Home ವಿಶೇಷ ಚೀನಾ ಕ್ರಾಂತಿ, ಭಾರತೀಯ ಮಾಧ್ಯಮ ಜಗತ್ತು ಇತ್ಯಾದಿ…

ಚೀನಾ ಕ್ರಾಂತಿ, ಭಾರತೀಯ ಮಾಧ್ಯಮ ಜಗತ್ತು ಇತ್ಯಾದಿ…

0

ಭಾರತದೊಳಗೆ ಕನಿಷ್ಠ ವಾರಕ್ಕೊಂದೆರಡು “ಸುದ್ದಿ ಕ್ರಾಂತಿ” ಮಾಡಿ ಅಭ್ಯಾಸ ಆಗಿರುವ ಸೆನ್ಸೇಷನಲ್‌ ಸುದ್ದಿ ಜಗತ್ತು ಈಗ, ಜಗತ್ತಿನ ಉದ್ದಗಲದ ಸಂಗತಿಗಳನ್ನೂ ತಮ್ಮ ಚಹಾಕಪ್ಪಿಗೆ ಇಳಿಸಿಕೊಂಡು, ಅಲ್ಲೇ ಸುಂಟರಗಾಳಿ ಎಬ್ಬಿಸುವುದು ನೋಡಲು ಮಜವಾಗಿರುತ್ತದೆ. ಅಂತಹದೊಂದು ಸಂಭ್ರಮ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಚೀನಾದಲ್ಲಿ ಅಧ್ಯಕ್ಷರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ, ಸೇನೆ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸುದ್ದಿ ಅದು.

ನಿನ್ನೆ ಮಧ್ಯಾಹ್ನದ ಹೊತ್ತಿಗೆ, ಆರಂಭಿಕವಾಗಿ ಒಂದೆರಡು “ನಾಗಪುರಿ” ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡ ಈ ಸುದ್ದಿ, ಸುಬ್ರಹ್ಮಣ್ಯಂ ಸ್ವಾಮಿ ಅವರ ಟ್ವೀಟ್ ಜೊತೆ ತಾರಕಕ್ಕೇರಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ “ನಂಬರ್” ಇರುವ ಕಾರಣಕ್ಕಾಗಿ, ಇಲ್ಲಿ ಸುದ್ದಿ ಆದರೆ ಇಂಟರ್ನೆಟ್ ಲೋಕದಲ್ಲಿ ಅದು ಸುದ್ದಿ ಆಗಿ, ಟ್ರೆಂಡ್ ಆಗಿ ಬದಲಾಗುವುದಕ್ಕೆ ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಇದಕ್ಕೆಲ್ಲ ಕಲಶ ಇಟ್ಟದ್ದು ಮುಂದಿನ ತಿಂಗಳ ಆದಿಯಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ವಾರ್ಷಿಕ ಅಧಿವೇಶನ ಇದೆ. ಅದಕ್ಕೆ ಮುನ್ನ ಅಧ್ಯಕ್ಷರ ಪದಚ್ಯುತಿ ನಿಶ್ಚಿತ ಎಂಬ ಕೆಲವು “ಫಲಜ್ಯೋತಿಷ” ಹೇಳಿಕೆಗಳು!

ನಿನ್ನೆ ತಡರಾತ್ರಿ, ಇಂದು ಬೆಳಗ್ಗೆ ಚೀನಾದಲ್ಲಿ ವಿಮಾನಗಳು ರದ್ಧಾಗಿವೆ ಎಂಬ ಫ್ಲೈಟ್ ಷೆಡ್ಯೂಲ್ ಸ್ಕ್ರೀನ್‌ಷಾಟ್‌ಗಳು, ಲೈವ್ ಫ್ಲೈಟ್ ಟ್ರಾಕರ್ ಸ್ಕ್ರೀನ್‌ಷಾಟ್‌ಗಳು ತಿರುಗಾಡಿ, ನಿನ್ನೆ ಹುಟ್ಟಿದ ಈ ಊಹಾಪೋಹಗಳಿಗೆ ತುಪ್ಪ ಎರೆಯುತ್ತಿವೆ. ನಾನು ಈಗ ಐದು ನಿಮಿಷ ಹಿಂದೆ ತೆಗೆದ ಚೀನಾ ಮೇಲಿನ ಫ್ಲೈಟ್ ಟ್ರಾಕರ್ ಸ್ಕ್ರೀನ್‌ಷಾಟ್‌ನಲ್ಲಿ ಅಂತಹ ಅಸಹಜತೆಗಳೇನೂ ಕಾಣಿಸಲಿಲ್ಲ. ಚಿತ್ರ ಮೇಲಿದೆ ನೋಡಿ. (ಈ ಟ್ರ್ಯಾಕರ್‌ಗಳ ಸಾಚಾತನದ ಬಗ್ಗೆ ಕೇಳಬೇಡಿ ಮತ್ತೆ!) ಈ ಸುದ್ದಿಯ ಹಿನ್ನೆಲೆಯಲ್ಲಿ ತಿರುಗಾಡುತ್ತಿರುವ ಸೇನಾ ಚಲನವಲನ, ಬಾಂಬ್ ಸ್ಫೋಟದ ವೀಡಿಯೊಗಳೆಲ್ಲ ದಿಕ್ಕುದಿಸೆಯಿಲ್ಲದ ಅಬ್ಬೇಪಾರಿ ಮೂಲಗಳವು.

ಚೀನಾ ಸುದ್ದಿ-ಮಾಹಿತಿಗೆ ಸಂಬಂಧಿಸಿದಂತೆ ಜಗತ್ತಿನಿಂದ ಪ್ರತ್ಯೇಕವಾಗಿ ಅಭೇದ್ಯ ಕೋಟೆ ಕಟ್ಟಿಕೊಂಡಿದೆ ಮತ್ತು ಅದು ಎಷ್ಟು ಅಭೇದ್ಯ ಎಂಬುದು ಕೋವಿಡ್ ಕಾಲದಲ್ಲಿ ಜಗತ್ತಿಗೆ ಗೊತ್ತಾಗಿದೆ. ಅದು ಪಾಶ್ಚಿಮಾತ್ಯ ಮಾಧ್ಯಮಗಳ ವೈಫಲ್ಯವೂ ಹೌದು. ಆ ಕಾಲದಲ್ಲಿ ಬಂದ, ಅಲ್ಲಿನ ಕೋವಿಡ್ ಸಾವಿನ ವಿಪರೀತ ಸುದ್ದಿಗಳನ್ನೆಲ್ಲ ಗಮನಿಸಿದರೆ, ಈಗ ನನಗೆ ಚೀನಾದಲ್ಲಿ ಜನ ಉಳಿದಿರುವುದೇ ಡೌಟು ಮಾರಾಯ್ರೆ!

ಬೇರೆ ದೇಶಗಳಲ್ಲಿ ಚೀನಾ ಬಗ್ಗೆ ಸುದ್ದಿ, ಮಾಹಿತಿ ಲಭ್ಯ ಇಲ್ಲದಿದ್ದರೂ, ದೂರಪೂರ್ವದ ಕೊರಿಯಾ, ಜಪಾನ್‌ಗಳಲ್ಲಿ ಆ ಬಗ್ಗೆ ಸಣ್ಣ ವಾಸನೆಯಾದರೂ ಹೊಡೆಯಲೇಬೇಕು. ಯಾಕೆಂದರೆ ಆ ದೇಶಗಳು ಚೀನಾ ಜೊತೆ ಸಾಕಷ್ಟು ಹಾಸುಹೊಕ್ಕು ಸಂಬಂಧ ಹೊಂದಿವೆ. ಬೆಳಗ್ಗೆಯಿಂದ ಕೊರಿಯಾ ಮತ್ತು ಜಪಾನ್‌ಗಳ ಪ್ರಮುಖ ಸುದ್ದಿ ಪತ್ರಿಕೆಗಳನ್ನು ಗಮನಿಸುತ್ತಿದ್ದೇನೆ. ಅಲ್ಲೆಲ್ಲೂ ಸಣ್ಣ ಸುಳಿವು ಕೂಡ ಇಲ್ಲ.

ಇಷ್ಟೆಲ್ಲ ಇದ್ದೂ, ನಿಜಕ್ಕೂ ಚೀನಾದಲ್ಲಿ ಕ್ರಾಂತಿ ಆಗಿದೆ ಎಂದಾದರೆ, ಅವರು ನಿಜಕ್ಕೂ ಗ್ರೇಟ್ ಮಾರಾಯ್ರೆ! ಸುದ್ದಿಯ ನಿಯಂತ್ರಣ ಅವರಿಂದ ಜಗತ್ತು ಕಲೀಬೇಕು! ಯಾವ ದೇಶಕ್ಕೂ ಇಷ್ಟೆಲ್ಲ ಟೆಕ್ನಾಲಜಿ ಇದ್ದರೂ, 24ಗಂಟೆ ದಾಟಿದ ಬಳಿಕವೂ ಕ್ರಾಂತಿಯ ನಿಜ ಚಿತ್ರ ಪಡೆಯಲಾಗಿಲ್ಲ! ಶೇಮ್ ಶೇಮ್!!

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ರಾಜಾರಾಂ ತಲ್ಲೂರು
ಲೇಖಕರು, ಚಿಂತಕರು

🔶 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾದವರು ಕೇವಲ ಭಾರತೀಯರು ಮಾತ್ರವಲ್ಲ. ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಅಮೆರಿಕದ ಹೆಸರಾಂತ ನಾಗರಿಕ ಹಕ್ಕು ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್ ಇದಕ್ಕೊಂದು ಉದಾಹರಣೆ. ಗಾಂಧಿಯವರು ಮಾರ್ಟಿನ್‌ ಲೂಥರ್‌ ಕಿಂಗ್‌ ಅವರನ್ನು ಹೇಗೆ ಪ್ರಭಾವಿಸಿದ್ದರು ಎಂಬುದನ್ನು ವಿವರಿಸಿದ್ದಾರೆ ಸಾಮಾಜಿಕ ಚಿಂತಕ ನಿಕೇತ್‌ ರಾಜ್‌ ಮೌರ್ಯ.
ಇದನ್ನೂ ನೋಡಿ
:https://www.youtube.com/watch?v=ULe6eJJ51XQ

You cannot copy content of this page

Exit mobile version