ಇಂದು ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸೆಶನ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ನ್ಯಾಯಾಲಯ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದರು.
“ಪ್ರಭಾಕರ ಭಟ್ ಈ ರೀತಿ ಕೃತ್ಯಗಳ ಚಾಳಿ ಹೊಂದಿದ್ದಾನೆ. ದ್ವೇಷ ಭಾಷಣ ಎನ್ನುವುದು ದೇಶ ಒಡೆಯುವ ಕೃತ್ಯ ಎಂದು ಸುಪ್ರಿಂ ಕೋರ್ಟ್ 2021 ಅಕ್ಟೋಬರ್ 21 ರ ಆದೇಶದಲ್ಲಿ ಹೇಳಿದೆ. ಹಾಗಾಗಿ ಇದು ದೇಶದ್ರೋಹದ ಕೃತ್ಯ” ಎಂದು ಪ್ರಾಥಮಿಕ ವಾದ ಮಂಡಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿನ ಸೀನಿಯರ್ ವಕೀಲರು ಹಾಜರಾಗದೇ ಇದ್ದಿದ್ದರಿಂದ ಅವರ ಜ್ಯೂನಿಯರ್ ವಕೀಲರು ಸಮಯ ಕೇಳಿದರು.
“ಆರೋಪಿ ವಿರುದ್ದ ಚಾರ್ಜ್ ಶೀಟ್ ಸಿದ್ದವಾಗಿದೆ” ಎಂದು ನ್ಯಾಯಾಧೀಶರು ಎಸ್ ಬಾಲನ್ ಅವರಿಗೆ ತಿಳಿಸಿದರು.
“ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಮಧ್ಯಂತರ ಜಾಮೀನು ತಕ್ಷಣ ರದ್ದು ಮಾಡಬೇಕು. ದೇಶಕ್ಕಿಂತ ಮಿಗಿಲು ಯಾರೂ ಇಲ್ಲ. ಸುಪ್ರಿಂ ಕೋರ್ಟ್ ದ್ವೇಷ ಭಾಷಣದ ಬಗ್ಗೆ ಆದೇಶ ನೀಡಿದ್ದು ಮಾತ್ರವಲ್ಲ, ತೀಕ್ಷ್ಣವಾದ ಸೂಚನೆಗಳನ್ನು ಎಲ್ಲಾ ರಾಜ್ಯಗಳಿಗೆ ನೀಡಿದೆ” ಎಂದು ಬಾಲನ್ ವಾದ ಮಂಡಿಸಿದರು.
ವಿಚಾರಣೆಯನ್ನು ಜನವರಿ 10 ಕ್ಕೆ ಮುಂದೂಡಿದ್ದು, ಅಂದು ಸಂಜೆ 4 ಗಂಟೆಗೆ ವಿಸ್ತೃತ ವಾದ ನಡೆಯಲಿದೆ.
- ನವೀನ್ ಸೂರಿಂಜೆ