Monday, June 17, 2024

ಸತ್ಯ | ನ್ಯಾಯ |ಧರ್ಮ

ಸಂದರ್ಶನ | ಅತ್ತೆ ಇಂದಿರಾ ಗಾಂಧಿ ಕುರಿತು ಸೊಸೆ ಸೋನಿಯಾ ಗಾಂಧಿ ಅವರ ಮನದಾಳದ ಮಾತುಗಳು

ಸೋನಿಯಾ ಗಾಂಧಿಯವರು ೧೯೬೮ ರಲ್ಲಿ ರಾಜೀವ ಗಾಂಧಿಯವರನ್ನು ಮದುವೆಯಾಗಿ ತನ್ನ ತವರು ಇಟೆಲಿಯಿಂದ ಭಾರತಕ್ಕೆ ಬಂದು ತನ್ನ ಅತ್ತೆ ಇಂದಿರಾ ಗಾಂಧಿಯವರೊಂದಿಗೆ ವಾಸಿಸಲು ಆರಂಭಿಸಿದರು. ಪ್ರಧಾನ ಮಂತ್ರಿಯಾಗಿಯೂ ಅಪ್ಪಟ ಅತ್ತೆಯಾಗಿಯೂ ಇಂದಿರಾರವರನ್ನು ಕಂಡ ಸೋನಿಯಾ ಅತ್ತೆಯ ಜತೆಗಿನ ತಮ್ಮ ಬದುಕಿನ ಪ್ರೀತಿಯ ಪಯಣದ ಬಗ್ಗೆ ಸಂದರ್ಶನವೊಂದರಲ್ಲಿ ಹೃದಯದಿಂದ ಮಾತಾಡಿದ್ದಾರೆ. ಈ ಸಂದರ್ಶನದ ಕೆಲ ತುಣುಕುಗಳನ್ನು ಇಂದಿರಾಗಾಂಧಿ ಅವರ ಪುಣ್ಯ ತಿಥಿಯ ನೆನಪಲ್ಲಿ ನಿಮಗಾಗಿ ಪೀಪಲ್ ಮೀಡಿಯಾ ನೀಡಿದೆ…

ಪ್ರಶ್ನೆ: ನೀವು ಮೊದಲು ಭಾರತಕ್ಕೆ ಬಂದದ್ದು ಯಾವಾಗ?
ಸೋನಿಯಾ: ಅದು 1965ರಲ್ಲಿ. ಅವರು ಪ್ರಧಾನಿಯಾಗುವ ಸ್ವಲ್ಪ ಸಮಯದ ಮೊದಲು.

ಪ್ರಶ್ನೆ: ನಿಮ್ಮ ಮೊದಲ ಮಾತುಕತೆ ಯಾವ ಭಾಷೆಯಲ್ಲಿ ನಡೆಯಿತು?
ಸೋನಿಯಾ: ಫ್ರೆಂಚ್ ಭಾಷೆಯಲ್ಲಿ

ಪ್ರಶ್ನೆ: ನೀವು ನೇರವಾಗಿ ಅತ್ತೆ ಮನೆಗೆ ಬಂದು ಅಲ್ಲಿ ಉಳಿದುಕೊಂಡು ಮತ್ತೆ ಮದುವೆಯಾದಿರಾ?
ಸೋನಿಯಾ: ಇಲ್ಲ. ಇಲ್ಲಿಗೆ ಬಂದ ಮೊದಲಿಗೆ ನಾನು ಶ್ರೀಮತಿ ಬಾಟ್ಸನ್ ಜೊತೆ ಇದ್ದೆ. ನನ್ನ ನಿಶ‍್ಚಿತಾರ್ಥದವರೆಗೂ. ನಂತರ ಸಫ್ದರ್ಜಂಗ್ ರಸ್ತೆಯ ಮನೆಯಲ್ಲಿ ನನ್ನ ಅತ್ತೆಯೊಂದಿಗೆ ವಾಸ್ತವ್ಯ ಆರಂಭಿಸಿದೆ.

