Sunday, July 27, 2025

ಸತ್ಯ | ನ್ಯಾಯ |ಧರ್ಮ

ಬಾಲ್ಯ ವಿವಾಹದ ಜೊತೆಗೆ ಬಾಲ್ಯ ನಿಶ್ಚಿತಾರ್ಥ, ತೊಟ್ಟಿಲು ಮದುವೆಯೂ ಅಪರಾಧ: ಸಚಿವ ಎಚ್‌.ಕೆ. ಪಾಟೀಲ್‌

ಬಾಲ್ಯ ವಿವಾಹ ಮಾತ್ರವಲ್ಲದೆ, ಅದಕ್ಕೆ ಸಂಬಂಧಿಸಿದ ನಿಶ್ಚಿತಾರ್ಥ ಅಥವಾ ಯಾವುದೇ ರೀತಿಯ ಒಪ್ಪಂದಗಳನ್ನೂ ಶಿಕ್ಷಾರ್ಹ ಎಂದು ಪರಿಗಣಿಸಲು ರಾಜ್ಯ ಸರಕಾರ ಮುಂದಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ-2025ಕ್ಕೆ ಅನುಮೋದನೆ ನೀಡಿದ್ದು, ಆ.11ರಿಂದ ಸಮಾವೇಶಗೊಳ್ಳಲಿರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲೂ ಮಂಡಿಸಲು ತೀರ್ಮಾನಿಸಿದೆ.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, 2023-24ರ ಅವಧಿಯಲ್ಲಿ ಸುಮಾರು 700 ಬಾಲ್ಯವಿವಾಹ ಪ್ರಕರಣಗಳು ರಾಜ್ಯಾದ್ಯಂತ ವರದಿಯಾಗಿದ್ದು, ಇದರ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಸಿಇಒಗಳ ಸಭೆಯಲ್ಲಿ ಸೂಚಿಸಿದ್ದರು. ಅದರಂತೆ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಅನುಮೋದಿಸಲಾಗಿದೆ ಎಂದರು.

ಪ್ರಸ್ತುತ ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ ಕನಿಷ್ಠ 18 ವರ್ಷ ತುಂಬಿರಬೇಕೆಂಬ ನಿಯಮ ಇದೆ. ಇದಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದುವೆ ಮಾಡಿಸಿದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತಿದ್ದು, 2006ರ ಕಾಯ್ದೆ ಅನ್ವಯ ಬಾಲ್ಯ ವಿವಾಹಕ್ಕೆ ಕಾರಣರಾಗುವ ಪೋಷಕರು ಹಾಗೂ ಸಂಸ್ಥೆಗೆ 2 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ. ಆದರೂ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ಇನ್ನು ಮುಂದೆ ಬಾಲ್ಯ ವಿವಾಹಕ್ಕಾಗಿ ನಡೆಯುವ ಸಿದ್ಧತೆ, ನಿಶ್ಚಿತಾರ್ಥ ಸಹಿತ ಒಪ್ಪಂದಗಳನ್ನೂ ತಡೆಗಟ್ಟುವ ನಿಟ್ಟಿನಲ್ಲಿ ತಿದ್ದುಪಡಿ ಅಂಶವನ್ನು ಸೇರಿಸಲಾಗಿದೆ. ಅಂತಹ ಮದುವೆ, ಒಪ್ಪಂದ, ನಿಶ್ಚಿತಾರ್ಥಕ್ಕೆ ನ್ಯಾಯಾಲಯದಿಂದ ತಡೆ ತಂದು ಅನೂರ್ಜಿತಗೊಳಿಸುವ ಅವಕಾಶ ಇರಲಿದೆ.

ತೊಟ್ಟಿಲ ಮದುವೆಗೂ ತಡೆ
ಕೆಲವು ಗ್ರಾಮೀಣ ಮನೆತನಗಳಲ್ಲಿ ತೊಟ್ಟಿಲ ಮದುವೆ ಮಾಡುವ ಪದ್ಧತಿ ಇದ್ದು, ಮಗು ಹುಟ್ಟಿದ ಕೂಡಲೇ ತೊಟ್ಟಿಲಲ್ಲೇ ಗಂಡು ಹಾಗೂ ಹೆಣ್ಣು ಮಗುವನ್ನು ಪರಸ್ಪರ ಒಪ್ಪಂದದ ಮೂಲಕ ಮದುವೆ ಮಾತುಕತೆ ಮಾಡುವ ವ್ಯವಸ್ಥೆಯೂ ಇದೆ. ಇದನ್ನೂ ಈ ತಿದ್ದುಪಡಿಯಡಿ ಶಿಕ್ಷಾರ್ಹ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page