ಅಮೆರಿಕ ಮತ್ತು ಚೀನಾ ವ್ಯಾಪಾರ ಯುದ್ಧದಲ್ಲಿ ತೊಡಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿರುವ ಸುಂಕ ಸಮರದ ವಿರುದ್ಧ ಚೀನಾ ಕೂಡ ಅದೇ ಪ್ರಮಾಣದಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.
ಡ್ರ್ಯಾಗನ್ ನೇಷನ್ ಸರಕುಗಳ ಮೇಲೆ ಟ್ರಂಪ್ ಶೇ. 104ರಷ್ಟು ಸುಂಕ ವಿಧಿಸಿದ ನಂತರ, ಬೀಜಿಂಗ್ ಇತ್ತೀಚೆಗೆ ಅಮೆರಿಕದ ಉತ್ಪನ್ನಗಳ ಮೇಲೆ ಶೇ. 84ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿತು. ಈ ಸುಂಕಗಳು ಏಪ್ರಿಲ್ 10ರಿಂದ ಜಾರಿಗೆ ಬರಲಿವೆ ಎಂದು ಚೀನಾದ ಹಣಕಾಸು ಸಚಿವಾಲಯ ಪ್ರಕಟಿಸಿದೆ.
ಇತ್ತೀಚೆಗೆ ಅಮೆರಿಕ ಚೀನಾದ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿದ ನಂತರ, ದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 34ರಷ್ಟು ಸುಂಕವನ್ನು ವಿಧಿಸಲು ಚೀನಾ ನಿರ್ಧರಿಸಿದೆ. ಇದರಿಂದ ಕೋಪಗೊಂಡ ಟ್ರಂಪ್, ಏಪ್ರಿಲ್ 8 ರೊಳಗೆ ಚೀನಾ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಎಚ್ಚರಿಸಿದರು. ಇಲ್ಲದಿದ್ದರೆ, ಹೆಚ್ಚುವರಿಯಾಗಿ ಶೇಕಡಾ 50 ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸುವುದಾಗಿ ಅವರು ಹೇಳಿದರು.
ಇತ್ತ ಚೀನಾ ನೀಡಿದ ಗಡುವಿನೊಳಗೆ ಪ್ರತಿಕ್ರಿಯಿಸದ ಕಾರಣ, ಅವರು ಹೇಳಿದಂತೆ ಮಾಡಿದರು. ಚೀನಾದ ಮೇಲೆ ವಿಧಿಸಲಾದ ಸುಂಕಗಳು ಶೇಕಡಾ 104ಕ್ಕೆ ತಲುಪಿದ್ದು, ಈ ಹಿಂದೆ ವಿಧಿಸಲಾಗಿದ್ದ ಶೇಕಡಾ 54ಕ್ಕೆ ಹೆಚ್ಚುವರಿಯಾಗಿ ಶೇಕಡಾ 50ರಷ್ಟು ಸೇರ್ಪಡೆಯಾಗಿದೆ. ಅಮೆರಿಕ ದುರಹಂಕಾರದಿಂದ ವರ್ತಿಸುತ್ತಿದೆ ಮತ್ತು ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ ಚೀನಾ ಪ್ರತಿಯಾಗಿ, ಇನ್ನೂ ಶೇ. 50ರಷ್ಟು ಸುಂಕ ಹೆಚ್ಚಳವನ್ನು ಘೋಷಿಸಿದೆ.