ಪ್ರಶ್ನೆ: ನೀವು ಸಂಪೂರ್ಣವಾಗಿ ಭಿನ್ನವಾದ ಸಂಸ್ಕೃತಿಯ ನಾಡಿನಿಂದ ಬಂದವರು. ನಿಮ್ಮೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುವುದು ಅವರಿಗೆ ಸಾಧ್ಯವಾಯಿತೇ?
ಸೋನಿಯಾ: ಹೌದು. ಬಹಳ ಬೇಗ ಅವರಿಗದು ಸಾಧ್ಯವಾಯಿತು.

ಪ್ರಶ್ನೆ: ಪ್ರಧಾನಿಯಾಗಿದ್ದ ಅತ್ತೆಯವರ ಬಗ್ಗೆ ನಿಮಗೆ ಭಯವಿತ್ತೇ?
ಸೋನಿಯಾ: ಭಯವಿದ್ದಿದ್ದು ನಿಜವೇ. ಆ ರೀತಿ ಅಗಿಯೇ ಆಗುತ್ತದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ಕಡೆ ಇರುವುದೇ ಹಾಗೆ. ನಾನಾಗ ಚಿಕ್ಕವಳಾಗಿದ್ದೆ.

ಪ್ರಶ್ನೆ: ಅವರು ನಿಮ್ಮನ್ನು ಹೊರಗಿನವರ ರೀತಿ ನೋಡಲಿಲ್ಲವೇ? ನೀವು ಭಾರತದ ಸಂಸ್ಕೃತಿಗೆ ಹೊಂದಿಕೊಳ್ಳಬೇಕೆಂದು ಒತ್ತಾಯ ಹೇರಲಿಲ್ಲವೇ?
ಸೋನಿಯಾ: ಅವರು ಅತ್ಯಂತ ಬುದ್ಧಿವಂತ ಮಹಿಳೆಯಾಗಿದ್ದರು. ಯಾವಾಗಲಾದರೂ ಅದು ಮಾಡು, ಇದು ಮಾಡು ಎಂದು ಹೇಳುತ್ತಿದ್ದರಾದರೂ ಅದನ್ನು ಹೇರುತ್ತಿರಲಿಲ್ಲ. ಬದಲಿಗೆ ನಾನಾಗಿಯೇ ಅದನ್ನು ಮಾಡುವಂತೆ ಮಾಡುತ್ತಿದ್ದರು.

ಪ್ರಶ್ನೆ: ಅವರು ಅಡುಗೆ-ಊಟದ ವಿಷಯದಲ್ಲಿ ಬಹಳ ಒಳ್ಳೆಯ ಅಭಿರುಚಿ ಹೊಂದಿದ್ದರಂತೆ. ನಿಜವೇ?
ಸೋನಿಯಾ: ಖಂಡಿತಾ ಹೌದು..ನೀವು ಹೇಳಿದಂತೆ ಇಂದಿರಾ ಗಾಂಧಿಯವರು ರಾಜಕಾರಣದ ಹೊರಗಿನ ಜಗತ್ತಿನಲ್ಲಿ ಒಬ್ಬ ಒಳ್ಳೆಯ ಗೃಹಿಣಿ..

ಪ್ರಶ್ನೆ: ನಿಮಗೆ ಮನೆವಾರ್ತೆಯನ್ನೆಲ್ಲಾ ಜೊತೆಯಲ್ಲಿ ಕಲಿಸಿದರಾ?
ಸೋನಿಯಾ: ಹೌದು.. ಹೌದು… ಹಾಗೇ ಮಾಡಿದರು.

ಪ್ರಶ್ನೆ: ರಾಜೀವ್ ತನ್ನ ರಾಜಕೀಯ ಉತ್ತರಾಧಿಕಾರಿ ಆಗಬೇಕೆಂದು ಇಂದಿರಾಗಾಂಧಿಯವರು ಬಯಸಿದಾಗ ನೀವು ಅದರ ವಿರುದ್ಧವಾಗಿದ್ದೀರಿ ಎಂದು ಬಹಿರಂಗವಾಗಿಯೇ ಹೇಳಿದ್ರಿ. ಇದು ಅತ್ತೆ ಸೊಸೆ ನಡುವಿನ ಸಂಬಂಧವನ್ನು ಬದಲಿಸಿತ್ತಾ?
ಸೋನಿಯಾ: ಇಲ್ಲ. ಹಾಗಾಗಲಿಲ್ಲ. ನಾನಾಗಲೇ ನಿಮಗೆ ಹೇಳಿದಂತೆ ಅವರು ತುಂಬಾ ಬುದ್ಧಿವಂತ ಮಹಿಳೆಯಾಗಿದ್ದರು ಅನ್ನುವುದನ್ನು ಮರೆಯಬೇಡಿ. ಅವರು ಈ ವಿಷಯವನ್ನು ನಮ್ಮಿಬ್ಬರಿಗೇ ಬಿಟ್ಟು ನೀವೇ ತೀರ್ಮಾನಿಸಿಕೊಳ್ಳಿ ಎಂದು ಬಿಟ್ಟುಬಿಟ್ಟರು. ಅವರು ನನಗೆ ಈ ಬಗ್ಗೆ ಎಂದೂ ಏನೂ ಹೇಳಲಿಲ್ಲ.

ಪ್ರಶ್ನೆ: ನಿಮ್ಮ ಖಾಸಗಿ ತನಕ್ಕೆ ಸಾಕಷ್ಟು ಅವಕಾಶವಿತ್ತು ಹಾಗಾದರೆ?
ಸೋನಿಯಾ: ಹೌದು. ನಿಜವಾಗಿಯೂ. ಪ್ರಧಾನ ಮಂತ್ರಿಯೊಬ್ಬರ ಸೊಸೆ ಮತ್ತು ಮಗ ಆಗಿರುವುದೆಂದರೆ ಅಷ್ಟು ಸುಲಭವಲ್ಲ ಅಲ್ಲವೇ? ನಿಮ್ಮ ಖಾಸಗಿ ಹಾಗೂ ಸಾರ್ವಜನಿಕ ಬದುಕು ಸಂಪೂರ್ಣವಾಗಿ ಅಲ್ಲಿ ಬೆರೆತು ಹೋಗಿರುತ್ತದೆ. ಆ ಸಂದರ್ಭದಲ್ಲಿ ಅದೇನೂ ಕಷ್ಟವಿರಲಿಲ್ಲ. ಆಗ ನಮ್ಮ ಕುಟುಂಬದಲ್ಲಿ ಸಹ ನಮ್ಮಿಬ್ಬರ ಮೇಲೆ ಅಷ್ಟೊಂದು ಫೋಕಸ್ ಇರಲಿಲ್ಲ. ನಮಗೆ ನಮ್ಮಷ್ಟಕ್ಕೆ ಇರಲು ಸಾಕಷ್ಟು ಅವಕಾಶವಿತ್ತು.

ಪ್ರಶ್ನೆ: ಹೊರಗೆ ಹೋದರೆ ಎಲ್ಲಿಗೆ, ಯಾರ ಜೊತೆ ಎಂದು ಯಾರೂ ಕೇಳುತ್ತಿರಲಿಲ್ಲವೇ?
ಸೋನಿಯಾ: ಇಲ್ಲ.. ಇಲ್ಲ. ಯಾವತ್ತೂ ಇಲ್ಲ. ನಮ್ಮ ಸ್ನೇಹಿತರಿದ್ದರೆ ಅವರಿಗೆ ಪರಿಚಯ ಮಾಡಿಕೊಡುತ್ತಿದ್ದೆವು. ಅವರಲ್ಲಿ ಕೆಲವರ ಬಗ್ಗೆ ಅವರಿಗೆ ತಿಳಿದೇ ಇರುತ್ತಿತ್ತು.

ಪ್ರಶ್ನೆ: ನೀವು ಶ್ರೀಮತಿ ಗಾಂಧಿಯವರಿಂದ ಸ್ಪೂರ್ತಿ ಪಡೆದುಕೊಂಡಿದ್ದೀರಾ?
ಸೋನಿಯಾ: ಅವರಿಂದ ನಾನು ಸಬ್ ಕಾನ್ಷಸ್ ಆಗಿ ಪಡೆದುಕೊಂಡಿರಬಹುದು.

ಪ್ರಶ್ನೆ: ಪ್ರಿಯಾಂಕಾ ಅವರು ಇಂದಿರಾಗಾಂಧಿಯರನ್ನು ಹೆಚ್ಚಾಗಿ ಹೋಲುತ್ತಾರೆ ಎಂಬ ಅಭಿಪ್ರಾಯವಿದೆ. ನಿಮ್ಮ ಪ್ರಕಾರ ಇಂದು ನೆಹರೂ ಕುಟುಂಬದಲ್ಲಿ ಯಾರು ಹೆಚ್ಚು ಇಂದಿರಾ ಗಾಂಧಿಯವರನ್ನು ಹೋಲುತ್ತಾರೆ?
ಸೋನಿಯಾ: ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ಇಂದಿರಾ ಗಾಂಧಿಯವರಿಂದ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿದ್ದೇವೆ. ನಾನು ನನ್ನದೇ ರೀತಿ, ಪ್ರಿಯಾಂಕ, ರಾಹುಲ್ ಅವರದೇ ರೀತಿಯಲ್ಲಿ.

ಪ್ರಶ್ನೆ: ನೀವು ಶ್ರೀಮತಿ ಗಾಂಧಿಯವರನ್ನು ಮೊದಲ ಬಾರಿಗೆ ಲಂಡನ್‌ನಲ್ಲಿ ಸಂತೋಷದ ಗಳಿಗೆಗಳಲ್ಲಿ ನೋಡಿದ್ದಿರಿ. ಆದರೆ ಕೊನೆಯ ಬಾರಿಗೆ ಅವರನ್ನು ನೋಡುವಾಗ ದುಃಖದ ಸಂದರ್ಭ. ೧೯೮೪ರ ಅಕ್ಟೋಬರ್ ೩೧ರ ಆ ದಿನ ಅವರು ನಿಮ್ಮ ತೋಳುಗಳಲ್ಲಿಯೇ ಕೊನೆಯುಸಿರೆಳೆದರು. ಈ ಬಗ್ಗೆ ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ.
ಸೋನಿಯಾ: ಹೌದು. ಅವು ಅತ್ಯಂತ ಭೀಕರ ದಿನಗಳು. ಅವರ ಕೊಠಡಿಯ ಪಕ್ಕದಲ್ಲೇ ಇದ್ದ ನನ್ನ ಕೊಠಡಿಯಲ್ಲಿ ಇದ್ದೆ. ಅವು ದೀಪಾವಳಿಯ ಆರಂಭದ ದಿನಗಳು. ಹೊರಗೆ ಏನೋ ಸದ್ದು ಕೇಳಿದಾಗ ಮೊದಲು ದೀಪಾವಳಿಯ ಪಟಾಕಿ ಸದ್ದೆಂದುಕೊಂಡೆ. ಆದರೆ ಆ ಸದ್ದು ಸ್ವಲ್ಪ ವಿಚಿತ್ರವೆನಿಸಿದ್ದರಿಂದ ನನ್ನ
ಸಹಾಯಕಿಯನ್ನು ಕಳಿಸಿದೆ. ಆಕೆ ಜೋರಾಗಿ ಅಳುತ್ತಾ ವಾಪಾಸು ಬಂದಳು. ಆದರೆ ಇಂತಹದು ಸಂಭವಿಸಬಹುದೆಂದು ನಮಗೆ ನಿರೀಕ್ಷೆಯಿತ್ತು. ನಮ್ಮ ಅತ್ತೆಯವರೇ ಈ ಬಗ್ಗೆ ಮಾತಾಡಿದ್ದರು. ಅದರಲ್ಲೂ ನಿರ್ದಿಷ್ಟವಾಗಿ ರಾಹುಲ್ ಜೊತೆ ಇದನ್ನು ಮಾತಾಡಿದ್ದರು. ನಾನು ಕೂಡಲೇ ದೌಡಾಯಿಸಿದೆ. ಅಲ್ಲಿ ಹೋಗಿ ನೋಡಿದರೆ ಅತ್ತೆಯವರು ಬುಲೆಟ್ ಗಾಯಗಳಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗ ಅಂಬ್ಯುಲೆನ್ಸ್ ಇರಲಿಲ್ಲ. ಅಂಬಾಸೆಡರ್ ಕಾರಿನ ಹಿಂದಿನ ಸೀಟಿನಲ್ಲಿ ನನ್ನ ತೋಳಿನಲ್ಲಿ ಅವರನ್ನು ಬಿಗಿಹಿಡಿದು ಕೂರಿಸಿಕೊಂಡಿದ್ದೆ. ಅಲ್ಲಿ ಬಹಳ ಟ್ರಾಫಿಕ್ ಇತ್ತು. ನಿಧಾನವಾಗಿ ಆಸ್ಪತ್ರೆ ತಲುಪಿದ್ದೆವು.

