Saturday, March 15, 2025

ಸತ್ಯ | ನ್ಯಾಯ |ಧರ್ಮ

ಕ್ರಿಸ್ ಮಸ್ ಕದನ ವಿರಾಮ

1914ರ  ಮೊದಲ ವಿಶ್ವ ಯುದ್ಧದ ಸಂಧರ್ಭದಲ್ಲಿ  ಕ್ರಿಸ್‌ಮಸ್ ಆಸುಪಾಸಿನ ಸಮಯದಲ್ಲಿ , ಪರಸ್ಪರ ಹೋರಾಟ ನಿರತ ಫ್ರೆಂಚ್ ,ಬ್ರಿಟಿಷ್ ಮತ್ತು ಜರ್ಮನ್  ಸೈನ್ಯಗಳ  ನಡುವೆ  ನಡೆದ ವ್ಯಾಪಕವಾದ ಅನಧಿಕೃತ ಕದನ ವಿರಾಮಗಳ ಸರಣಿಯು  ‘ಕ್ರಿಸ್ ಮಸ್ ಕದನ ವಿರಾಮ’ ಎಂದು ಇತಿಹಾಸದಲ್ಲಿ ದಾಖಲಾಗಿದೆ .

ಕೆಲವು ಪ್ರದೇಶಗಳಲ್ಲಿ, ಎರಡೂ ಕಡೆಯ ಸೈನಿಕರು  ಕ್ರಿಸ್‌ಮಸ್ ಈವ್ ಮತ್ತು ಕ್ರಿಸ್‌ಮಸ್ ದಿನದಂದು ‘ನೋ ಮ್ಯಾನ್ಸ್ ಲ್ಯಾಂಡ್ ‘ (ಎರಡೂ ದೇಶಗಳ ನಡುವೆ ಯಾರಿಗೂ ಸೇರದೇ ಉಳಿದುದೆಂದು ತೀರ್ಮಾನಿಸಲ್ಪಟ್ಟ ಸಣ್ಣ,ಬಹುತೇಕ ಗಡಿ ಉದ್ದಕ್ಕೂ ಇರುವ ಪ್ರದೇಶ) ಪ್ರದೇಶದಲ್ಲಿ ಸಂಧಿಸಿ ಶುಭಾಶಯ ಕೋರಿ  ಆಹಾರ ಮತ್ತು ಸ್ಮರಣಿಕೆಗಳನ್ನು ವಿನಿಮಯ ಮಾಡಿಕೊಂಡರು . ಜಂಟಿ ಸಮಾಧಿ ಸಮಾರಂಭಗಳು ಮತ್ತು ಖೈದಿಗಳ ವಿನಿಮಯಗಳು ನಡೆದವು , ಹಲವಾರು ಸಭೆಗಳು ಕ್ರಿಸ್ ಮಸ್ ಕರೋಲ್-ಗಾಯನದಲ್ಲಿ ಕೊನೆಗೊಂಡವು. ಕೆಲವು ವಿರೋಧಿ  ಪಾಳೆಯಕ್ಕೆ ಸೇರಿದ ಸೈನಿಕರು ಫುಟ್ಬಾಲ್ ಆಟವನ್ನೂ  ಆಡಿದರು, ಈ ಮೂಲಕ ಕದನ ವಿರಾಮದ ಅತ್ಯಂತ ಸ್ಮರಣೀಯ ಘಳಿಗೆಗಳನ್ನು ರಚಿಸಿದರು.

ಯುದ್ಧ ನಿರತ ಪ್ರತೀ ಪ್ರದೇಶದಲ್ಲೂ ಈ ವಿದ್ಯಮಾನ ನಡೆಯಲಿಲ್ಲ ,ಕೆಲವೆಡೆ ಎಂದಿನಂತೆ ಯುದ್ಧ ಮುಂದುವರಿದಿತ್ತು ,ಕೆಲವೇ ಪ್ರದೇಶಗಳಲ್ಲಿ ನಡೆದರೂ  ಈ ಅಮೂಲ್ಯ ಕದನ ವಿರಾಮದ ಘಳಿಗೆಗಳು  ಬಹಳ ಸಮಯ ಉಳಿಯಲಿಲ್ಲ , ಕದನ ವಿರಾಮ ಘೋಷಿಸಿಕೊಂಡ ಸೈನಿಕರು ವಿಚಾರಣೆ ,ಶಿಕ್ಷೆಗೂ ಒಳಗಾದರಂತೆ.

ಯುದ್ಧ ವರ್ಷಗಳ ಕಾಲ ಮುಂದುವರಿಯಿತು, 1915ರ ವರ್ಷದ ಯುದ್ಧಗಳಲ್ಲಿ ಆದ ನಷ್ಟ ,ಪ್ರಾಣ ಹಾನಿಯು ಸೈನಿಕರ ಮನಸ್ಸಿನ ಮೇಲೆ  ಕಹಿ ಪರಿಣಾಮವನ್ನುಂಟು ಮಾಡಿತ್ತು ,ನಂತರದ ವರ್ಷಗಳಲ್ಲಿ ಯಾವುದೇ ಕ್ರಿಸ್ ಮಸ್ ಕದನ ವಿರಾಮಗಳು ನಡೆದ ವರದಿ ಇಲ್ಲ.

ರಷ್ಯಾ – ಉಕ್ರೇನ್ ಯುದ್ಧ ಆರಂಭವಾಗಿ 300 ದಿನಗಳಿಗೂ ಹೆಚ್ಚು ಕಾಲವಾಗಿದೆ, ಬೇರೆ ಸಂದರ್ಭಗಳಲ್ಲಿ  ಸ್ನೇಹಿತರೋ,ಬಂಧುಗಳೋ ಆಗಬಹುದಾಗಿದ್ದ “ಕೈವನ್ ರುಸ್ (Kievan Rus) ಸೋದರರು” ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ.

