Home ದೇಶ ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರುವ ಪ್ರಯತ್ನಗಳಿಗೆ ಮುಖ್ಯ ನ್ಯಾಯಮೂರ್ತಿ...

ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರುವ ಪ್ರಯತ್ನಗಳಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಖಡಕ್ ಎಚ್ಚರಿಕೆ!

0

ದೆಹಲಿ: “ಯಾರೂ ನಮ್ಮನ್ನು ಬೆದರಿಸಲು ಅಥವಾ ಮಣಿಸಲು ಸಾಧ್ಯವಿಲ್ಲ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಗುರುವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 12 ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ (INDIA) ಒಕ್ಕೂಟದ ನಾಯಕರು ಸುಪ್ರೀಂ ಕೋರ್ಟ್ ಆವರಣದತ್ತ ನಡೆಸಿದ ವಿವಾದಾತ್ಮಕ ಮೆರವಣಿಗೆಯ ಕುರಿತಾದ ಅರ್ಜಿಗಳ ವಿಚಾರಣೆ ವೇಳೆ ಅವರು ಈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಶ್ನಿಸಿ ವಿಪಕ್ಷಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನ್ಯಾಯಾಲಯ ಪ್ರತ್ಯೇಕ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ವೇಳೆ ವಿರೋಧ ಪಕ್ಷದ 13 ಅರ್ಜಿದಾರರ ಪೈಕಿ ಓರ್ವರ ವರ್ತನೆಯ ಬಗ್ಗೆಯೂ ಪ್ರಶ್ನೆ ಎತ್ತಿದ್ದು, ಮುಂದಿನ ವಿಚಾರಣೆಯ ದಿನದಂದು ಈ ಕುರಿತು ವಿವರಣೆ ಕೇಳುವುದಾಗಿ ಸುಳಿವು ನೀಡಿದೆ. ಆದರೆ ಆ ಅರ್ಜಿದಾರರು ಯಾರು ಎಂಬುದನ್ನು ನ್ಯಾಯಪೀಠ ಬಹಿರಂಗಪಡಿಸಿಲ್ಲ.

ನ್ಯಾಯಾಲಯದ ಸಂಕೀರ್ಣಗಳ ಸುತ್ತಮುತ್ತ ರಾಜಕೀಯ ಪ್ರತಿಭಟನೆಗಳಿಗೆ ನಿರ್ಬಂಧ ಹೇರಬೇಕು ಹಾಗೂ ಅಕ್ಟೋಬರ್ 12ರ ಮೆರವಣಿಗೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಈ ಚಾಟಿ ಬೀಸಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, ಸುಪ್ರೀಂ ಕೋರ್ಟ್ ಬಳಿ ರಾಜಕೀಯ ಮೆರವಣಿಗೆ ನಡೆಸುವುದು ಸ್ವೀಕಾರಾರ್ಹವಲ್ಲ ಮತ್ತು ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ವಾದಿಸಿದರು. ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು 200 ವಕೀಲರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಅವರು ಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, “ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ” ಎಂದರು. ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಪ್ರಯತ್ನಗಳನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಭಾಟಿಯಾ ಒತ್ತಾಯಿಸಿದಾಗ, ಅಂತಹ ಪ್ರಯತ್ನಗಳು ಗಮನ ಕೊಡುವಷ್ಟೂ ಶಕ್ತವಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ತಳ್ಳಿಹಾಕಿದರು. “ನಾವೇನೂ ದಂತದ ಗೋಪುರಗಳಲ್ಲಿ ಕುಳಿತಿಲ್ಲ. ಅವರು ನ್ಯಾಯಾಲಯದ ಹೊರಗೆ ಏನು ಹೇಳಿಕೆ ನೀಡುತ್ತಾರೆ ಮತ್ತು ನ್ಯಾಯಾಲಯದ ಒಳಗೆ ಏನು ಹೇಳುತ್ತಾರೆ ಎಂಬುದು ನಮಗೆ ತಿಳಿದಿದೆ. ನಮಗೆ ಎಲ್ಲವೂ ಗೊತ್ತಿದೆ,” ಎಂದು ಸಿಜೆಐ ಸ್ಪಷ್ಟಪಡಿಸಿದರು. ಇದೇ ವೇಳೆ ಮೆರವಣಿಗೆಯಲ್ಲಿ ಗರ್ಭಿಣಿ ಪತ್ರಕರ್ತೆಯೊಬ್ಬರನ್ನು ತಳ್ಳಲಾಗಿದೆ ಎಂಬ ಭಾಟಿಯಾ ಅವರ ಆರೋಪದ ಹಿನ್ನೆಲೆಯಲ್ಲಿ, ಪ್ರತಿಭಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಿಡುವಂತೆ ತನಿಖಾ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿತು.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳು ಹಾಗೂ ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ ಮಾಡಿರುವುದನ್ನು ಪ್ರಶ್ನಿಸಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಸುಪ್ರಿಯಾ ಸುಳೆ, ಸಂಜಯ್ ರಾವತ್ ಸೇರಿದಂತೆ ವಿಪಕ್ಷ ನಾಯಕರು ಸಲ್ಲಿಸಿದ್ದ ಅರ್ಜಿಗೆ (W.P.(C) No. 1351/2026) ಸಂಬಂಧಿಸಿದಂತೆ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸಲ್ಲಿಸಿದ್ದ ಪ್ರತ್ಯೇಕ ಎಸ್‌ಐಆರ್ ಸಂಬಂಧಿತ ಅರ್ಜಿಗಳಿಗೂ ನ್ಯಾಯಾಲಯ ನೋಟಿಸ್ ನೀಡಿದೆ.

