Monday, July 28, 2025

ಸತ್ಯ | ನ್ಯಾಯ |ಧರ್ಮ

ಚಿಲುಮೆ ಅಕ್ರಮ: ತನಿಖೆ ಕೋರಿ ಚುನಾವಣಾ ಆಯುಕ್ತರಿಗೆ ಎಎಪಿ ಮನವಿ

ಬೆಂಗಳೂರು: ಮತದಾರರ ಮಾಹಿತಿಯನ್ನು ಚಿಲುಮೆ ಎಂಬ ಎನ್‌ಜಿಒ ದುರ್ಬಳಕೆ ಮಾಡಿಕೊಂಡಿರುವುದು ಹಾಗೂ ಮತದಾರರ ಪಟ್ಟಿಗೆ ಅಕ್ರಮವಾಗಿ ತಿದ್ದುಪಡಿ ತಂದಿರುವುದಕ್ಕೆ ಸಂಬಂಧಿಸಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತನಿಖೆಯಾಗಬೇಕೆಂದು ಆಮ್‌ ಆದ್ಮಿ ಪಾರ್ಟಿಯು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಎಎಪಿ ಮುಖಂಡರು ಹಾಗೂ ಸುಪ್ರೀಂಕೋರ್ಟ್‌ ಖ್ಯಾತ ವಕೀಲರಾದ ಬ್ರಿಜೇಶ್‌ ಕಾಳಪ್ಪ ನೇತೃತ್ವದ ನಿಯೋಗವು ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಸಲ್ಲಿಸಿದ್ದು, “ಬೆಂಗಳೂರಿನ ಮತದಾರರ ಪಟ್ಟಿಯಲ್ಲಿದ್ದ ಅನೇಕ ಹೆಸರು ಅಳಿಸಿಹೋಗಿರುವುದರ ಹಿಂದೆ ಚಿಲುಮೆ ಎಂಬ ಎನ್‌ಜಿಒ ಹೆಸರು ಕೇಳಿಬಂದಿದೆ. ಖಾಸಗಿಯವರೊಂದಿಗೆ ಹಂಚಿಕೊಳ್ಳಬಾರದ ಮಾಹಿತಿಗಳನ್ನು ಚಿಲುಮೆ ಸಂಸ್ಥೆಗೆ ನೀಡಲಾಗಿದೆ ಎಂಬ ಆರೋಪವಿದೆ. ಇದು ಅತ್ಯಂತ ಗಂಭೀರ ಆರೋಪವಾಗಿದ್ದು, ಸೂಕ್ತ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ. ಹಗರಣದಲ್ಲಿ ರಾಜ್ಯ ಸರ್ಕಾರದ ಸಿಎಂ ಹಾಗೂ ಸಚಿವರ ಪಾತ್ರವಿರುವ ಕುರಿತು ಆರೋಪ ಕೇಳಿಬರುತ್ತಿರುವುದರಿಂದ, ಅವರ ಆದೇಶದಂತೆ ಕಾರ್ಯನಿರ್ವಹಿಸುವ ಐಎಎಸ್‌ ಅಧಿಕಾರಿಯೇ ತನಿಖೆ ಮುಂದುವರಿಸುವುದು ಸರಿಯಲ್ಲ. ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವಕ್ಕೆ ವಹಿಸಬೇಕು” ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

“ಪ್ರಜಾಪ್ರಭುತ್ವವು ಚುನಾವಣೆಯ ಮೇಲೆ ನಿಂತಿದೆ. ಭ್ರಷ್ಟ ರಾಜಕಾರಣಿಗಳು ಚುನಾವಣೆಗೆ ಸಂಬಂಧಿಸಿ ವ್ಯಾಪಕ ಅಕ್ರಮಕ್ಕೆ ಮುಂದಾಗಿ, ಪ್ರಜಾಪ್ರಭುತ್ವದ ಮೂಲ ಆಶಯವನ್ನೇ ಬುಡಮೇಲು ಮಾಡುತ್ತಿರುವುದು ಆಘಾತಕಾರಿ. ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ರಾಜಕಾರಣಿಗಳಿಗೆ ಲಾಭ ಮಾಡಿಕೊಡಲು ಸರ್ಕಾರೇತರ ಸಂಸ್ಥೆಯು ಮತದಾರರ ಪಟ್ಟಿಗೆ ಮಾಡಿದ ಅಕ್ರಮ ತಿದ್ದುಪಡಿಗಳನ್ನು ಶೀಘ್ರವೇ ಸರಿಪಡಿಸಬೇಕು” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾದ ವಿಜಯ್‌ ಶರ್ಮಾ ಮಾತನಾಡಿ, “ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲು ತಾಕತ್ತಿಲ್ಲದ ರಾಜಕಾರಣಿಗಳು ಎನ್‌ಜಿಒಗಳ ಮೂಲಕ ಅಕ್ರಮ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜನತೆ ನೀಡಿದ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಆಡಳಿತ ನೀಡಿದ್ದರೆ, ಈಗ ಹೀಗೆ ಅಕ್ರಮ ನಡೆಸುವ ಪ್ರಮೇಯವೇ ಬರುತ್ತಿರಲಿಲ್ಲ. ಹಗರಣದ ಸೂಕ್ತ ತನಿಖೆ ನಡೆದು, ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ಕೆ.ಮಥಾಯಿ, ಮೋಹನ್‌ ದಾಸರಿ, ಜಗದೀಶ್‌ ವಿ ಸದಂ, ಸುರೇಶ್‌ ರಾಥೋಡ್‌, ಚನ್ನಪ್ಪಗೌಡ ನೆಲ್ಲೂರು, ವೇಣುಗೋಪಾಲ್ ಮತ್ತಿತರ ನಾಯಕರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page