ಪ್ರಶ್ನೆ: ಆ ಆಘಾತದಿಂದ ಹೊರಬರಲು ನಿಮಗೆ ಬಹಳ ಸಮಯ ಹಿಡಿಯಿತಲ್ಲವೇ?
ಸೋನಿಯಾ: ಹೌದು. ರಾಜೀವ್, ರಾಹುಲ್, ಪ್ರಿಯಾಂಕಾ, ನಮ್ಮೆಲ್ಲರಿಗೂ.

ಪ್ರಶ್ನೆ: ದೇಶಕ್ಕೆ ಇಂದಿರಾ ಗಾಂಧಿಯವರ ಕೊಡುಗೆಯನ್ನು ನೀವು ಹೇಗೆ ಗುರುತಿಸುತ್ತೀರಿ?
ಸೋನಿಯಾ: ದೇಶಕ್ಕೆ ಅವರ ಮಹಾನ್ ಕೊಡುಗೆ ಏನೆಂದರೆ, ಭಾರತದ ಜನತೆಯ ಮೇಲೆ ಅವರಿಗಿದ್ದ ನಿಷ್ಠೆ ಹಾಗೂ ಭಕ್ತಿ. ಮಿಕ್ಕೆಲ್ಲವೂ ಇದರಿಂದಲೇ ಬಂದಂತವು.

ಪ್ರಶ್ನೆ: ದೇಶದ ಜನತೆಯೊಂದಿಗೆ ಅವರಿಗಿದ್ದ ವಿಶೇಷ ಸಂಬಂಧವೇನು?
ಸೋನಿಯಾ: ದೇಶದ ಜನತೆಯೊಂದಿಗೆ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಜನರ ಕಷ್ಟಗಳ ಬಗ್ಗೆ ಅವರು ತೀವ್ರ ಅನುಕಂಪ ಹೊಂದಿದ್ದರು. ಮತ್ತು ನೊಂದವರ ಬಗ್ಗೆ ಅವರಿಗೆ ಅತೀವ ಸಹಾನುಭೂತಿಯಿತ್ತು.

ಪ್ರಶ್ನೆ: ೧೯೬೬ರಲ್ಲಿ ಭಾರತದ ಪ್ರಧಾನಿಯಾಗಿದ್ದವರು ಇಂದಿರಾ. ತಮ್ಮ ಸುತ್ತಲೂ ಪುರುಷ ರಾಜಕಾರಣಿಗಳನ್ನಿಟ್ಟುಕೊಂಡು ಗಡಸುತನದಲ್ಲಿ ರಾಜಕಾರಣ ನಡೆಸುತ್ತಿದ್ದರು. ಇದು ಅವರ ನಿರ್ಣಯಗಳ ಮೇಲೆ ಪರಿಣಾಮ ಬೀರಿತ್ತೇ?
ಸೋನಿಯಾ: ನನಗೆ ಹಾಗೇನೂ ಅನ್ನಿಸುವುದಿಲ್ಲ. ನನಗೆ ನೆನಪಿರುವಂತೆ ಅವರೊಮ್ಮೆ ಒಂದು ಕಡೆ ಹೇಳಿದ್ದರು – ತಮಗೆ ತಾವು ಎಲ್ಲರೊಂದಿಗಿದ್ದಾಗ ಮಹಿಳೆ ಎಂದು ಅನ್ನಿಸುವುದೇ ಇಲ್ಲ ಎಂದು. ಅವರು ಪುರುಷರೊಂದಿಗೆ ಸಮಾನವಾಗಿಯೇ ಇರುತ್ತಿದ್ದರು.

