ಧಾರವಾಡ: ಹಿಂದೂ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ಮಕ್ಕಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಆದರೆ ನಮ್ಮ ಮಕ್ಕಳನ್ನು ಧರ್ಮಕ್ಕಾಗಿ ಬೀದಿಗಳಲ್ಲಿ ಹೋರಾಡುವಂತೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವ್ಯಂಗ್ಯವಾಡಿದ್ದಾರೆ.
ಆಗಸ್ಟ್ 5 ರಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ನಾಯಕರು ಹಿಂದೂಗಳ ಹೆಸರನ್ನು ಬಳಸಿಕೊಂಡು ಮತಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸಿದ್ದಾರೆ. ಆದರೆ ನಮ್ಮಲ್ಲಿ ಬೀದಿ ಬೀದಿಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರಿಗೆ ಜಗಳ ಹಚ್ಚಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ದೂರಿದರು. ಕಳೆದ 10 ವರ್ಷಗಳಲ್ಲಿ ಯಾವ ಹಿಂದೂಗಳಿಗೆ ಲಾಭವಾಗಿದೆ ಎಂಬುದರ ಬಗ್ಗೆ ಬಿಜೆಪಿ ಚರ್ಚಿಸಲಿ ಎಂದು ಸವಾಲು ಹಾಕಿದ ಸಚಿವ ಲಾಡ್, ಧರ್ಮ ಒಡೆಯುತ್ತಿರುವವರು ಯಾರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಪ್ರಶ್ನಿಸಬೇಕು. ಇದಲ್ಲದೇ, ಎಷ್ಟು ಹಿಂದೂಗಳು ದೇಶ ಬಿಟ್ಟು ಹೋಗಿದ್ದಾರೆ ಎಂಬ ಬಗ್ಗೆಯೂ ಜೋಶಿ ಅವರನ್ನು ಕೇಳಬೇಕು ಎಂದರು.
ವಿದೇಶಿ ಭಾಷಣ ಮತ್ತು ಕಪ್ಪುಹಣದ ವಾಗ್ದಾಳಿ
ಬಿಜೆಪಿ ನಾಯಕರು ಕೆನಡಾ, ಅಮೆರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಎಂದು ವಾಗ್ದಾಳಿ ನಡೆಸಿದರು. ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುತ್ತೇವೆ ಎಂದು ಹೇಳಿದ್ದರು. ಆದರೆ, ಹೊರ ದೇಶದಲ್ಲಿರುವ ಆ ಹಣ ಈಗ ಮೂರು ಪಟ್ಟಾಗಿದೆ. ಕಪ್ಪು ಹಣ ಎಲ್ಲಿಗೆ ಹೋಯ್ತು? ಅದನ್ನು ವಾಪಸ್ ಏಕೆ ತರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗಣತಿಯಿಂದ ಒಳ್ಳೆಯದೇ ಆಗುತ್ತದೆ
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ ಅಥವಾ ಸಮೀಕ್ಷೆಯಿಂದ ಒಳ್ಳೆಯದೇ ಆಗುತ್ತದೆ ಎಂದು ಸಚಿವ ಸಂತೋಷ ಲಾಡ್ ಸಮರ್ಥಿಸಿಕೊಂಡರು. ಈ ರೀತಿಯ ಸಮೀಕ್ಷೆ ಇಡೀ ಭಾರತದಲ್ಲಿ ಎಲ್ಲಿಯೂ ಆಗಿಲ್ಲ. ಸಮಾಜದಲ್ಲಿ ಬಡವರು ಯಾರು ಇದ್ದಾರೆ ಎಂಬುದನ್ನು ಕಂಡು ಹಿಡಿಯುವ ಉದ್ದೇಶವೇ ಈ ಗಣತಿಯದ್ದಾಗಿದೆ. ಶೈಕ್ಷಣಿಕ ಮಾಹಿತಿ, ರಾಜಕಾರಣಿಗಳು, ಜಮೀನು ಇತ್ಯಾದಿಗಳ ಕುರಿತಂತೆ 60 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ಶೇ. 70 ರಷ್ಟು ಸರ್ವೇ ಮುಗಿದಿದ್ದು, ಕೇವಲ ಶೇ. 30 ರಷ್ಟು ಮಾತ್ರ ಉಳಿದಿದೆ. ಗಣತಿ ಮಾಡುತ್ತಿರುವ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದರು.