Friday, June 21, 2024

ಸತ್ಯ | ನ್ಯಾಯ |ಧರ್ಮ

ಯಾರಾದರೂ ಕೈ ಜೋಡಿಸಿದರೆ ಪ್ರಶಸ್ತಿ ಹಣದಿಂದ ಹೈಟೆಕ್ ಆಂಬುಲೆನ್ಸ್‌ ಖರೀದಿಸುವ ಆಸೆಯಿದೆ: ಚಾರ್ಮಾಡಿ ಹಸನಬ್ಬ

ಚಾರ್ಮಾಡಿ: ಚಾರ್ಮಾಡಿ ಘಾಟ್‌ ಪ್ರಯಾಣಿಕರ ಪಾಲಿಗೆ ಆಪತ್ಭಾಂಧವ ಎಂದೇ ಗುರುತಿಸಿಕೊಂಡಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಾರ್ಮಾಡಿ ಹಸನಬ್ಬನವರು ಹೊಸದೊಂದು ಬಯಕೆ ವ್ಯಕ್ತಪಡಿಸಿದ್ದಾರೆ.

ಆದರೆ ಅದು ಅವರ ಸ್ವಾರ್ಥದ ಬಯಕೆಯಲ್ಲ. ಸದಾ ಪರೋಪಕಾರಕ್ಕಾಗಿ ತುಡಿಯುವ ಅವರ ಮನಸ್ಸು ಈಗ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಆಂಬುಲೆನ್ಸ್‌ ಒಂದನ್ನು ಖರೀದಿಸಬಯಸುತ್ತಿದೆ. ಅದಕ್ಕಾಗಿ ಅವರು ತನಗೆ ರಾಜ್ಯೋತ್ಸವ ಪ್ರಶಸ್ತಿಯ ಭಾಗವಾಗಿ ಬಂದಿರುವ ಐದು ಲಕ್ಷ ರೂಪಾಯಿ ಹಣವನ್ನು ನೀಡಲು ಸಿದ್ಧರಿದ್ದಾರೆ.

ಪ್ರಶಸ್ತಿ, ಪುರಸ್ಕಾರಗಳನ್ನು ಇನ್ನಷ್ಟು ಸಾಮಾಜಿಕ ಮನ್ನಣೆ, ಅಧಿಕಾರ ಪಡೆದುಕೊಳ್ಳಲು ಬಳಸುವ ಜನರ ನಡುವೆ ಹಸನಬ್ಬನವರ ಈ ನಡೆ ಜನರ ಶ್ಲಾಘನೆಗೆ ಪಾತ್ರವಾಗಿದೆ.

ಈ ಕುರಿತು ಹಿರಿಯ ಪತ್ರಕರ್ತ ಬಿಎಮ್‌ ಹನೀಫ್‌ ಅವರೊಡನೆ ಮಾತನಾಡಿರುವ ಹಸನಬ್ಬ “ಯಾರಾದರೂ ನನ್ನೊಂದಿಗೆ ಕೈಜೋಡಿಸಿದಲ್ಲಿ ಹೈಟೆಕ್‌ ಆಂಬುಲೆನ್ಸ್‌ ಖರೀದಿಸಿ ಜನರ ಸೇವೆ ಒದಗಿಸುವ ಆಸೆಯಿದೆ” ಎಂದಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಹನೀಫ್‌ ಅವರು “ಅವರು ತಮ್ಮ ಕುಟುಂಬದ ಕೆಲವು ಸದಸ್ಯರನ್ನು ಸೇರಿಸಿ ಟ್ರಸ್ಟ್ ಒಂದನ್ನು ರಚಿಸಿ ಅದರ ಮೂಲಕ ಆ್ಯಂಬುಲೆನ್ಸ್ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಅರ್ಹ ಗಾಯಾಳುಗಳಿಗೆ ಯಾವುದೇ ತೊಂದರೆ ಇಲ್ಲದೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ವ್ಯಕ್ತಪಡಿಸಿದ್ದಾರೆ.” ಎಂದಿದ್ದಾರೆ.

ಹಸನಬ್ಬ ಅವರ ಕುರಿತು ಇನ್ನಷ್ಟು ವಿವರಗಳಿಗಾಗಿ ಈ ಲೇಖನವನ್ನು ಓದಿ: https://peepalmedia.com/charmadi-hasanabba/

Related Articles

ಇತ್ತೀಚಿನ ಸುದ್ದಿಗಳು