ಮೈಸೂರು: ರಸ್ತೆ ಅಗಲೀಕರಣಕ್ಕಾಗಿ ಮರಗಳ ಮಾರಣಹೋಮ ಘಟನೆ ಖಂಡಿಸಿ ಪುಟಾಣಿಗಳು ಇಂದು ಪ್ರತಿಭಟನೆ ನಡೆಸಿದರು.
ಮೈಸೂರಿನ ಎಸ್‌ಪಿ ಕಚೇರಿಯಿಂದ ಹೈದರ್ ಅಲಿ ರಸ್ತೆಯ ಕಾಳಿಕಾಂಬ ದೇವಾಲಯದವರೆಗೂ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಇದಕ್ಕಾಗಿ ಸುಮಾರು 40ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮರಗಳನ್ನು ಕಡಿದು ಹಾಕಿರುವ ರಸ್ತೆಯಲ್ಲಿ ಪುಟಾಣಿಗಳು ಜಾಥಾ ನಡೆಸಿ, ಮರ ಉಳಿಸಿ ಎಂದು ಪ್ಲೇ ಕಾರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು. ಮೈಸೂರಿಗೆ ತನ್ನದೇ ಆದ ಪರಂಪರೆಯಿದೆ. ಹೀಗಾಗಿ ಈ ಘಟನೆಗಳು ಮರುಕಳಿಸಬಾರದು ಎಂದು ಪುಟಾಣಿಗಳ ಜೊತೆಗಿದ್ದ ಜನರು ಆಗ್ರಹಿಸಿದರು.
ಇನ್ನೂ ಮರಗಳ ಹನನ ಖಂಡಿಸಿ ಏಪ್ರಿಲ್.17 ಹಾಗೂ 18ರಂದು ವಿವಿಧ ಸಂಘಟನೆಗಳು ಮತ್ತು ಪರಿಸರ ಪ್ರೇಮಿಗಳು ಪ್ರತಿಭಟನೆಗೆ ನಿರ್ಧಾರ ಮಾಡಿದ್ದು, ಪಾಲಿಕೆ ಹಾಗೂ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.