Home ದೆಹಲಿ ಜಂತರ್ ಮಂತರ್ ಪ್ರತಿಭಟನೆ: ವಿದ್ಯಾರ್ಥಿಗೆ ನೋಟಿಸ್ ಜಾರಿ ಮಾಡಿದ ನೋಯ್ಡಾ ಮ್ಯಾಜಿಸ್ಟ್ರೇಟ್‌ಗೆ ಸಿಜೆಐ ಸೂರ್ಯಕಾಂತ್ ತೀವ್ರ...

ಜಂತರ್ ಮಂತರ್ ಪ್ರತಿಭಟನೆ: ವಿದ್ಯಾರ್ಥಿಗೆ ನೋಟಿಸ್ ಜಾರಿ ಮಾಡಿದ ನೋಯ್ಡಾ ಮ್ಯಾಜಿಸ್ಟ್ರೇಟ್‌ಗೆ ಸಿಜೆಐ ಸೂರ್ಯಕಾಂತ್ ತೀವ್ರ ತರಾಟೆ

0

ಹೊಸದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬನಿಗೆ ನೋಟಿಸ್ ಜಾರಿ ಮಾಡಿದ್ದಕ್ಕಾಗಿ ನೋಯ್ಡಾದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ (Executive Magistrate) ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ, “ವಿದ್ಯಾರ್ಥಿಗೆ ನೋಟಿಸ್ ಜಾರಿ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ? ಯಾವುದೇ ವಿದ್ಯಾರ್ಥಿಯ ವಿರುದ್ಧ ಯಾವುದೇ ಬಲವಂತದ ಅಥವಾ ದಂಡನಾತ್ಮಕ ಕ್ರಮ (coercive action) ಕೈಗೊಳ್ಳಬಾರದು ಎಂದು ನಾವು ಸ್ಪಷ್ಟವಾಗಿ ಆದೇಶಿಸಿದ್ದೆವು,” ಎಂದು ಗುಡುಗಿದರು.

ಯಾವುದೇ ಮ್ಯಾಜಿಸ್ಟ್ರೇಟ್ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಿಜೆಐ ಪೀಠವು, ಈ ವಿಷಯದಲ್ಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ನಿಂದ ನ್ಯಾಯಾಲಯವು ವಿವರಣೆಯನ್ನು ಕೇಳಲಿದೆ ಎಂದು ತಿಳಿಸಿದೆ.

ಸಿಜೆಐ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿದ ವಕೀಲರು, ಸೆಪ್ಟೆಂಬರ್ 1 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಸ್ಪಷ್ಟ ಆದೇಶದ ಹೊರತಾಗಿಯೂ, ನೋಯ್ಡಾ ಪೊಲೀಸರ ವರದಿಯನ್ನು ಆಧರಿಸಿ ಗ್ರೇಟರ್ ನೋಯ್ಡಾದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ದ್ವಿತೀಯ ವರ್ಷದ ವಿದ್ಯಾರ್ಥಿಗೆ ನೋಟಿಸ್ ನೀಡಿದ್ದಾರೆ ಎಂದು ಗಮನಕ್ಕೆ ತಂದರು. ಈ ನೋಟಿಸ್ ಆಧರಿಸಿ ಕ್ರಮ ಜರುಗಿಸಲು ಸಿದ್ಧತೆ ನಡೆದಿತ್ತು, ಆದರೆ ನಂತರ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ವಕೀಲರು ತಿಳಿಸಿದರು.

ಅಧಿಕಾರಿಗಳ ಈ ಕ್ರಮವನ್ನು ವಿದ್ಯಾರ್ಥಿಗಳ ಮೇಲಿನ “ಪ್ರಯೋಗ” ಎಂದು ಕರೆದ ವಕೀಲರು, ನೋಯ್ಡಾ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಅನಗತ್ಯ ಭಯದ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿ ನ್ಯಾಯಾಂಗ ನಿಂದನೆಯ ಪ್ರಕರಣವಾಗಿದೆ ಎಂದೂ ಅವರು ಪೀಠದ ಗಮನಕ್ಕೆ ತಂದರು.

You cannot copy content of this page

Exit mobile version