ದೆಹಲಿ: ಚುನಾವಣಾ ಪ್ರಕ್ರಿಯೆ ಹಾಗೂ ಸ್ಪೆಷಲ್ ಇಂಟೆನ್ಸಿವ್ ರಿವಿಷನ್ (SIR) ಕುರಿತಾಗಿ ಕೇಂದ್ರ ಚುನಾವಣಾ ಆಯೋಗ (ECI) ನೀಡಿರುವ ವಿವರಣೆಗೆ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಚುನಾವಣಾ ಆಯೋಗದ ವಿರುದ್ಧ ಪದೇಪದೆ ಅನುಮಾನ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್, “ಚುನಾವಣಾ ಆಯೋಗವು ಪ್ರತಿಯೊಂದು ವಿಷಯದ ಬಗ್ಗೆಯೂ ಸ್ಪಷ್ಟನೆ ನೀಡಿದೆ. ಇದರಿಂದ ನಮಗೆ ಸಮಾಧಾನವಾಗಿದೆ. ಆದರೆ ಪ್ರತಿಪಕ್ಷಗಳು ಪದೇಪದೆ ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ‘ಸೆಲೆಕ್ಟಿವ್ ಕ್ರಿಟಿಸಿಸಂ’ (ಆಯ್ದ ಟೀಕೆ) ಮಾಡುತ್ತಿವೆ,” ಎಂದು ಆರೋಪಿಸಿದರು.
ಕರ್ನಾಟಕ, ಹಿಮಾಚಲದಲ್ಲಿ ಗೆದ್ದಿದ್ದು ಹೇಗೆ?
ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಪ್ರಶ್ನಿಸಿದ ಪಾಸ್ವಾನ್, “ಬಿಜೆಪಿ ಅಥವಾ ಎನ್ಡಿಎ ಸರ್ಕಾರಗಳು ರಚನೆಯಾದ ರಾಜ್ಯಗಳನ್ನು ಮಾತ್ರ ಪ್ರತಿಪಕ್ಷಗಳು ಟಾರ್ಗೆಟ್ ಮಾಡುತ್ತವೆ. ಚುನಾವಣಾ ಪ್ರಕ್ರಿಯೆಯಲ್ಲೇ ದೋಷವಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹೇಗೆ ಅಧಿಕಾರಕ್ಕೆ ಬಂತು? ಹಿಮಾಚಲ ಪ್ರದೇಶದಲ್ಲಿ ನಿಮ್ಮ ಸರ್ಕಾರ ಹೇಗೆ ನಡೆಯುತ್ತಿದೆ? ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ? ಮತದಾರರ ಪಟ್ಟಿಯ ಪರಿಷ್ಕರಣೆ (SIR) ಅಷ್ಟೊಂದು ದೊಡ್ಡ ಸಮಸ್ಯೆಯಾಗಿದ್ದರೆ ಇವರು ಅಲ್ಲಿ ಹೇಗೆ ಜಯಗಳಿಸುತ್ತಿದ್ದರು? ತಾವು ಗೆದ್ದ ಕಡೆ ಮೌನವಾಗಿರುವ ವಿರೋಧ ಪಕ್ಷಗಳು, ಸೋತ ಕಡೆ ಮಾತ್ರ ವ್ಯವಸ್ಥೆಯನ್ನೇ ಪ್ರಶ್ನಿಸುತ್ತವೆ,” ಎಂದು ಕಿಡಿಕಾರಿದರು.
ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದ್ದ ಮಿತ್ರಪಕ್ಷಗಳು
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಮತ್ತು ಫಾರ್ಮ್ 6 ಗೆ ಸಂಬಂಧಿಸಿದಂತೆ ಎದ್ದಿದ್ದ ವರದಿಗಳ ಬೆನ್ನಲ್ಲೇ, ಎನ್ಡಿಎ ಮಿತ್ರಪಕ್ಷಗಳಾದ ಎಲ್ಜೆಪಿ (ಆರ್ವಿ), ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್ಎಲ್ಎಂ) ಜನರಲ್ಲಿ ಮೂಡಿರುವ ಅನುಮಾನಗಳನ್ನು ಪರಿಹರಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಆಯೋಗವು ಸ್ಪಷ್ಟನೆ ನೀಡಬೇಕೆಂದು ಚಿರಾಗ್ ಪಾಸ್ವಾನ್ ಈ ಹಿಂದೆ ಹೇಳಿದ್ದರು. ಇದೀಗ ಆಯೋಗದ ವಿವರಣೆಯ ನಂತರ ತಾವು ಸಂಪೂರ್ಣ ತೃಪ್ತರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