ಸಂವಿಧಾನದ 324ನೇ ವಿಧಿ, 2023ರ ಚುನಾವಣಾ ಆಯುಕ್ತರ ಕಾಯ್ದೆಯ ಸೆಕ್ಷನ್ 18 ಹಾಗೂ ಟಿ.ಎನ್. ಶೇಷನ್ ತೀರ್ಪಿನ ತತ್ವಗಳಿಗೆ ಅನುಗುಣವಾಗಿ ಚುನಾವಣಾ ಆಯೋಗ ನಿರ್ಧಾರಗಳನ್ನು ತೆಗೆದುಕೊಂಡಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ವಿಪಕ್ಷ ನಾಯಕರು ಕೋರಿದ್ದಾರೆ. ಪೂರ್ವ ನೋಟಿಸ್ ನೀಡದೆ ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಾರದು, ಡಿಲೀಟ್ ಆದ ಮತದಾರರ ವಿವರಗಳನ್ನು ಬೂತ್ ವಾರು ಪ್ರಕಟಿಸಬೇಕು, ಎಸ್‌ಐಆರ್ ದಾಖಲೆಗಳನ್ನು ಬಹಿರಂಗಪಡಿಸಬೇಕು ಮತ್ತು ಸ್ವತಂತ್ರ ಆಡಿಟ್ ನಡೆಸುವವರೆಗೆ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಚುನಾವಣಾ ಆಯೋಗ ಮತ್ತು ಎಸ್‌ಐಆರ್ ವಿವಾದದ ಕುರಿತು ಮನವಿ ಸಲ್ಲಿಸಲು ರಾಹುಲ್ ಗಾಂಧಿ ಮತ್ತು ಖರ್ಗೆ ಅವರಿಗೆ ಸಿಜೆಐ ಭೇಟಿಗೆ ಸಮಯ ನಿರಾಕರಿಸಿದ ಬಳಿಕ ಅಕ್ಟೋಬರ್ 12 ರಂದು ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್‌ವರೆಗೆ ಮೆರವಣಿಗೆ ನಡೆಸಿದ್ದರು. ಇದರ ವಿರುದ್ಧ ವಕೀಲ ದಿಗಂತ್ ಮಿಶ್ರಾ ಮತ್ತಿತರರು ಅರ್ಜಿ ಸಲ್ಲಿಸಿ ರಾಹುಲ್ ಗಾಂಧಿ, ಖರ್ಗೆ, ಅಖಿಲೇಶ್ ಯಾದವ್ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮಕ್ಕೆ ಆಗ್ರಹಿಸಿದ್ದರು. ಸದ್ಯಕ್ಕೆ ನ್ಯಾಯಾಲಯವು ಸಂಬಂಧಿತ ಅರ್ಜಿಗಳಿಗೆ ನೋಟಿಸ್ ಜಾರಿ ಮಾಡಿದೆಯಾದರೂ, ರಾಜಕೀಯ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆಯ ಯಾವುದೇ ನಿರ್ಣಯವನ್ನು ದಾಖಲಿಸಿಲ್ಲ.

You cannot copy content of this page

Exit mobile version