Wednesday, September 17, 2025

ಸತ್ಯ | ನ್ಯಾಯ |ಧರ್ಮ

ಸಿಐಟಿಯು 16ನೇ ಕರ್ನಾಟಕ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಹಾಸನ : ದೇಶಾದ್ಯಂತ ಕಾರ್ಮಿಕರ ಹಕ್ಕುಗಳಿಗಾಗಿ, ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂಘಟನೆ ಸಿಐಟಿಯುವಿನ 16 ನೇ ಕರ್ನಾಟಕ ರಾಜ್ಯ ಸಮ್ಮೇಳನ 2025 ನವೆಂಬರ್ 13-15 ವರೆಗೆ ಮೂರು ದಿನಗಳ ಕಾಲ ಹಾಸನದಲ್ಲಿ ನಡೆಯಲಿದ್ದು, ಈ ಸಂಬಂಧ ಸಮ್ಮೇಳನದ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷರು ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಧರ್ಮೇಶ್‌, ಇಂದು ಕಾರ್ಮಿಕ ವರ್ಗದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಅದರಲ್ಲೂ ಅಸಂಘಟಿತ ಕಾರ್ಮಿಕರು ಸರಿಯಾದ ಕನಿಷ್ಠ ಕೂಲಿಯಿಲ್ಲದೆ ಬದುಕನ್ನ ನಡೆಸಲಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ನೀತಿಗಳ ಕುರಿತು ಚರ್ಚಿಸಿ ಮುಂದಿನ ಹೋರಾಟಗಳ ದಿಕ್ಕನ್ನು ರೂಪಿಸಲು ಹಾಸನದಲ್ಲಿ ಮೂರು ದಿನಗಳ ಕಾಲ ಕಾರ್ಮಿಕರ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಎಲ್ಲಾ ಕಾರ್ಮಿಕ ವಿಭಾಗಗಳಿಂದ ಆಯ್ದ 500 ಕ್ಕೂ ಹೆಚ್ಚು ಪ್ರತಿನಿಧಿಗಳಾಗಿ ಕಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ರಾಜ್ಯದ ಕಾರ್ಮಿಕ ವರ್ಗಕ್ಕೆ ಬಹಳ ಮಹತ್ತರವಾದದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಚ್.ಎನ್. ಪರಮಶಿವಯ್ಯ ಮಾತನಾಡುತ್ತ, ಹಾಸನ ಜಿಲ್ಲೆಯಲ್ಲಿ ಸಿಐಟಿಯು ಎಲ್ಲಾ ವಿಭಾಗದ ಜನರ ಕಷ್ಟಗಳಗೂ ಸ್ಪಂದಿಸುತ್ತಿದೆ, ಮಾತ್ರವಲ್ಲ ಹಲವು ನಿರ್ಣಾಯಕ ಹೋರಾಟಗಳನ್ನು ರೂಪಿಸಿ ಜಯಗಳಿಸುವುದರ ಮೂಲಕ ಜನತೆಗೆ ನ್ಯಾಯ ಒದಗಿಸಿದೆ. ಇಂತಹ ಸಂಘಟನೆಯ ಮಹತ್ತರವಾದ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಹಾಸನ ಜಿಲ್ಲೆಯ ಎಲ್ಲಾ ನಾಗರೀಕರ ಕರ್ತವ್ಯ, ಜಿಲ್ಲೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ಕಳುಹಿಸಲು ಬೇಕಾದ ಸಕಲ ಸಿದ್ದತೆಗೆ ಜಿಲ್ಲೆಯ ಜನತೆ ಉದಾರವಾಗಿ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಜಿಲ್ಲೆಯಲ್ಲಿರುವ ದೊಡ್ಡ ಸಂಖ್ಯೆಯ ರೈತ ಕಾರ್ಮಿಕರು ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕಿದೆ. ಆ ಮೂಲಕ ರಾಜ್ಯದ ಕಾರ್ಮಿಕ ಚಳುವಳಿಯ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶಮೂರ್ತಿ, ಸ್ವಾಗತ ಸಮಿತಿ ಖಜಾಂಚಿ ಜಿ.ಪಿ.ಸತ್ಯನಾರಾಯಣ, ಹಿರಿಯ ದಲಿತ ನಾಯಕರಾದ ಹುಲಿಕಲ್ ರಾಜಶೇಖರ್, ಸಂವಿಧಾನ ಓದು ಬಳಗದ ರಾಜ್ಯ ನಾಯಕರಾದ ರಾಜು ಗೊರೂರು, ಹಿರಿಯ ಮಾನವ ಹಕ್ಕುಗಳ ಹೋರಾಟಗಾರರಾದ ಇರ್ಷಾದ್ ಅಹಮದ್ ದೇಸಾಯಿ, ಮಾದಿಗ ದಂಡೋರ (ಎಂಆರ್‌ಎಚ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, ಕ.ರಾ.ದ.ಸಂ.ಸ.(ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕರಾದ ಈರೇಶ್ ಹಿರೇಹಳ್ಳಿ, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಎಲ್‌ಐಸಿ ನಿವೃತ್ತ ನೌಕರರ ಸಂಘದ ಮಂಜುನಾಥ್, ಬಿಜಿವಿಎಸ್-ಸಮತಾ ನಾಯಕಿ ಮಮತಾ ಶಿವು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್‌ಕುಮಾರ್, ಡಿಎಚ್‌ಎಸ್ ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ. ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ವಾಸುದೇವ ಕಲ್ಕೆರೆ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇನ್ನೂ ಮುಂತಾದವರು ಸಭೆಯಲ್ಲಿ ಮಾತನಾಡಿ ಸಮ್ಮೇಳನದ ಯಶಸ್ಸಿಗೆ ಅಗತ್ಯವಾದ ಮಾರ್ಗದರ್ಶನ ನೀಡಿದರು. ಸಮ್ಮೇಳನದ ಕೆಲಸಗಳಿಗಾಗಿ ಹಣಕಾಸು, ವಸತಿ, ಆಹಾರ, ಪ್ರಚಾರ, ಸಾಂಸ್ಕೃತಿಕ, ಆರೋಗ್ಯ ಸೇರಿದಂತೆ ಹಲವು ಉಪಸಮಿತಿಗಳನ್ನು ರಚಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page