ಪ್ರಶ್ನೆ: ಅವರ ಮಹಾನ್ ವಿಜಯ ಎಂದರೆ ೧೯೭೧ರ ವಿಜಯ. ಅದು ಅವರನ್ನು ಯಾವುದಾದರೂ ರೀತಿಯಲ್ಲಿ ಬದಲಾಯಿಸಿತೇ?
ಸೋನಿಯಾ: ಖಂಡಿತಾ ಇಲ್ಲ. ನಿಜ ಹೇಳಬೇಕೆಂದರೆ ಪೂರ್ವ ಬಾಂಗ್ಲಾದೇಶದ ಜನರ ಬಗ್ಗೆ ಅವರು ತೀವ್ರ ಅನುಕಂಪ ವ್ಯಕ್ತಪಡಿಸುತ್ತಿದ್ದರು. ಪೂರ್ವ ಬಾಂಗ್ಲಾದೇಶದ ಜನರ ಮೇಲೆ ನಡೆಸಿದ್ದ ಭೀಕರ ದೌರ್ಜನ್ಯಗಳ ಬಗ್ಗೆ ಕೇಳುತ್ತಾ, ತಿಳಿಯುತ್ತಾ ಇದ್ದಾಗ ಅವರು ನಿಜಕ್ಕೂ ಪ್ರಾಮಾಣಿಕವಾಗಿ ತಮಗಾಗುವ ಸಂಕಟವನ್ನು ವ್ಯಕ್ತಪಡಿಸುತ್ತಿದ್ದರು. ಅಲ್ಲಿ ಏನೇನೆಲ್ಲಾ ನಡೆಯುತ್ತಿದೆ ಎಂದು ನಮಗೆ ಹೇಳುತ್ತಿದ್ದರು.
ಪ್ರಶ್ನೆ: ೧೯೭೧ರ ನಂತರ ಜನರು ಅವರನ್ನು ದುರ್ಗಾಮಾತೆ ಎಂದು ಕರೆಯತೊಡಗಿದ್ದರು. ಅವರಿಗೂ ಅದೇ ಭಾವನೆ ಇತ್ತೇ?
ಸೋನಿಯಾ: ಖಂಡಿತಾ ಇರಲಿಲ್ಲ.

ಪ್ರಶ್ನೆ: ಇಂದಿರಾ ಬಿಟ್ಟುಹೋದ ತ್ಯಾಗ ಮನೋಭಾವನೆಯು ಅವರಿಗೆ ತಮ್ಮ ತಂದೆಯಿಂದ ಮತ್ತು ತಾವೂ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟದಿಂದ ಬಂದಿದ್ದ ಗುಣವೇ?
ಸೋನಿಯಾ: ಆ ಸಂದರ್ಭದಲ್ಲಿಯೇ ಅವರು ಬೆಳೆದು ಬಂದದ್ದು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿರಿಯ ವ್ಯಕ್ತಿಗಳ ಸಖ್ಯದಲ್ಲೇ ಅವರು ಬೆಳೆದಿದ್ದರಲ್ಲದೇ ಆ ಹಿರಿಯರಿಗೆ ಅಗತ್ಯವಿದ್ದ ಎಲ್ಲ ಸಹಕಾರವನ್ನೂ ನೀಡುತ್ತಿದ್ದರು. ಹೀಗಾಗಿ ದೇಶಭಕ್ತಿ ಎಂಬುದು ಅವರಲ್ಲಿ ಬಲವಾಗಿಯೇ ಇದ್ದ ಗುಣವಾಗಿತ್ತು.

