ನೈಸ್‌ ಕಂಪನಿ ಖರೀದಿಸಲು ಸಿಎಂ ಮುಂದಾಗಿದ್ದಾರೆ, ಮುಂದಿನ ವಾರ ದಾಖಲೆ ಬಿಡುಗಡೆ : ಕುಮಾರಸ್ವಾಮಿ ಆರೋಪ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೇನಾಮಿ ಕಂಪನಿಗಳ ಮೂಲಕ ನೈಸ್‌ ಕಂಪನಿಯನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ನೈಸ್‌ ಕಂಪನಿಯನ್ನು ಯಾರು ‘ಟೇಕ್‌ ಓವರ್‌’ ಮಾಡುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಜನರ ಮುಂದೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

“ನನಗೆ ಈ ವ್ಯವಹಾರಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳಿವೆ. ಮುಂದಿನ ವಾರ ದಾಖಲೆಗಳ ಸಮೇತ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ನೈಸ್‌ ಅಕ್ರಮದಲ್ಲಿ ಮುಖ್ಯಮಂತ್ರಿ ನೇರವಾಗಿ ಶಾಮೀಲಾಗಿದ್ದಾರೆ” ಎಂದು ಕುಮಾರಸ್ವಾಮಿ ಆರೋಪಿಸಿದರು.

ನೈಸ್‌ ಯೋಜನೆಯನ್ನು ದೇಶದ ದೊಡ್ಡ ಭೂ ಹಗರಣ ಎಂದು ಬಣ್ಣಿಸಿದ ಅವರು, ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಹಲವು ವರ್ಷಗಳಾದರೂ ಪರಿಹಾರ ನೀಡಿಲ್ಲ ಎಂದು ದೂರಿದರು. ಒಪ್ಪಂದದಂತೆ 111 ಕಿ.ಮೀ. ರಸ್ತೆ ನಿರ್ಮಿಸಬೇಕಿದ್ದರೂ ಕೇವಲ 5 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.

ನೈಸ್‌ ಟೋಲ್‌ ಪ್ಲಾಜಾಗಳಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳನ್ನೂ ಅವರು ಮಾಡಿದರು. ಈ ವಿಚಾರದಲ್ಲಿ ನ್ಯಾಯಾಲಯದ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಬೇಕಾಗಿದ್ದರೂ ಸರ್ಕಾರ ನೈಸ್‌ ಕಂಪನಿಯ ಪರ ನಿಂತಿದೆ ಎಂದು ಕುಮಾರಸ್ವಾಮಿ ದೂರಿದರು.

ಬೀದಿ ಹೋರಾಟಕ್ಕೆ ಕರೆ
ನೈಸ್‌ ಯೋಜನೆಯಿಂದ ರಾಜ್ಯದ ವಿವಿಧ ಭಾಗಗಳ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಯುವಕರು ಹಾಗೂ ವಿದ್ಯಾರ್ಥಿಗಳು ಈ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಟೋಲ್‌ ಪಾವತಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಹೋರಾಟ ಶಾಂತಿಯುತವಾಗಿರಬೇಕು. ಟೋಲ್‌ ಪ್ಲಾಜಾಗಳಿಗೆ ನುಗ್ಗುವಂತಹ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ನೈಸ್‌ ಯೋಜನೆ ಮತ್ತು ಕಂಪನಿ ಮಾಲೀಕರೊಂದಿಗೆ ಇರುವ ಸಂಬಂಧವೇನು, ಯಾವುದೇ ವ್ಯವಹಾರ ನಡೆದಿದೆಯೇ ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು