ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೂ ದುಡ್ಡು ಕೊಡಬೇಕು ಎನ್ನುವ ಸುದ್ದಿ ಭಾರೀ ಚರ್ಚೆಯಾಗಿರುವ ನಡುವೆಯೇ ಬಿಎಂಆರ್‌ಸಿಎಲ್ (BMRCL) ಸ್ಪಷ್ಟನೆ ನೀಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ವಿಧಿಸಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಾಗಿ ಸ್ವೈಪ್ ಕೇಂದ್ರದಿಂದ ಹೊರಗಿರುವ ಶೌಚಾಲಯಗಳಲ್ಲಿ ಶುಲ್ಕ ಪಾವತಿ ಮಾಡಬೇಕು ಎಂದು ತಿಳಿಸಿದೆ.
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಗಳಿಗೆ ಬಳಕೆದಾರರ ಶುಲ್ಕ ನಿಗದಿ ಮಾಡಿರುವುದಿಲ್ಲ. ಮೆಟ್ರೋ ಸ್ವೈಪ್ ಗೇಟ್ ಒಳಗೆ ಇರುವ ಶೌಚಾಲಯಗಳ ಬಳಕೆ ಮುಂದೆಯೂ ಉಚಿತವಾಗಿ ಇರುತ್ತದೆ. ಆದ್ರೆ, ಮೆಟ್ರೋ ಸ್ವೈಪ್ಗೇಟ್ ಗಿಂತ ಹೊರಗಿರುವ ಶೌಚಾಲಯಗಳನ್ನು ಪ್ರಯಾಣಿಕರಲ್ಲದೇ ಬೇರೆ ಸಾರ್ವಜನಿಕರು ಬಳಸುತ್ತಾರೆ. ಹೀಗಾಗಿ ಅಂತಹ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
“ಪ್ರಯಾಣ ದರವನ್ನು ಶೇ.71ರಷ್ಟು ಏರಿಕೆ ಮಾಡಿದ್ದ ಸರ್ಕಾರ ಇದೀಗ ಶೌಚಾಲಯಗಳನ್ನು ಬಳಸಲು ಜನರಿಂದ ಹಣ ಕೀಳಲು ಮುಂದಾಗಿದೆ” ಎಂದು ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಆರೋಪಿಸಿದ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಈ ಸ್ಪಷ್ಟನೆ ನೀಡಿದೆ. ಮೆಟ್ರೋ ಪ್ರಯಾಣ ದರ ಹಿನ್ನೆಲೆಯಲ್ಲಿ ಶೌಚಾಲಯಕ್ಕೂ ಹಣ ನೀಡಬೇಕು ಎನ್ನುವ ಅಂಶವನ್ನು ಪರಿಗಣಿಸಿ ಬಿಜೆಪಿ ಸರ್ಕಾರದ ಮೇಲೆ ಆರೋಪಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ ಮಾಡಿದ್ದ ಸರ್ಕಾರ ಇದೀಗ ಬೆಂಗಳೂರಿನ 12 ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯಗಳ ಬಳಸಲು ಜನರಿಂದ ಶುಲ್ಕ ಪಡೆಯುವ ಹಂತಕ್ಕೆ ಬಂದಿದೆ . ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಕುಸಿಯುತ್ತಿರುವ ಮೂಲಸೌಕರ್ಯಗಳೊಂದಿಗೆ ಹೋರಾಡುತ್ತಿರುವ ನಗರದಲ್ಲಿ, ಕಾಂಗ್ರೆಸ್ ಈಗ ಮೂಲಭೂತ ಮಾನವ ಅಗತ್ಯಗಳನ್ನು ಪೂರೈಸುವಲ್ಲಿಯೂ ಹಣ ಮಾಡುವ ಮಾರ್ಗವನ್ನು ಕಂಡುಕೊಂಡಿದೆ ಎಂದು ಆರೋಪಿಸಿದ್ದರು