ಪ್ರಶ್ನೆ: ಅವರಿಗೆ ಉತ್ತಮ ಹಾಸ್ಯಪ್ರಜ್ಞೆಯೂ ಇತ್ತಂತೆ…
ಸೋನಿಯಾ: ಖಂಡಿತವಾಗಿಯೂ ಅವರಿಗೆ ಅದ್ಭುತ ಹಾಸ್ಯಪ್ರಜ್ಞೆ ಇತ್ತು. ಅವರೊಬ್ಬ ಅದ್ಭುತ ಪತ್ರ ಬರಹಗಾರರೂ ಆಗಿದ್ದರು. ತಮ್ಮ ಮಿತ್ರ ಬಳಗದವರಿಗೆ, ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ ನನಗೂ ಬರೆಯುತ್ತಿದ್ದರು. ಇತರ ಕುಟುಂಬ ಸದಸ್ಯರಿಗೂ ಬರೆಯುತ್ತಿದ್ದರು. ಚಿಕ್ಕ ಚಿಕ್ಕ ನೋಟ್ಸ್ ಬರೆಯುತ್ತಿದ್ದರು. ಬಹಳ ಜನರಿಗೆ ತಿಳಿದಿರದ ಅವರ ವಿಶಿಷ್ಟ ಗುಣವೆಂದರೆ ಅವರು ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಆಸಕ್ತಿ ತೋರುತ್ತಿದ್ದವರಾಗಿದ್ದರು. ಅವರಿಗೆ ಭಾರತೀಯ, ಪಾಶ್ಚಿಮಾತ್ಯ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯಿತ್ತು, ಶಾಸ್ತ್ರೀಯ ಕಲೆಯಲ್ಲಿ, ಪರಂಪರೆಯಲ್ಲಿ, ಜಾನಪದ ಕಲೆ ಹಾಗೂ ಜಾನಪದ ಸಂಗೀತದಲ್ಲಿ ಆಸಕ್ತಿಯಿತ್ತು. ಪರಿಸರ – ಹೂವು, ಮರ, ಪರ್ವತ ಹೀಗೆ ಎಲ್ಲದರಲ್ಲೂ ಅವರಿಗೆ ವಿಶೇಷ ಆಸಕ್ತಿಯಿತ್ತು.

ಪ್ರಶ್ನೆ: ಅವರ ಛಾಯಾಚಿತ್ರಗಳನ್ನು ನೋಡುತ್ತಾ ನಿಮ್ಮ ಮನಸ್ಸು ಅವರೊಂದಿಗಿದ್ದ ಕ್ಷಣಗಳಿಗೆ ಜಾರಿತ್ತೇ?
ಸೋನಿಯಾ: ಖಂಡಿತವಾಗಿಯೂ. ಈಗಲೂ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ.


ಪ್ರಶ್ನೆ: ಇಂದು ಇಂದಿರಾಗಾಂಧಿಯವರ ಪುಣ್ಯತಿಥಿ ಆಚರಿಸುತ್ತಿರುವ ಸಂದರ್ಭದಲ್ಲಿ ಶ್ರೀಮತಿ ಗಾಂಧಿಯವರನ್ನು ನೋಡಿಯೇ ಇರದ ಹೊಸ ಪೀಳಿಗೆಯೊಂದು ಕಣ್ಣೆದುರಿಗಿದೆ. ಈ ಯುವ ಪೀಳಿಗೆ ಇಂದಿರಾಗಾಂಧಿಯವರನ್ನು ಹೇಗೆ ಸ್ಮರಿಸಬೇಕೆಂದು ಆಶಿಸುತ್ತೀರಿ?

ಸೋನಿಯಾ: ತನ್ನ ಜನರಿಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಮುಡಿಪಾಗಿಟ್ಟುಕೊಂಡು ಕೊನೆಗೆ ತನ್ನ ದೇಶದ ಜನರಿಗಾಗಿ ತನ್ನ ಪ್ರಾಣವನ್ನೂ ಮುಡಿಪಾಗಿಟ್ಟ ಒಬ್ಬ ಮಹಿಳೆಯಾಗಿ.

Related Articles

ಇತ್ತೀಚಿನ ಸುದ್ದಿಗಳು