ಪೂರ್ವಾಶ್ರಮದಲ್ಲಿ ರಾಜಕೀಯ ವಿಡಂಬನಕಾರ ನಾಗಿದ್ದ (StandUp Comedian),ಯುದ್ಧಕ್ಕೂ ಮುಂಚಿನ ಸಮಯದಲ್ಲಿ ಎಡ- ಬಲಗಳಿಗೆ ಸೇರದೆ, ಆದರೆ ರಾಷ್ಟ್ರೀಯತಾವಾದಿಯಂತೆ ತನ್ನನ್ನು ತೋರಿಸಿಕೊಳ್ಳಲು ಇಷ್ಟಪಡದ, ನಿರರ್ಗಳ ರಷ್ಯನ್ ಮಾತನಾಡುವ ( ಉಕ್ರೇನಿಯನ್ ಭಾಷೆಯ ಮೇಲೆ ಹಿಡಿತವಿರದ ) ನವ ಉದಾರವಾದಿ ರಾಷ್ಟ್ರ ನಾಯಕನೊಬ್ಬ ಅತ್ಯುತ್ತಮ ಸಮರ ಸೇನಾನಿಯಾಗಿ ಹೊರ ಹೊಮ್ಮಿದ್ದು ಈ ಕಾಲದ ವಿಪರ್ಯಾಸ .

ಸದ್ಯದ ಯುದ್ಧ, ಯೂರೋಪ್ ಹಾಗೂ ಪಶ್ಚಿಮದ ದೇಶಗಳನ್ನಷ್ಟೆ ಅಲ್ಲ, ಜಗತ್ತನ್ನು ಅಸ್ಥಿರ ಮಾಡಿದೆ. ವಿಶ್ವದ ನಾಯಕತ್ವವನ್ನು ‘ತಮಗೆ ತಾವೇ ಕೊಟ್ಟುಕೊಂಡ’ ದೇಶಗಳಿಗೆ ಭೌಗೋಳಿಕವಾಗಿ ಹತ್ತಿರದಲ್ಲಿ ನಡೆಯುತ್ತಿರುವ ಕಾರಣ ಈ ಯುದ್ಧ, ಇತರೆ ದೇಶಗಳು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ದೊರಕಬಹುದಾಗಿದ್ದ  ಆರ್ಥಿಕ/ ಸಾಮಾಜಿಕ ಪರಿಹಾರಗಳನ್ನೂ ತಡೆ ಹಿಡಿದಿದೆ.

ಕೆಲವು ದಿನಗಳ ಹಿಂದೆ ರಷ್ಯಾದ ಅಧ್ಯಕ್ಷರು ಶಾಂತಿಗಾಗಿ ಸಿದ್ದ ಎಂದು ಹೇಳಿದ್ದಾರೆ. ಆದರೆ ಅವರ ಮಾತುಗಳ ಮೇಲೆ ಉಕ್ರೇನ್, ಪಶ್ಚಿಮದ ದೇಶಗಳ ನಾಯಕರು ಹಾಗೂ ಪ್ರಜೆಗಳು ನಂಬಿಕೆ ಕಳೆದುಕೊಂಡಿದ್ದಾರೆ. ದೂರ ದೇಶದ ಜನರಿಗೆ  -ಸಂಧಾನ , ಮಾತುಕತೆಯ ಮೂಲಕವೇ ಪರಿಹಾರ ಸಾಧ್ಯ, ಉಕ್ರೇನಿಯನ್ನರು ತಾಳ್ಮೆಯಿಂದ ಯೋಚನೆ ಮಾಡಬೇಕು- ಎನಿಸುವುದು ಸಹಜ.

ಆದರೆ ” ಪರಿಸ್ಥಿತಿಯೊಂದಿಗೆ ವಾಸಿಸುತ್ತಿರುವ ಜನರೇ ನಿರ್ಧಾರ ತೆಗೆದುಕೊಳ್ಳಲು ಶಕ್ತರೂ, ತಜ್ಞರೂ ಆಗಿರುತ್ತಾರೆ ” ಅಲ್ಲವೇ?

ಈ ಪಶ್ಚಿಮದ(ಅಥವಾ ಹಾಲಿವುಡ್)  ಕ್ರಿಸ್ ಮಸ್ ಸಂದರ್ಭಕ್ಕೆ ಬಿಡುಗಡೆಯಾಗುವ ವಿಶೇಷ ಚಲನಚಿತ್ರಗಳಲ್ಲಿ ಏನೋ ಪವಾಡದಂಥ ಘಟನೆ ಸಂಭವಿಸಿ ,ಖುಷಿಯ ಕ್ರಿಸ್ಮಸ್ ಆಚರಣೆಯಲ್ಲಿ ಸುಖಾಂತ್ಯ ಕಾಣುತ್ತವೆ . ಬಹುಶಃ ನಾವೆಲ್ಲರೂ ಅಂತಹ ಒಂದು ಪವಾಡವನ್ನು ನಿರೀಕ್ಷಿಸುತ್ತಾ ಸದ್ಯದ ಜಗತ್ತಿಗೆ ಕೇವಲ ಕ್ರಿಸ್ಮಸ್ ಕದನ ವಿರಾಮ ಸಾಲದು ,ಸಾಧ್ಯವಾದರೆ ಶಾಶ್ವತ ಶಾಂತಿಯನ್ನು  ಸಂತಾಕ್ಲಾಸ್ ಹೊತ್ತು ತರಲಿ ಎಂದು ಹಾರೈಸ ಬಹುದಷ್ಟೆ.

ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು..

ರಂಜಿತಾ ಜಿ. ಎಚ್

ಲೇಖಕರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page