಮಂಡ್ಯ ಮತ್ತು ರಾಮನಗರದ ಜನ ನಿಖಿಲ್ ಆಯ್ಕೆ ಬಯಸಲೇ ಇಲ್ಲ. ಹೀಗಾಗಿ ಸಧ್ಯಕ್ಕೆ ಚನ್ನಪಟ್ಟಣ ಕೈ ಹಿಡಿಯಬಹುದು ಎಂಬ ಅದೃಷ್ಟ ಪರೀಕ್ಷೆಗೆ ಕುಮಾರಸ್ವಾಮಿ ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಇತ್ತ ಬಿಜೆಪಿ ಕೂಡ ರಾಮನಗರ ಜಿಲ್ಲೆಯ ಏಕಮಾತ್ರ ಬಿಜೆಪಿ ಪ್ರಾಬಲ್ಯದ ಕ್ಷೇತ್ರ ಬಿಟ್ಟುಕೊಡಲು ತಯಾರಿದ್ದಂತೆ ಕಾಣುತ್ತಿಲ್ಲ. ಹೀಗಾಗಿ, ಮಾಜಿ ಸಚಿವ ಸಿಪಿ ಯೋಗೇಶ್ವರ್ ಎಲ್ಲಾ ರೀತಿಯಲ್ಲೂ ತನ್ನನ್ನೇ ಅಭ್ಯರ್ಥಿ ಮಾಡಲು ನೇರವಾಗಿ ಬಿಜೆಪಿ ನಾಯಕರಲ್ಲಿ ಕಸರತ್ತು ನಡೆಸಿದ್ದಾರೆ. ಮೇಲ್ಕಾಣಿಸಿದಂತೆ ದೇವೇಗೌಡರ ಕುಟುಂಬಕ್ಕೇ ( ನಿಖಿಲ್ ಅಥವಾ ಅನಸೂಯಾ ಮಂಜುನಾಥ್) ಚನ್ನಪಟ್ಟಣ ಟಿಕೇಟ್ ನೀಡಿದ್ದೇ ಆದರೆ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದು, ನೇರವಾಗಿ ಅಥವಾ ತೆರೆಮರೆಯಲ್ಲಿ ಡಿಕೆ ಬ್ರದರ್ಸ್ ಕೈ ಹಿಡಿಯುವ ಸಾಹಸಕ್ಕೂ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಧ್ಯ ಈ ಎಲ್ಲಾ ಸಾಧ್ಯತೆಗಳಿಂದ ತಪ್ಪಿಸಲು ಬಿಜೆಪಿ ಪಕ್ಷ ಸಿಪಿ ಯೋಗೇಶ್ವರ್ ಗೆ ಟಿಕೆಟ್ ನೀಡಲು ಗಟ್ಟಿಯಾಗಿ ನಿಂತಿದೆ. ಹೀಗಾದರೆ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಸ್ಥಾನಮಾನ ಏನು ಎಂಬ ಬಗ್ಗೆಯೂ ದೇವೇಗೌಡರ ಕುಟುಂಬದಲ್ಲಿ ಚರ್ಚೆ ಶುರುವಾಗಿದೆ.

ಇತ್ತ ಚನ್ನಪಟ್ಟಣ ತೊರೆದು ಮಂಡ್ಯದಿಂದ ಸಂಸದರಾಗಿ ಆಯ್ಕೆಯಾಗಿರುವ ಕುಮಾರಸ್ವಾಮಿ ಕೇಂದ್ರ ಮಂತ್ರಿಯೂ ಆದ ನಂತರ ಜೆಡಿಎಸ್ ಪಾಳಯದಲ್ಲಿ ರಾಜ್ಯಾಧ್ಯಕ್ಷ ಹುದ್ದೆಯ ಬದಲಾವಣೆ ಚರ್ಚೆ ಜೋರಾಗಿದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕು ಎಂದು ದೇವೇಗೌಡರ ಕುಟುಂಬ ತಯಾರಿ ನಡೆಸುತ್ತಿದೆ. ಜೆಡಿಎಸ್ ನ ಹಿರಿಯ ನಾಯಕ ಜಿಟಿ ದೇವೇಗೌಡರಿಗೆ ಜೆಡಿಎಸ್ ಶಾಸಕಾಂಗದ ನಾಯಕತ್ವ ಇರುವ ಕಾರಣ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಿಖಿಲ್ ಪರವಾಗಿ ದೇವೇಗೌಡರ ಕುಟುಂಬ ಒಲವು ತೋರುತ್ತಿದೆ.

ಹಾಗೊಂದು ವೇಳೆ ನಿಖಿಲ್ ರಾಜ್ಯಾಧ್ಯಕ್ಷ ಆದರೆ ಜೆಡಿಎಸ್ ಪಕ್ಷದ ಒಳಗೇ ಕುಟುಂಬ ರಾಜಕಾರಣದ ಅಥವಾ ಪಕ್ಷದೊಳಗಿನ ಸರ್ವಾಧಿಕಾರದ ಬಗ್ಗೆಯೂ ಕೆಲವು ಶಾಸಕರು ಮತ್ತು ನಾಯಕರು ಧ್ವನಿ ಎತ್ತುವ ಸಾಧ್ಯತೆ ಬಹಳಷ್ಟಿದೆ. ಜೆಡಿಎಸ್ ನಲ್ಲಿ ಈಗಾಗಲೇ ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿ ಒಂದೆರಡು ಶಾಸಕರು ಪಕ್ಷದಿಂದ ಹೊರ ಕಾಲಿಟ್ಟಿದ್ದಾರೆ. ಜೆಡಿಎಸ್ ನಲ್ಲಿ ಸ್ಥಾನಮಾನ ಪಡೆಯಬೇಕಾದರೆ ಅವರು ದೇವೇಗೌಡರ ಕುಟುಂಬದವರೇ ಆಗಿರಬೇಕು ಎಂಬ ಅಪವಾದಕ್ಕೆ ಸರಿಯಾಗಿ ಪಕ್ಷದ ನಡೆಯೂ ಇದೆ ಎಂದರೆ ಮುಂದಿನ ದಿನಗಳಲ್ಲಿ ಪಕ್ಷ ಬಿಡುವ ಶಾಸಕರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಅದೂ ಅಲ್ಲದೇ ಇನ್ನೂ ಸಂಘಟನೆ ವಿಷಯದಲ್ಲಿ ಎಳ್ಳಷ್ಟೂ ಅನುಭವ ಇಲ್ಲದ ಯುವಕ ದೇವೇಗೌಡರ ಮೊಮ್ಮಗ ಎಂಬ ಏಕೈಕ ಅರ್ಹತೆಯೊಂದೇ ನಿಖಿಲ್ ಆಯ್ಕೆ ಆದರೆ ಇದರ ಬಗ್ಗೆ ವಿರೋಧಿಗಳಿಗೂ ದನಿ ಎತ್ತಲು ಜೆಡಿಎಸ್ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು