ರಾಷ್ಟ್ರೀಯ ಪರೀಕ್ಷಾ ಲೋಪಗಳ ವಿರುದ್ಧ ಸಿಜೆಪಿ ಬೃಹತ್ ಪ್ರತಿಭಟನೆ: ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಮುಕ್ತ ಆಹ್ವಾನ

ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪ್ರಮುಖ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಒಕ್ಕೂಟವಾದ ‘ಕೇಂದ್ರೀಯ ಜಂಟಿ ಪ್ರತಿಭಟನಾ ಸಮಿತಿ’ (CJP), ದೇಶಾದ್ಯಂತ ಇರುವ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರನ್ನು ಮುಂಬರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡಿದೆ.

ಇತ್ತೀಚಿನ ರಾಷ್ಟ್ರೀಯ ಪರೀಕ್ಷೆಗಳ ನಿರ್ವಹಣೆಯಲ್ಲಿ ಎದುರಾಗಿರುವ ಸರಣಿ ವೈಫಲ್ಯಗಳು, ಪತ್ರಿಕೆ ಸೋರಿಕೆ ಮತ್ತು ತಾಂತ್ರಿಕ ಲೋಪಗಳನ್ನು ಖಂಡಿಸಿ ಈ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದ್ದು, ಯಾವುದೇ ಜಾತಿ, ಮತ ಅಥವಾ ಸಂಘಟನೆಯ ಭೇದವಿಲ್ಲದೆ ಯಾರು ಬೇಕಾದರೂ ಈ ಚಳವಳಿಯಲ್ಲಿ ಭಾಗವಹಿಸಬಹುದು ಎಂದು ಸಮಿತಿ ಸ್ಪಷ್ಟಪಡಿಸಿದೆ.

​ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಾದ ನೀಟ್ (NEET) ಮತ್ತು ಜಿಇಇ ಅಡ್ವಾನ್ಸ್‌ಡ್ (JEE Advanced) ಪರೀಕ್ಷೆಗಳಲ್ಲಿನ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ದಂಧೆ ಹಾಗೂ ಲಕ್ಷಾಂತರ ಅಭ್ಯರ್ಥಿಗಳ ಸೂಕ್ಷ್ಮ ದತ್ತಾಂಶಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿರುವ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಸಮಗ್ರ ಮತ್ತು ಸ್ವತಂತ್ರ ತನಿಖೆಯಾಗಬೇಕು ಎಂದು ಸಮಿತಿ ಒತ್ತಾಯಿಸಿದೆ.

ಪರೀಕ್ಷೆಗಳನ್ನು ನಡೆಸುವಲ್ಲಿ ಸರಣಿ ನಿರ್ಲಕ್ಷ್ಯ ಹಾಗೂ ಭದ್ರತಾ ಲೋಪ ಎಸಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಉನ್ನತ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

​ಸೈಬರ್ ಭದ್ರತಾ ಲೋಪಗಳಿಂದಾಗಿ ಖಾಸಗಿ ವಿವರಗಳು ಬಹಿರಂಗಗೊಂಡು ಮಾನಸಿಕ ಆತಂಕ ಎದುರಿಸುತ್ತಿರುವ ದೇಶದ ಲಕ್ಷಾಂತರ ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಸಿಗಬೇಕು ಮತ್ತು ಪಾರದರ್ಶಕ ಪರಿಹಾರವನ್ನು ಒದಗಿಸಬೇಕು ಎಂದು ಸಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಮುಂಬರುವ ದಿನಗಳಲ್ಲಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಂತ ಹಂತವಾಗಿ ಶಾಂತಿಯುತ ಧರಣಿ ಮತ್ತು ಪ್ರತಿಭಟನಾ ರ್‍ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿ ಸಮೂಹದ ಭವಿಷ್ಯವನ್ನು ರಕ್ಷಿಸಲು ಯುವ ಪೀಳಿಗೆಯು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು