Saturday, June 15, 2024

ಸತ್ಯ | ನ್ಯಾಯ |ಧರ್ಮ

ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ; ಆಡಳಿತ ಯಂತ್ರದ ದುರುಪಯೋಗ ಮಾಡಿಕೊಂಡಿತೇ ಸ್ಥಳೀಯ ಆಡಳಿತ?

ಕಳೆದೊಂದು ವಾರದಿಂದ ತೀರ್ಥಹಳ್ಳಿ ಭಾಗದ ಎಲ್ಲಾ ಸಣ್ಣಪುಟ್ಟ ಸರ್ಕಾರಿ ನೌಕರರ, ಗುತ್ತಿಗೆ ನೌಕರರ ಕೆಲಸಗಳು ಸ್ತಬ್ಧವಾಗಿದೆ. ಅದರಲ್ಲೂ ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಜನ ಸೇರಿಸುವ ಕೆಲಸವನ್ನು ತಾಲ್ಲೂಕು ಆಡಳಿತ ವಹಿಸಿದೆ ಎಂದು ಸ್ಥಳೀಯ ನಾಗರೀಕರು ಆರೋಪಿಸಿದ್ದಾರೆ.

ನವೆಂಬರ್ 27 ರ ಭಾನುವಾರ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆಯ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಲೆನಾಡು ಭಾಗಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ವಿಶೇಷವಾಗಿ ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ ಭಾಗಗಳಲ್ಲಿ ಮುಖ್ಯಮಂತ್ರಿ ಪ್ರವಾಸ ಕೈಕೊಂಡಿದ್ದು ಗೃಹಮಂತ್ರಿಗಳ ತವರೂರು ತೀರ್ಥಹಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮದ ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಎಲ್ಲಾ ಡಿ ದರ್ಜೆ ನೌಕರರಿಗೆ ಜನ ಸೇರಿಸೋ ಜವಾಬ್ದಾರಿ ವಹಿಸಿ, ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡಿಸಿಕೊಳ್ಳುವ ಅಧಿಕಾರದ ದುರುಪಯೋಗದ ಕೆಲಸ ನಡೆಯುವ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಧ್ಯಕ್ಕೆ ಯಾವ ಪಂಚಾಯತಿಗಳಲ್ಲೂ ಸಹ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತರು ಮಕ್ಕಳ ಪೋಷಣೆ ಮಾಡುವುದು ಬಿಟ್ಟು ಊರೂರು ಬೀದಿ ಬೀದಿ ಸುತ್ತಿದ್ದಾರೆ. ಆಶಾ ಕಾರ್ಯಕರ್ತರೂ ಸಹ ಯಾವ ಬಿಜೆಪಿ ಕಾರ್ಯಕರ್ತರಿಗೂ ಕಡಿಮೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಅವರಿಗೇ ಎಂದು ಇರುವ ಕೆಲಸ ಮಾಡುವವರ್ಯಾರು. ಇದು ಜನಸಾಮಾನ್ಯರಿಗೂ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ.

ಹೇಳಿಕೇಳಿ ಚುನಾವಣಾ ವರ್ಷ. ಇಂತಹ ಸಮಯದಲ್ಲಿ ಅದೆಂತದ್ದೇ ಸರ್ಕಾರಿ ಕಾರ್ಯಕ್ರಮ ಆದರೂ ರಾಜಕೀಯ ಪಕ್ಷ ತನ್ನ ಲಾಭಕ್ಕಾಗಿಯೇ ಕೆಲಸ ಮಾಡುತ್ತವೆ. ಇಂತಹ ಸಮಯದಲ್ಲಿ ಜನ ಸೇರಿಸಿ ಪ್ರತಿಷ್ಠೆ ಮೆರೆಯುವುದು ಆಡಳಿತ ಪಕ್ಷಗಳು ರೂಢಿಯಿಂದ ನಡೆಸಿಕೊಂಡು ಬಂದಿವೆ. ಆದರೆ ಇಂತಹ ಕೆಲಸಕ್ಕೆ ಸರ್ಕಾರಿ ನೌಕರರನ್ನು ಬಳಸುವುದು ಆಡಳಿತ ಯಂತ್ರದ ಸಂಪೂರ್ಣ ದುರುಪಯೋಗ ಎಂದೇ ತೀರ್ಥಹಳ್ಳಿ ಭಾಗದಲ್ಲಿ ಹೇಳಲಾಗುತ್ತಿದೆ.

ಇನ್ನು ಅಂಗನವಾಡಿ, ಆಶಾ ಕಾರ್ಯಕರ್ತರು ಜನ ಸೇರಿಸುವಲ್ಲಿ ಜನರಿಗೆ, ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳಿಗೆ ಕಡ್ಡಾಯವಾಗಿ ಬರಲೇಬೇಕು ಎಂಬ ಒತ್ತಡ ಹಾಕುತ್ತಿರುವುದೂ ಸಹ ಕಂಡುಬಂದಿದೆ. ಈ ಕಡ್ಡಾಯ ಸುತ್ತೋಲೆಯ ಆದೇಶ ತಾಲ್ಲೂಕು ಆಡಳಿತ, ಸರ್ಕಾರ ಯಾರ ಕಡೆಯಿಂದಲೂ ಬಾರದೇ ಇದ್ದರೂ ಸ್ಥಳೀಯ ಪುಡಾರಿಗಳು ಅಂಗನವಾಡಿ ಕಾರ್ಯಕರ್ತರ ಕಡೆಯಿಂದ ಹೇಳಿಸುತ್ತಿರುವ ಉದ್ದೇಶವಾದರೂ ಏನು ಎಂಬುದು ಪ್ರಶ್ನಾರ್ಹ.

ಅಂದಹಾಗೆ ಕಳೆದ ಬಾರಿ 20,000 ಮತಗಳ ಅಂತರದಿಂದ ಗೆದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಬರುವ ಕಾರ್ಯಕ್ರಮಕ್ಕೆ ಜನ ಸೇರಿಸಲು ಸರ್ಕಾರಿ ನೌಕರರ ಬಳಕೆ ಎಷ್ಟು ಸರಿ. ಹಾಗೆಯೇ 20,000 ಜನ ಸೇರಿಸುವ ಬಗ್ಗೆ ಸ್ಥಳೀಯ ಬಿಜೆಪಿ ಮಾತಾಡುತ್ತಿದ್ದರು. ಆದರೆ ಈಗ ನಾಲ್ಕೈದು ಸಾವಿರ ಜನರಿಗಷ್ಟೆ ಸೀಮಿತವಾಗಿ ಸೇರುವ ಮೈದಾನದಲ್ಲಿ ಜನ ಸೇರಿಸುವುದು ನೋಡಿದರೆ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕುಗ್ಗಿದೆ ಎಂಬುದನ್ನು ಬಿಜೆಪಿಗರೇ ಪರೋಕ್ಷವಾಗಿ ಒಪ್ಪಿದಂತಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ.

ಇನ್ನು ಸ್ಥಳೀಯ ಜ್ವಲಂತ ಸಮಸ್ಯೆಯಾದ ಅಡಿಕೆ ತೋಟದ ಎಲೆಚುಕ್ಕೆ ರೋಗದ ಬಗ್ಗೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಲಾಗುವುದೇ ಎಂಬ ಪ್ರಶ್ನೆ ಕೂಡಾ ಎದ್ದಿದೆ. ಹಾಗೊಂದು ವೇಳೆ ಎಲೆಚುಕ್ಕೆ ರೋಗದ ಬಗ್ಗೆ ಮುಖ್ಯಮಂತ್ರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರೂ ಚುನಾವಣೆ ದೃಷ್ಟಿಯಿಂದ ಅದು ಕೇವಲ ಭರವಸೆ ಮಾತ್ರವೇ ಅಥವಾ ಈ ವರ್ಷದಲ್ಲೇ ಕಾರ್ಯರೂಪಕ್ಕೆ ಬರುವುದೇ ಎಂಬ ಬಗ್ಗೆಯೂ ಸ್ವತಃ ಬಿಜೆಪಿ ಪಾಳಯದಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಯಾರ ಬೇಡಿಕೆಯೂ ಇಲ್ಲದ ಕೋಟಿ ಲೆಕ್ಕದ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಯ ಹಿಂದೆ ಸ್ಥಳೀಯ ಜ್ವಲಂತ ಸಮಸ್ಯೆಗಳಾದ, ಮಲೆನಾಡಿಗರ ಉಸಿರಾಗಿರುವ ಅಡಿಕೆಗೆ ತಗುಲಿರುವ ಎಲೆಚುಕ್ಕೆ ರೋಗ, ಬೆಲೆಯೇರಿಕೆ ಬಿಸಿ ಮರೆಯಾಗದಿರಲಿ ಎಂಬುದು ಸ್ಥಳೀಯ ಪ್ರಜ್ಞಾವಂತರ ಆಶಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು