Monday, April 7, 2025

ಸತ್ಯ | ನ್ಯಾಯ |ಧರ್ಮ

ಇನ್ನು ಎರಡು ತಿಂಗಳಲ್ಲಿ ಒಳಮೀಸಲಾತಿ ಜಾರಿ ಬಗ್ಗೆ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಒಳಮೀಸಲಾತಿ ಜಾರಿಯ ಬಗ್ಗೆ ಯಾವುದೇ ಅನುಮಾನ ಬೇಡ. ನಾವು ಜಾರಿ ಮಾಡೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದ ಬಾಬೂ ಜಗಜೀವನ್ ರಾಮ್ ಅವರ 118ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರ ಮಾತನಾಡಿದ ಅವರು,ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ. ಜಾರಿ ಮಾಡೇ ಮಾಡುತ್ತೇವೆ. ನೀವು ಬೇಡ ಅಂದರೂ ನಾವು ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನ್ಯಾ.ನಾಗಮೋಹನ್ ದಾಸ್ ಅವರ ಮುಖ್ಯಸ್ಥಿಕೆಯ ಸಮಿತಿ ನೀಡಿರುವ ಮಧ್ಯಂತರ ವರದಿಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಪೂರ್ಣ ವರದಿಗೆ ಇನ್ನು ಎರಡು ತಿಂಗಳ ಕಾಲಾವಕಾಶ ಕೇಳಲಾಗಿದೆ. ಸರ್ಕಾರ ಎರಡು ತಿಂಗಳ ಕಾಲಾವಕಾಶ ನೀಡಿದೆ. ಪೂರ್ಣ ವರದಿ ಸರ್ಕಾರದ ಕೈಗೆ ಸಿಕ್ಕ ನಂತರ ಕೂಲಂಕುಷವಾಗಿ ಪರಿಶೀಲಿಸಿ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಪ್ರೇಮಿ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾದ ನಿಲುವು ಹೊಂದಿದ್ದರು ಎಂದು ಹೇಳಿದರು.

ನರೇಂದ್ರ ಮೋದಿಯವರು EWS ಹೆಸರಲ್ಲಿ ಶೇ10 ಮೀಸಲಾತಿ ಕಲ್ಪಿಸಿದ ಬಳಿಕ ಎಲ್ಲರೂ ಮೀಸಲಾತಿ ಫಲಾನುಭವಿಗಳೇ ಆಗಿಬಿಟ್ಟಿದ್ದಾರೆ. ಮೀಸಲಾತಿ ವಿರುದ್ಧ ಮಾತಾಡುತ್ತಿದ್ದವರೆಲ್ಲಾ ಈಗ ಮೀಸಲಾತಿ ಪಡೆದು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುಪ್ತ ಪ್ರತಿಭೆ ಹೊರಗೆ ತರುವ ಶಿಕ್ಷಣದಿಂದ ಯುವ ಸಮೂಹ ಸ್ವಾಭಿಮಾನಿಗಳಾಗಿ ಬೆಳೆಯಲು ಸಾಧ್ಯ. ನಮ್ಮ ರಾಜ್ಯದಲ್ಲಿ ಮತ್ತು ತೆಲಂಗಾಣ, ಆಂಧ್ರದಲ್ಲಿ ಮಾತ್ರ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ ಜಾರಿಯಲ್ಲಿದೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವ ಬಿಜೆಪಿ ಅವರ ಆಡಳಿತದ ರಾಜ್ಯಗಳಲ್ಲಿ ಈ ಕಾಯ್ದೆ ತಂದೇ ಇಲ್ಲ ಏಕೆ? ಬರೀ ಭಾಷಣ ಮಾಡಿದರೆ ಸಾಕಾ, ಅದು ಕ್ರಿಯೆಯಲ್ಲಿ ಕಾಣಬಾರದಾ? ನಾವು ಜಾರಿ ಮಾಡಿರುವ ಐದೂ ಗ್ಯಾರಂಟಿಗಳೂ ಜನರ ಕೈಯಲ್ಲಿ ಹಣ ಇರಬೇಕು, ಕೊಳ್ಳುವ ಶಕ್ತಿ ಹೆಚ್ಚಾಗಬೇಕು ಎನ್ನುವ ನಮ್ಮ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸಿವೆ. ಜಾತಿ ಸೃಷ್ಟಿಸಿದವರು ನಾವಲ್ಲ. ಆದರೆ ಈ ಜಾತಿಯ ಅಸಮಾನತೆಗೆ ಬಲಿ ಆಗಿರುವವರು ನಾವು. ಜಾತಿ ಇರುವ ವರೆಗೂ ಸಮಾನ ಅವಕಾಶಗಳು ಸಿಗುವುದಿಲ್ಲ. ಏಕೆಂದರೆ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಬಾಬು ಜಗಜೀವನ್ ರಾಮ್ ಅವರು ಕೇಂದ್ರ ಸಚಿವರಾಗಿ ಹಸಿರು ಕ್ರಾಂತಿ ಮಾಡಿ ಎಲ್ಲರಿಗೂ ಆಹಾರ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಮಗೆಲ್ಲಾ ಹಬ್ಬದ ದಿನ ಮಾತ್ರ ಅನ್ನ ಸಿಗುತ್ತಿತ್ತು. ಈ ಪರಿಸ್ಥಿತಿ ಯಾರಿಗೂ ಬರಬಾರದು, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನ ಭಾಗ್ಯ ಜಾರಿ ಮಾಡಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page