ಚಿತ್ರದುರ್ಗ: ಪೋಕ್ಸೋ ಪ್ರಕರಣದಡಿ ಜೈಲು ಪಾಲಾಗಿದ್ದ ಮುರುಘಾ ಶರಣರಿಗೆ ಕೊನೆಗೂ ಬಿಡುಗಡೆ ದೊರಕಿದೆ. ಇಂದು ಅವರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಳಿಸಲಾಯಿತು.
ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಪೋಕ್ಸೋ ಕೇಸ್ ದಾಖಲಾಗಿ ಕಳೆದ ವರ್ಷ ಮುರುಘಾ ಶರಣರು ಜೈಲುಸೇರಿದ್ದರು. ಈ ಸಂಬಂಧ ನವೆಂಬರ್ 8ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರಿಗೆ ಬಿಡುಗಡೆ ದೊರಕಿದೆ.
ಸ್ವಾಮಿಯ ಮೇಲೆ ಒಟ್ಟ ಎರಡು ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿದೆ. ಇನ್ನೊಂದು ಪ್ರಕರಣದಡಿ ಅವರ ಮೇಲೆ ಬಾಡಿ ವಾರೆಂಟ್ ಇಲ್ಲದ ಕಾರಣ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಗೊಂಡ ಸ್ವಾಮಿ ನೇರ ದಾವಣಗೆರೆಗೆ ತೆರಳಿದ್ದು ಅಲ್ಲಿ ಶಿವಯೋಗಿ ಗದ್ದುಗೆಗೆ ನಮಸ್ಕರಿಸಿ, ನಂತರ ಅಲ್ಲಿನ ಶಿವಯೋಗಿ ಮಠದಲ್ಲೇ ಉಳಿದುಕೊಳ್ಳುತ್ತಾರೆ ಎನ್ನಲಾಗಿದೆ. ಹೈಕೋರ್ಟ್ ಸ್ವಾಮಿಗೆ ಚಿತ್ರದುರ್ಗ ಪ್ರವೇಶಿಸದಂತೆ ಆದೇಶ ನೀಡಿರುವುದರಿಂದಾಗಿ ಅವರು ದಾವಣೆಗೆರೆಯಲ್ಲೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.
ಹೈಕೋರ್ಟ್ ಇನ್ನೂ ಕೆಲವು ಷರತ್ತುಗಳನ್ನು ವಿಧಿಸಿದ್ದು ಅವು ಈ ಕೆಳಗಿನಂತಿವೆ:
- ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರಾಗಬೇಕು.
- ಪ್ರಕರಣ ಸಂಬಂಧ ಸಾಕ್ಷ್ಯ ನಾಶ ಮಾಡುವಂತಿಲ್ಲ.
- ಕೋರ್ಟ್ ಗೆ ಇಬ್ಬರ ಶ್ಯೂರಿಟಿಯನ್ನು ನೀಡಬೇಕು.
- ಮುರುಘಾ ಶ್ರೀ ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು.
- 2 ಲಕ್ಷ ರೂಪಾಯಿಯ ಬೇಲ್ ಬಾಂಡ್ ನೀಡಬೇಕು.
- ಮತ್ತೆ ಇಂತಹ ಅಪರಾಧ ಎಸಗುವಂತಿಲ್ಲ.
- ಜಾಮೀನು ಆದೇಶ ದುರ್ಬಳಕೆ ಮಾಡಬಾರದು.
ಕಾನೂನು ಗೊಂದಲದ ಕಾರಣ ನಿನ್ನೆಯವರೆಗೂ ಸ್ವಾಮಿಯ ಬಿಡುಗಡೆಯ ಕುರಿತು ಗೊಂದಲಗಳಿದ್ದವು.