Friday, June 21, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ವಾರ್ಡ್‌ ಕಚೇರಿಯಲ್ಲೇ ಚಿಲುಮೆ ತರಬೇತಿ: ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಮತದಾರರ ಮಾಹಿತಿ ಕಳ್ಳತನ ಮತ್ತು ಮಾರಾಟ ಹಗರಣದ ಕಿಂಗ್‌ ಪಿನ್‌ ಆಗಿರುವ ಚಿಲುಮೆ ಸಂಸ್ಥೆ, ಬಿಬಿಎಂಪಿ ನವೆಂಬರ್‌ 2 ರಂದು ಮತದಾರರ ಅಕ್ರಮ ಸರ್ವೆಯನ್ನು ಸ್ಥಗಿತಗೊಳಿಸಲು ಆದೇಶಿಸಿದ್ದರೂ, ನವೆಂಬರ್‌ 17ರವರೆಗೆ ಬಿಜೆಪಿ ವಾರ್ಡ್ ಕಚೇರಿಯೊಂದರಲ್ಲಿ ತನ್ನ ಕಾರ್ಯಕರ್ತರಿಗೆ ತರಬೇತಿ ನಡೆಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಈ ಕುರಿತು ವರದಿ ಮಾಡಿರುವ ʻದಿ ನ್ಯೂಸ್‌ ಮಿನಿಟ್‌ʼ ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿರುವ ಅಪಾರ ಪ್ರಮಾಣ ಮತದಾರರ ಮಾಹಿತಿ ಕಳ್ಳತನ ಹಗರಣದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ಪ್ರಮುಖ ಪಾತ್ರ ವಹಿಸಿರುವ ಕುರಿತು ಮತ್ತಷ್ಟು ದಾಖಲಾತಿಗಳು ಲಭ್ಯವಾಗಿರುವುದಾಗಿ ವರದಿ ಮಾಡಿದೆ.

ದಿ ನ್ಯೂಸ್‌ ಮಿನಿಟ್‌ ಸಂಸ್ಥೆ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಯೋರ್ವರು ಚಿಲುಮೆ ಸಂಸ್ಥೆಯನ್ನು ಸಂಪರ್ಕಿಸಿ, ಉದ್ಯೋಗ ನೀಡಲು ಮನವಿ ಮಾಡಿದ್ದಾರೆ. ಈ ಸಂದೃಭದಲ್ಲಿ ಹೊಂಗಸಂದ್ರ ಬಿಜೆಪಿ ವಾರ್ಡ್ ಕಚೇರಿಯಲ್ಲಿ ಚಿಲುಮೆ ಸಂಸ್ಥೆ ಕ್ಷೇತ್ರ ಕಾರ್ಯಕರ್ತರರಿಗೆ ತರಬೇತಿ ನೀಡುತ್ತಿರುವ ಅಂಶ ತಿಳಿದುಬಂದಿದೆ. ತರಬೇತಿಯಲ್ಲಿ ಮತದಾರರ ಮಾಹಿತಿಗಳನ್ನು ಸಂಗ್ರಹಿಸುವುದು, ವಾರ್ಡ್‌ ಗಡಿಗಳನ್ನು ಗುರುತಿಸುವುದರ ಕುರಿತು ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.‌

2020ರ ಸೆಪ್ಟೆಂಬರ್‌ ವರೆಗೆ ಹೊಂಗಸಂದ್ರ ವಾರ್ಡ್‌ ಕಚೇರಿ ಮುಂದೆ  ಆಗಿನ ಬಿಬಿಎಂಪಿ ಸದಸ್ಯೆ ಬಿಜೆಪಿಯ ಭಾರತಿ ರಾಮಚಂದ್ರ ಅವರ ನಾಮಫಲಕ ಅಳವಡಿಸಲಾಗಿತ್ತು. ಈಗ ಬೊಮ್ಮಸಂದ್ರ ಶಾಸಕ ಸತೀಶ್ ರೆಡ್ಡಿಯವರ ಹೆಸರು ಹಾಕಲಾಗಿದ್ದು, ಅವರೂ ಸಹ ಭಾರತೀಯ ಜನತಾ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ದಿ ನ್ಯೂಸ್‌ ಮಿನಿಟ್‌ ಸಂಸ್ಥೆ ಮತದಾರರ ಮಾಹಿತಿ ಕಳ್ಳತನದ ಕುರಿತು ತನಿಖೆ ನಡೆಸಲು ಆರಂಭಿಸಿದ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನವೆಂಬರ್‌ 2ರಂದು ಆದೇಶವನ್ನು ಹೊರಡಿಸಿ, ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದು, ಕೂಡಲೇ ಕ್ಷೇತ್ರಕಾರ್ಯ ನಿಲ್ಲಿಸುವಂತೆ ಸೂಚಿಸಿತ್ತು. ಆದರೂ ನವೆಂಬರ್‌ 17ರವರೆಗೆ ಚಿಲುಮೆ ಸಂಸ್ಥೆ ತರಬೇತಿ ಮತ್ತು ಕ್ಷೇತ್ರ ಕಾರ್ಯವನ್ನು ನಿಲ್ಲಿಸಿರಲಿಲ್ಲ.

ಮತದಾನ ಜಾಗೃತಿ ಕಾರ್ಯಕ್ಕೆ ಅನುಮತಿ ಪಡೆದಿದ್ದ ಚಿಲುಮೆ ಎಂಬ ಸರ್ಕಾರೇತರ ಸಂಸ್ಥೆ ತನ್ನ ನೂರಾರು ಕಾರ್ಯಕರ್ತರನ್ನು ತೊಡಗಿಸಿ, ನಗರದ ಸಾವಿರಾರು ಮತದಾರರ ಅತಿಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಈಗಾಗಲೇ ಚಿಲುಮೆ ಸಂಸ್ಥೆ ಮತ್ತು ಬಿಜೆಪಿಯ ಮಾಜಿ ಶಾಸಕ ನಂದೀಶ್‌ ರೆಡ್ಡಿ ನಡುವೆ ಹಣಕಾಸಿನ ವ್ಯವಹಾರ ನಡೆದಿರುವುದು ಬಹಿರಂಗವಾಗಿದೆ.

ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದಾಗಿದ್ದರೂ ಅದು ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುತ್ತಿರುವ ಕುರಿತು ಮಾಹಿತಿ ಪಡೆದ ದಿ ನ್ಯೂಸ್‌ ಮಿನಿಟ್‌ ಸಂಸ್ಥೆ ವರದಿಗಾರರು ನವೆಂಬರ್‌ 12ರಂದು ಮಲ್ಲೇಶ್ವರಂನಲ್ಲಿರುವ ಚಿಲುಮೆಯ ಕಚೇರಿಗೆ ಉದ್ಯೋಗಾಕಾಂಕ್ಷಿಯ ರೂಪದಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ವರದಿಗಾರರನ್ನು ಸಂದರ್ಶಿಸಿದ್ದ ಮಹಿಳೆಯೊಬ್ಬರು, ನೀವು ಉದ್ಯೋಗಕ್ಕೆ ನೇಮಕವಾಗಿದ್ದೀರಿ ಎಂದು ತಿಳಿಸಿದ್ದರು. ʻʻನಾನು ಬಿಕಾಂ ಡ್ರಾಪ್‌ ಔಟ್‌ ಆಗಿದ್ದೇನೆ ಎಂದು ಹೇಳಿದಾಗ ಅವರು ನಿನ್ನ ಬಳಿ ಒಂದು ಸ್ಮಾರ್ಟ್‌ ಫೋನ್‌, ಬೈಕ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌ ಇದ್ದರೆ ಸಾಕು.ʼʼ ಎಂದು ಆ ಮಹಿಳೆ ಹೇಳಿದ್ದಾಗಿ ವರದಿಗಾರರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ 23,000 ರೂ ಸಂಬಳ, 2000 ರೂ ಪೆಟ್ರೋಲ್‌ ಭತ್ಯೆ ಹಾಗು ವಿಶೇಷ ಭತ್ಯೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದಾದ ನಂತರ ದಿ ನ್ಯೂಸ್‌ ಮಿನಿಟ್‌ ವರದಿಗಾರರಿಗೆ ನವೆಂಬರ್‌ 16ರಂದು ಅದೇ ಮಹಿಳೆ ಕರೆ ಮಾಡಿ ಮಾತನಾಡಿದ್ದು, ಹೊಸ ಬ್ಯಾಚ್‌ ತರಬೇತಿ ಆರಂಭವಾಗುತ್ತಿದ್ದು, ಬಂದು ಕೆಲಸಕ್ಕೆ ಹಾಜರಾಗುವಂತೆ ಹೇಳಿದ್ದಾರೆ. ನೀವು ಸರ್ವೆ ಕೆಲಸದಲ್ಲಿ ತೊಡಗಬೇಕು ಎಂದು ಅವರು ಹೇಳಿದ್ದಲ್ಲದೆ ದಕ್ಷಿಣ ಬೆಂಗಳೂರಿನ ಹೊಂಗಸಂದ್ರ ಬಡಾವಣೆಯ ಲೊಕೇಷನ್‌ ಕಳುಹಿಸಿಕೊಟ್ಟಿದ್ದಾರೆ. ಸದರಿ ಲೊಕೇಷನ್‌ಗೆ ತೆರಳಿದಾಗ ಅದು ಬಿಜೆಪಿ ಶಾಸಕ ಸತೀಶ್‌ ರೆಡ್ಡಿಯವರ ನಾಮಫಲಕವಿದ್ದ ಬಿಜೆಪಿ ವಾರ್ಡ್‌ ಕಚೇರಿ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ದಿ ನ್ಯೂಸ್‌ ಮಿನಿಟ್‌ ವರದಿಗಾರರು ತರಬೇತಿಯ ಚಿತ್ರಗಳನ್ನೂ ತೆಗೆದುಕೊಂಡಿದ್ದಾರೆ.

ನವೆಂಬರ್‌ 17ರಂದು ಬಿಜೆಪಿ ವಾರ್ಡ್‌ ಕಚೇರಿಯಲ್ಲಿ ನಡೆದ 30 ಜನರ ಹೊಸ ಜನರ ಬ್ಯಾಚ್‌ಗಳಿಗೆ ನಕ್ಷೆ ತಯಾರಿಕೆಯಲ್ಲಿ ತರಬೇತಿ ಕೊಡಲಾಗುತ್ತಿತ್ತು. ತರಬೇತಿಯಲ್ಲಿ ʼಇಂಟರ್‌ನೆಟ್‌ನಿಂದ ನೆರೆಹೊರೆಯವರ ಮಾಹಿತಿಗಳನ್ನು ಹೇಗೆ ಡೌನ್‌ಲೋಡ್‌ ಮಾಡಬೇಕು ಅವುಗಳನ್ನು ಹೇಗೆ ಭರ್ತಿ ಮಾಡುವುದು ಎಂದು ಹೇಳಿಕೊಡಲಾಯಿತು. ಪ್ರತಿಯೊಂದು ರೀತಿಯ ಆಸ್ತಿಗೂ ಅದು ಖಾಲಿ ಇದೆಯೇ ಅಥವಾ ನಿರ್ಮಾಣ ಹಂತದಲ್ಲಿದೆಯೇ, ಮಾಲೀಕರು ಅಥವಾ ಬಾಡಿಗೆದಾರರು ಆಕ್ರಮಿಸಿಕೊಂಡಿದ್ದಾರೆಯೇ ಎಂಬುದರ ಆಧಾರದ ಕುರಿತು ಕೋಡ್‌ಗಳನ್ನು ನೀಡಲಾಗಿದೆʼ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು