ಜಂತರ್ ಮಂತರ್ ಹಲ್ಲೆ | ಸ್ವತಂತ್ರ ಭಾರದ್ವಾಜ್‌ ನನ್ನ ಹೆಸರನ್ನು ದುರ್ಬಳಕೆ ಮಾಡಿದ್ದಾನೆ: ಪೊಲೀಸರಿಗೆ ದೂರು ಕೊಟ್ಟ ಚಿರಾಗ್‌ ಪಾಸ್ವಾನ್

ಪಾಟ್ನಾ: ಜಂತರ್ ಮಂತರ್ ಪ್ರತಿಭಟನೆ ವೇಳೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಮತ್ತು ಕಪಿಲ್ ಮಿಶ್ರಾ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡ ಆರೋಪಿ ಸ್ವತಂತ್ರ ಭಾರದ್ವಾಜ್ ವಿರುದ್ಧ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಅತ್ಯಂತ ಗಂಭೀರವಾದ ಪ್ರಕರಣ. ವ್ಯಕ್ತಿಯೊಬ್ಬ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಹಲ್ಲೆ ನಡೆಸಿದ್ದಾಗಿ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಗಿ ಒಪ್ಪಿಕೊಂಡ ಮೇಲೂ ಆತನ ವಿರುದ್ಧ ಕ್ರಮ ಜರುಗಿಸದಿದ್ದರೆ, ಸಮಾಜ ಮತ್ತು ಇಡೀ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವ ನಾಯಕರನ್ನು ಯಾರು ಬೇಕಾದರೂ ಭೇಟಿಯಾಗಬಹುದು, ಆದರೆ ಅದರರ್ಥ ಆತ ನಮ್ಮ ಆಪ್ತನೆಂದಲ್ಲ. ಹಲವು ರಾಜಕೀಯ ನಾಯಕರೊಂದಿಗೆ ನನ್ನ ಹೆಸರನ್ನೂ ಆತ ದುರ್ಬಳಕೆ ಮಾಡಿಕೊಂಡಿರುವ ಕಾರಣ, ಆತನ ವಿರುದ್ಧ ದೂರು ದಾಖಲಿಸಿದ್ದೇನೆ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಆಗ್ರಹಿಸಿದ್ದೇನೆ” ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಸಂತ್ರಸ್ತ ಸಂಜಯ್ ಕುಮಾರ್, ಅವರ ಪುತ್ರಿ ನಿಶು ಆಜಾದ್ ಮತ್ತು ಅವರ ಕುಟುಂಬದ ಪರವಾಗಿ ತಮ್ಮ ಪಕ್ಷ ಸಂಪೂರ್ಣವಾಗಿ ನಿಲ್ಲಲಿದ್ದು, ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೆ ಜವಾಬ್ದಾರಿಯುತವಾಗಿ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾನೂನನ್ನು ಬಹಿರಂಗವಾಗಿ ಗೇಲಿ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಶೀಘ್ರ ಕಠಿಣ ಕಾನೂನು ಕ್ರಮ ಕೈಗೊಂಡು, ಆತನಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು